ಮತ ಕಳ್ಳತನ ಆರೋಪ: ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದ ಪ್ರತಿಭಟನೆಗೆ ಸ್ಥಳ ನಿಗದಿಯೇ ದೊಡ್ಡ ತಲೆನೋವು
ಕಳೆದ ಲೋಕಸಭೆ ಚುನಾವಣೆ ವೇಳೆ ಬೆಂಗಳೂರಿನ ಮಹದೇವಪುರ, ರಾಜರಾಜೇಶ್ವರಿನಗರ ಸೇರಿ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬೃಹತ್ ಹೋರಾಟಕ್ಕೆ ಸಜ್ಜಾಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಆಗಸ್ಟ್ 5ರಂದು ಬೆಂಗಳೂರಿನಲ್ಲಿ ಭಾರಿ ಪ್ರತಿಭಟನೆಗೆ ತೀರ್ಮಾನಿಸಲಾಗಿದೆ. ಆದರೆ, ಈ ಪ್ರತಿಭಟನೆಗೆ ಸ್ಥಳ ಆಯ್ಕೆ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇಂದು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಬೆಂಗಳೂರಿಗೆ ಬರಲಿದ್ದಾರೆ.

ಬೆಂಗಳೂರು, ಜುಲೈ 31: ಲೋಕಸಭೆ ಚುನಾವಣೆಯಲ್ಲಿ ಮತಕಳ್ಳತನ ಮಾಡಲಾಗಿದೆ ಎಂಬ ಕಾಂಗ್ರೆಸ್ (Congress) ಆರೋಪ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣ ಕಾಣಿಸುತ್ತಿದೆ. ಈ ವಿಚಾರವಾಗಿ ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟನೆ ನೀಡಿದ್ದರೂ ಕಾಂಗ್ರೆಸ್ ಪಕ್ಷವು ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಸಲು ಸಜ್ಜಾಗಿದೆ. ಆಗಸ್ಟ್ 5 ರಂದು ಬೆಂಗಳೂರಿನಲ್ಲಿ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಆದರೆ, ಪ್ರತಿಭಟನೆಗೆ ಸ್ಥಳ ನಿಗದಿಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ವಿಚಾರವಾಗಿ ಚರ್ಚಿಸಲು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಇಂದು ಮತ್ತೆ ಬೆಂಗಳೂರಿಗೆ ಬರಲಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಪ್ರತಿಭಟನೆ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಬುಧವಾರ ಪೂರ್ವ ಸಿದ್ಧತಾ ಸಭೆ ನಡೆಸಿದರು. ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿವರೆಗೆ ಪಾದಯಾತ್ರೆಗೆ ಚಿಂತನೆ ನಡೆಸಲಾಗಿದೆ. ಆದರೆ, ಮಹದೇವಪುರ ಅಥವಾ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಬೇಡ ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಜನ ಸೇರುವ ಹಿನ್ನೆಲೆ ಅರಮನೆ ಮೈದಾನ ಅಥವಾ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪ್ರತಿಭಟನೆಗೆ ಸಲಹೆ ನೀಡಲಾಗಿದೆ. ಇಂದು ರಾಜ್ಯಕ್ಕೆ ಆಗಮಿಸಲಿರುವ ರಣದೀಪ್ ಸುರ್ಜೇವಾಲ ಜೊತೆ ಚರ್ಚಿಸಿ ಪ್ರತಿಭಟನಾ ಸ್ಥಳದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
ಡಿಕೆ ಸುರೇಶ್ ಸೋಲಿಗೆ ಕಾರಣವಾದ ಕ್ಷೇತ್ರಗಳ ಬಗ್ಗೆಯೂ ಸಭೆಯಲ್ಲಿ ಡಿಕೆ ಶಿವಕುಮಾರ್ ಪ್ರಸ್ತಾಪಿಸಿದ್ದಾರೆ. ರಾಜರಾಜೇಶ್ವರಿನಗರದಲ್ಲಿ ಎಷ್ಟೆಲ್ಲಾ ವೋಟರ್ ಐಡಿ ಅಕ್ರಮ ಆಗಿದೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ, ಕನಕಪುರದಲ್ಲೂ ಆಗಿತ್ತು ಎಂದು ಮುಖಂಡರೊಬ್ಬರು ಪ್ರಸ್ತಾಪಿಸಿದ್ದಕ್ಕೆ, ‘ಅದನ್ನು ನಾನು ಮ್ಯಾನೇಜ್ ಮಾಡ್ತೇನೆ ಬಿಡಿ’ ಎಂದಿದ್ದರು ಎನ್ನಲಾಗಿದೆ.
ಮತ್ತೊಂದೆಡೆ, ರಾಹುಲ್ ಗಾಂಧಿ ಆರೋಪಕ್ಕೆ ಅನೇಕ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ. ಬಹಳ ಕಡೆ ಚುನಾವಣಾ ಅಕ್ರಮಗಳು ನಡೆದಿವೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ: ಚುನಾವಣೆಯಲ್ಲಿ ಅಕ್ರಮ; ರಾಹುಲ್ ಗಾಂಧಿ ನೇತೃತ್ವದಲ್ಲಿ ಆ. 5ರಂದು ಪ್ರತಿಭಟನೆ: ಡಿಕೆ ಶಿವಕುಮಾರ್
ರಾಹುಲ್ ಪ್ರತಿಭಟನೆಗೆ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ಕಪಟ ನಾಟಕ ಶುರುಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕಿಸಿದರೆ, ಯಾವ ಮುಖ ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಾರೆ ಎಂದು ಆರ್ ಅಶೋಕ್ ಟೀಕಿಸಿದ್ದಾರೆ.
ಒಟ್ಟಿನಲ್ಲಿ, ಇವಿಎಂ ವಿರುದ್ಧ ಆರೋಪ ಮಾಡಿದ್ದ ರಾಹುಲ್ ಗಾಂಧಿ ಇದೀಗ ಚುನಾವಣಾ ಆಯೋಗದ ವಿರುದ್ದವೇ ಸಮರಸಾರಲು ಮುಂದಾಗಿದ್ದಾರೆ. ಅದಕ್ಕೆ ಕರ್ನಾಟಕವನ್ನೇ ಹೋರಾಟದ ಅಖಾಡವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.




