ರಾಜಕೀಯ ಪ್ರವೇಶಕ್ಕೆ ಸಜ್ಜಾದ ಕುಖ್ಯಾತ ರೌಡಿ ಸೈಲೆಂಟ್ ಸುನೀಲ: ಪಾತಕ ಲೋಕದಲ್ಲಿ ಹೀಗಿದೆ ಇವನ ಹೆಜ್ಜೆಗುರುತು

ಪೊಲೀಸರು ಕೇಳುವ ಪ್ರತಿ ಪ್ರಶ್ನೆಗೂ ಸೈಲೆಂಟ್ ಆಗಿಯೇ ಒಂದು ಪದದಲ್ಲಿ ಮಾತ್ರ ಉತ್ತರ ಹೇಳುತ್ತಿದ್ದನಂತೆ. ಅದಕ್ಕೆ ಇವನಿಗೆ ಸುನೀಲಾ ಅಲಿಯಾಸ್ ಸೈಲೆಂಟ್ ಸುನೀಲಾ ಎನ್ನುವ ಹೆಸರು ಬಂತು.

ರಾಜಕೀಯ ಪ್ರವೇಶಕ್ಕೆ ಸಜ್ಜಾದ ಕುಖ್ಯಾತ ರೌಡಿ ಸೈಲೆಂಟ್ ಸುನೀಲ: ಪಾತಕ ಲೋಕದಲ್ಲಿ ಹೀಗಿದೆ ಇವನ ಹೆಜ್ಜೆಗುರುತು
ಸೈಲೆಂಟ್ ಸುನೀಲ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 29, 2022 | 3:20 PM

ಬೆಂಗಳೂರು: ಆತನ ಹೆಸರು ಕೇಳಿದರೆ ಬೆಂಗಳೂರಿನ ಭೂಗತ ಜಗತ್ತು ಒಂದು ಕ್ಷಣ ಕಣ್ಣು ತಿರುಗಿಸಿ ನೋಡುತ್ತೆ. ನಗರದ ಗಲ್ಲಿಗಲ್ಲಿಯಲ್ಲೂ ಆತನ ಹೆಸರು ಚಿರಪರಿಚಿತ. 2004ರಲ್ಲಿ ನಡೆದ ಒಂದು ಕೊಲೆ ಬೆಂಗಳೂರಿನ ಭೂಗತ ಲೋಕದಲ್ಲಿ ಆತನ ಹೆಸರನ್ನು ಒಂದು ಹಚ್ಚೆಯಾಗಿ ಉಳಿಸಿದೆ. ಬಳಿಕ ನಡೆದಿದ್ದೆಲ್ಲಾ ರೌಡಿಸಂನ ರಕ್ತದೋಕುಳಿಯ ಚರಿತ್ರೆ. ಬೆಂಗಳೂರು ಭೂಗತ ಲೋಕದಲ್ಲಿ ಸೈಲೆಂಟ್ ಸುನೀಲ (Silent Sunila) ಎಂದೇ ಚಿರಪರಿಚಿತನಾಗಿದ್ದಾನೆ ರೌಡಿಶೀಟರ್​ ಸುನೀಲ್ ಕುಮಾರ್ ಕೆ. ಕೃಷ್ಣಪ್ಪ ಹಾಗೂ ಲೀಲಾ ದಂಪತಿಗಳ ಮೂವರು ಮಕ್ಕಳಲ್ಲಿ ಈತ‌ ಹಿರೀಮಗ. ಜನವರಿ 6, 1981ರಲ್ಲಿ ರಾಜಾಜಿನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಈತನ ತಂದೆ ವೃತ್ತಿಯಲ್ಲಿ ಕಾರು ಚಾಲಕ, ತಾಯಿ ಮನೆಗೆಲಸ ಮಾಡುತಿದ್ದರು. ಎಸ್​ಎಸ್​ಎಲ್​ಸಿ ಓದುತ್ತಿರುವಾಗ ಈತನಿಗೆ ಪಾರಿವಾಳ ಹಾರಿಸುವ, ಕ್ರಿಕೆಟ್ ಆಡುವ ಹುಚ್ಚು ಇತ್ತು. ಕ್ರಿಕೆಟ್ ವಿಚಾರವಾಗಿ ದೊಡ್ಡವರೊಂದಿಗೆ ಜಗಳಗಳಾಗುತ್ತಿದ್ದವು. ವಿಕೆಟ್​ನಲ್ಲಿ ಹಲ್ಲೆ ಮಾಡಿದ್ದಕ್ಕಾಗಿ ಜೈಲು ಸೇರಿದ್ದ ಈತ, 1996ರಲ್ಲಿ ಗೆಳೆಯರ ಜೊತೆ ಸೇರಿಕೊಂಡು ಹೆಡ್ ಕಾನ್​ಸ್ಟೆಬಲ್ ಶೆಟ್​ಕಾಳಪ್ಪ ಎನ್ನುವವರನ್ನು ಹತ್ಯೆ ಮಾಡಿದ್ದ. ಜೈಲು ಸೇರಿದ ಈತನಿಗೆ ಜೊತೆಯಾದವರು ನಂತರದಲ್ಲಿ ಭೂಗತ ಜಗತ್ತಿನ ಎಂಟ್ರಿಗೆ ದಾರಿ ಮಾಡಿಕೊಟ್ಟರು.

ವರದಿ: ಎಚ್​.ವಿ.ಕಿರಣ್, ಪ್ರಜ್ವಲ್, ಜಗದೀಶ್

ಆ ಬಳಿಕ 2004ರಲ್ಲಿ ನಡೆದ ಆ ಕೊಲೆ ಈತನ ಬದುಕಿನಲ್ಲೇ ರೌಡಿಸಂ ಅನ್ನೊ ಇತಿಹಾಸಕ್ಕೆ ಮುನ್ನುಡಿ ಹಾಡಿತ್ತು. ಈತ ಪೊಲೀಸರು ಕೇಳುವ ಪ್ರತಿ ಪ್ರಶ್ನೆಗೂ ಸೈಲೆಂಟ್ ಆಗಿಯೇ ಒಂದು ಪದದಲ್ಲಿ ಮಾತ್ರ ಉತ್ತರ ಹೇಳುತ್ತಿದ್ದನಂತೆ. ಅದಕ್ಕೆ ಇವನಿಗೆ ಸುನೀಲಾ ಅಲಿಯಾಸ್ ಸೈಲೆಂಟ್ ಸುನೀಲಾ ಎನ್ನುವ ಹೆಸರು ಬಂತು. ಪೊಲೀಸ್ ಸಿಬ್ಬಂದಿ ಶೆಟ್ಟಾಳಪ್ಪ ಕೊಲೆ ಬಳಿಕ ಈತನ ವಿರುದ್ಧ ಕೊಲೆ ಯತ್ನ ಪ್ರಕರಣಗಳು ನಗರದಲ್ಲಿ ಶುರುವಾಗಿತ್ತು. ಆತನ ಜೊತೆಗಿದ್ದವರ ದ್ವೇಷ ಹಾಗೂ ಇತರರ ಕಿಚ್ಚಿಗೆ ಲಾಂಗ್ ಮಚ್ಚುಗಳ ಕಿರಿಕ್ ಶುರುವಾಗಿತ್ತು. ಇದೆಲ್ಲದರ ನಡುವೆ 2001ರಲ್ಲಿ ವಿಜಯನಗರದ ವೀರೇಶ್ ಥಿಯೇಟರ್ ಬಳಿ ನಡೆದ ಬೈಲು ರವಿ ಕೊಲೆ ಕೇಸ್​ನಲ್ಲಿಯೂ ಸೈಲೆಂಟ್ ಸುನೀಲನ ಹೆಸರು ಸೇರಿತ್ತು. ಈ ಕೇಸ್​ನಲ್ಲಿ ಸುನೀಲ ಸೈಲೆಂಟ್ ಆಗಿ ನಾಪತ್ತೆಯಾಗಿದ್ದ. ಆದರೆ ನಂತರ ಒಂಟೆ ರೋಹಿತನ ಕೇಸ್​ನಲ್ಲಿ ಸಿಕ್ಕಿಹಾಕಿಕೊಂಡ.

ಆ ಬಳಿಕ ಬೈಲು ರವಿ ಕೇಸ್​ನಲ್ಲಿ ವಿಜಯನಗರ ಪೊಲೀಸರು ಸೈಲೆಂಟ್ ಸುನೀಲನನ್ನು ಕಸ್ಟಡಿಗೆ ಪಡೆದುಕೊಂಡಿದ್ದರು. ಬಳಿಕ ಜೈಲು ಸೇರಿದ್ದ ಆತ ಭೂಗತ ಲೋಕದ ಹೊಸ ರಕ್ತದೊಕುಳಿಗೆ ಪ್ರವೇಶ ಪಡೆದ. ಅದು 2004ರ ನವೆಂಬರ್​ನಲ್ಲಿ ಚಾಲುಕ್ಯ ಸರ್ಕಲ್​ನಲ್ಲಿ ಬೆಕ್ಕಿನಕಣ್ಣು ರಾಜೇಂದ್ರನ ಹತ್ಯೆಯಾದ ನಂತರ ಸುನೀಲ ತನ್ನ ಗ್ಯಾಂಗ್​ನ ಒಂಟೆ ರೋಹಿತ ಸೇರಿದಂತೆ ನಾಲ್ವರ ಜೊತೆಗೂಡಿ ಹತ್ಯೆ ಮಾಡಿದ್ದ. ಬಳಿಕ ಈ ಕೇಸ್​ನಲ್ಲಿ ಅರೆಸ್ಟ್ ಆದ ಈತ 2007ರವರೆಗೂ ಜೈಲಿನಲ್ಲಿದ್ದ. ಜೈಲಿನಿಂದ ಹೊರಗೆ ಬಂದ ನಂತರ ಬಡ್ಡಿ ವ್ಯವಹಾರ, ವಿಡಿಯೊಗೇಮ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡ.

ಮೆಜೆಸ್ಟಿಕ್, ಸಿಟಿ ಮಾರ್ಕೆಟ್ ಸೇರಿದಂತೆ ಹಲವೆಡೆ ಬಡ್ಡಿ ವ್ಯವಹಾರ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಎಂಟ್ರಿ ಕೊಟ್ಟ ಸುನೀಲ 2009ರಲ್ಲಿ ಇದೇ ರಿಯಲ್ ಎಸ್ಟೇಟ್ ಹಾಗೂ ಗ್ಯಾಂಗ್​ವಾರ್​ಗೆ ಸಂಬಂಧಿಸಿದಂತೆ ಗೆಡ್ಡೆನಾಗ, ಕೊರಂಗು ಸೇರಿದಂತೆ ತನ್ನ ಪಟಾಲಂ ಜೊತೆ ಯಲಹಂಕ ಉಪನಗರದ ಜಿಮ್ ಒಂದರಲ್ಲಿ ಬುಲೆಟ್ ರವಿ ಹಾಗೂ ಆತನ ಸಹಚರರ ಹತ್ಯೆ ಮಾಡಿ ಪರಾರಿಯಾಗಿದ್ದ. ಬಳಿಕ ಅದೇ ವರ್ಷದಲ್ಲಿ ಹೆಣ್ಣೂರಿನಲ್ಲಿ ಮತ್ತೊಂದು ಡಬಲ್ ಮರ್ಡರ್ ಕೇಸ್ ಪ್ರಕರಣದಲ್ಲಿ ಇವನ ಹೆಸರು ಕೇಳಿಬಂದಿತ್ತು. 2010ರಲ್ಲಿ ಪೊಲೀಸರು ಬಂಧಿಸಿದ್ದರು. 2012ರಲ್ಲಿ ಎಲೆಕ್ಟ್ರಾನಿಕ್ ಸಿಟಿ ರೌಡಿ ರುದ್ರನ ಕೊಲೆ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿತ್ತು. ನಂತರ ಸುನೀಲನ ವಿರುದ್ಧ 2017ರವರೆಗೂ ಯಾವುದೇ ಕೇಸ್ ದಾಖಲಾಗಿರಲಿಲ್ಲ.

2017ರಲ್ಲಿ ಟಾಟಾ ರಮೇಶ್ ಎಂಬಾತನಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಅಗ್ನಿ ಶ್ರೀಧರ್ ಜೊತೆ ಸೈಲೆಂಟ್ ಸುನೀಲನ ಹೆಸರು ಸೇರಿಕೊಂಡಿತ್ತು. ಆ ಪ್ರಕರಣದಲ್ಲಿ ಅಗ್ನಿ ಶ್ರೀಧರ್, ಒಂಟೆ ರೋಹಿತ, ಬಚ್ಚನ್ ಸಹ ಆರೋಪಿಗಳಾಗಿದ್ದಾರೆ. ಬಳಿಕ ಇದೇ ವರ್ಷದಲ್ಲಿ ಯಲಹಂಕ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಕೇಸ್ ದಾಖಲಾಗಿದ್ದು, ಆ ಸಂಬಂಧ ಕೊಕಾ ಅಡಿ ಸುನೀಲ ಹಾಗೂ ಒಂಟೆ ರೊಹಿತ ಸೇರಿ 16 ಸಹಚರರನ್ನು ಬಂಧಿಸಲಾಗಿತ್ತು. ಅಸಲಿಗೆ ಸೈಲೆಂಟ್ ಸುನೀಲನ ಮೇಲೆ 1996ರಿಂದ ಈವರೆಗೆ 4 ಕೊಲೆ ಯತ್ನ, 6 ಕೊಲೆ, 2 ಡಬಲ್ ಮರ್ಡರ್ ಸಹಿತ ಒಟ್ಟು 17 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 16 ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಗೊಂಡಿವೆ. ಒಂದು ಪ್ರಕರಣ ಮಾತ್ರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಅದಕ್ಕೂ ಸಹ ಕೊರ್ಟ್ ಸ್ಟೇ ನೀಡಿದೆ. ಅಧಿಕೃತವಾಗಿ ಹೇಳಬೇಕೆಂದರೆ ಸೈಲೆಂಟ್ ಸುನೀಲನ ವಿರುದ್ಧ ಪ್ರಸ್ತುತವಾಗಿ ಯಾವುದೇ ಪ್ರಕರಣಗಳಿಲ್ಲ.

ಸುನೀಲನಿಗೆ ಒಬ್ಬ ತಮ್ಮ ಹಾಗೂ ತಂಗಿ ಇದ್ದಾರೆ. ತಮ್ಮ ಖಾಸಗಿ ಕಂಪನಿಯನ್ನು ಕೆಲಸ ಮಾಡುತ್ತಿದ್ದಾನೆ. ಸೌಮ್ಯಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ರೌಡಿ ಜಗತ್ತಿನ ಜೊತೆ ಜೊತೆಗೆ ಕುಟುಂಬಿಕ ಜೀವನ ಆರಂಭಿಸಿದ್ದ ಈತ ಈಗ ರೌಟಿ ಚಟುವಟಿಕೆಗಳನ್ನು ಬಿಟ್ಟಿದ್ದಾನೆ ಎನ್ನಲಾಗಿದೆ. ಆ ಮೂಲಕ ರಾಜಕೀಯಕ್ಕೆ ಪ್ರವೇಶಿಸುವ ಲೆಕ್ಕಾಚಾರದಲ್ಲಿದ್ದಾನೆ.

ಈಗೇಕೆ ರಾಜಕೀಯಕ್ಕೆ ಸೈಲೆಂಟ್ ಸುನೀಲ?

ರೌಡಿಸಂ ಹಾಗೂ ರಾಜಕಾರಣ ಯಾವಾಗಲೂ ಜೊತೆಜೊತೆಗೆ ಹೆಜ್ಜೆ ಹಾಕುತ್ತವೆ. ರಾಜಕೀಯ ತೆರೆಯ ಮುಂದಿನ ಕೆಲಸ ಮಾಡಿದರೆ, ರೌಡಿಸಂ ತೆರೆಯ ಹಿಂದಿನ ಕೆಲಸ ಮಾಡುತ್ತದೆ. ರೌಡಿಸಂ ಹಿನ್ನೆಲೆಯಿರುವ ಸೋಕಾಲ್ಡ್ ಡಾನ್​ಗಳು ಈಗ ರಾಜಕೀಯಕ್ಕೆ ಬರಲು ಮುಂದಾಗಿದ್ದಾರೆ. ಇಂಥವರ ಪೈಕಿ ಸೈಲೆಂಟ್ ಸುನೀಲ ಸಹ ಒಬ್ಬ.

ಒಂದು ಕಾಲದ ಗೂಂಡಾ, ರೌಡಿಶೀಟರ್ ಹಾಗೂ ಬೆಂಗಳೂರಿನಲ್ಲಿ ಹವಾ ಇಟ್ಟಿದ್ದ ಸೈಲೆಂಟ್ ಸುನೀಲ ಈಗ ಸೈಲೆಂಟಾಗಿ ರೌಡಿ ಪಟ್ಟದಿಂದ ರಾಜಕೀಯ ಪುಢಾರಿ ಪಟ್ಟಕ್ಕೆ ಏರಿ ಕೂರಲು ಸಜ್ಜಾಗಿ ನಿಂತಿದ್ದಾನೆ. ಅದಕ್ಕೆ ಸಾಕ್ಷಿ ನಿನ್ನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮ. ಸದ್ಯ ಚಾಮರಾಜಪೇಟೆಯಲ್ಲಿ ಕಾಂಗ್ರೆಸ್​ನ ಪ್ರಭಾವಿ ಶಾಸಕ ಜಮೀರ್ ಎದುರಿಗೆ ಭವಿಷ್ಯ ಕಟ್ಟಿಕೊಳ್ಳಲು ಸೈಲೆಂಟಾಗಿ ಸುನೀಲ ಸ್ಕೆಚ್ ಹಾಕಿದ್ದಾನೆ ಎನ್ನಲಾಗಿದೆ. ಇದು ಬೆಂಗಳೂರಿನ ಮಟ್ಟಿಗೆ ಭಾರಿ ಸಂಚಲನದ ಜೊತೆಗೆ ವಿವಾದವನ್ನೂ ಸೃಷ್ಟಿಸಿದೆ. ಸೈಲೆಂಟ್ ಸುನೀಲನ ಜೊತೆ ಪೋಸ್ ಕೊಟ್ಟರುವ ಬಿಜೆಪಿ ನಾಯಕರೆಂದರೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್, ಬೆಂಗಳೂರು ಕೇಂದ್ರ ಹಾಗು ದಕ್ಷಿಣ ಕ್ಷೇತ್ರದ ಸಂಸದರಾದ ಪಿ.ಸಿ.ಮೋಹನ್ ಮತ್ತು ತೇಜಸ್ವಿ ಸೂರ್ಯ. ಈ ಮೂವರು ನಾಯಕರು ಸೈಲೆಂಟ್ ಸುನೀಲನ ಜೊತೆಗೆ ವೇದಿಕೆ ಹಂಚಿಕೊಂಡು ಕೊಂಡಾಡಿರೋದು ಈಗ ಸೈಲೆಂಟ್ ರಾಜಕೀಯ ಏಂಟ್ರಿ ಅಗ್ತಿರೋದಕ್ಕೆ ಸಾಕ್ಷಿ ಅಗಿದೆ. ಜೊತೆಗೆ ರೌಡಿಸಂಗೂ ರಾಜಕೀಯಕ್ಕೂ ಇರುವ ಸಂಬಂಧ ಎಷ್ಟು ಗಟ್ಟಿಯಾಗಿದೆ ಎನ್ನುವುದು ಈ ಕಾರ್ಯಕ್ರಮದಲ್ಲಿ ಸಾಬೀತಾಗಿದೆ.

ಕಣ್ಣೆದುರಲ್ಲಿ ರೌಡಿ ಶೀಟರ್ ಇದ್ದರು ಕೈ ಕಟ್ಟಿ ನಿಂತಿದ್ದ ಖಾಕಿ

ಚಾಮರಾಜಪೇಟೆಯಲ್ಲಿ ನಡೆದ ರಕ್ತದಾನ ಶಿಭಿರಕ್ಕೆ ರಾಜಕೀಯ ನಾಯಕರು ಹೇಗೆ ಬಂದಿದ್ದರೊ ಹಾಗೆಯೇ ಅಲ್ಲಿಗೆ ಭದ್ರತೆ ನೀಡುವುದಕ್ಕೆ ಪೊಲೀಸರು ಹೋಗಿದ್ದರು. ಅಲ್ಲಿ ರೌಡಿಶೀಟರ್ ಒಬ್ಬ ರಾಜಾರೋಷವಾಗಿ ಕಾರ್ಯಕ್ರಮ ಮಾಡಿ ಸುತ್ತಲು ಪಟಾಲಂ ಹಾಕಿಕೊಂಡು ತಿರುಗಾಡುತ್ತಿದ್ದಾಗ ಪೊಲೀಸರು ಸುಮ್ಮನಿದ್ದುದು ಸಾರ್ವಜನಿಕರ ಕಣ್ಣಲ್ಲಿ ಆಶ್ಚರ್ಯ ಹಾಗೂ ಪ್ರಶ್ನೆಗಳನ್ನು ಹುಟ್ಟುಹಾಕಿತು. ಸಣ್ಣಪುಟ್ಟ ರೌಡಿಗಳನ್ನು ಹಿಡದು ಒದ್ದು ಒಳಗೆ ಹಾಕುವ ಪೊಲೀಸರು ಸೈಲೆಂಟ್ ಸುನೀಲನಂಥವರು ಎಂಪಿ, ಎಂಎಲ್​ಎಗಳ ಜೊತೆಗೆ ವೇದಿಕೆ ಹಂಚಿಕೊಂಡ ತಕ್ಷಣ ಸುಮ್ಮನಾಗಿದ್ದು ಆಕ್ಷೇಪಕ್ಕೆ ಕಾರಣವಾಗಿದೆ. ಭಾವಿ ರಾಜಕಾರಿಣಿಯನ್ನು ಮುಟ್ಟುವುದ ಬೇಡ ಎಂಬ ನಿಲುವಿಗೆ ಪೊಲೀಸರು ಬಂದಿರಬಹುದು ಎಂದು ಹೇಳಲಾಗುತ್ತಿದೆ.

ರಾಜಕೀಯಕ್ಕೆ ಬರಲು ತಯಾರಿ

ಸೈಲೆಂಟ್ ಸುನೀಲಾ ಈಗ ರಾಜಕೀಯಕ್ಕೆ ಬರಲು ತಯಾರಿ ನಡೆಸುತ್ತಿದ್ದಾನೆ. ಇದೇ ಕಾರಣಕ್ಕೆ ಸುತ್ತಲು ರೌಡಿಗಳನ್ನು ಹಾಕಿಕೊಂಡು ತಿರುಗುತಿದ್ದವನು ಈಗ ಎಂಎಲ್ಎ, ಎಂಪಿಗಳೊಂದಿಗೆ ತಿರುಗುತ್ತಿದ್ದಾನೆ. ತಾನೊಬ್ಬ ರೌಡಿ ಎನ್ನುವ ಪಟ್ಟ ಹೊಂದಿದ್ದರೆ ಪಟ್ಟಿ ಹೊಂದಿದ್ರೆ ಸಮಾಜದಲ್ಲಿ ಕೊನೆಯತನಕವೂ ರೌಡಿಯಾಗಿಯೇ ಇರಬೇಕಾಗುತ್ತೆ. ಅದರೆ ಅದೇ ರೌಡಿ ಎನ್ನುವ ಹಣೆಪಟ್ಟಿಯ ಬದಲು ರಾಜಕೀಯ ನಾಯಕ ಎಂದು ಬದಲಾದರೆ ಯಾವುದೇ ಆತಂಕ ಇರುವುದಿಲ್ಲ ಎನ್ನುವ ನಿಲುವಿಗೆ ಬಂದಿದ್ದಾನೆ.

ಹೀಗಾಗಿಯೇ 1996ರಲ್ಲಿ ಒಂದು ಕೊಲೆ ಹಾಗೂ ಕೊಲೆ ಯತ್ನದ ಕೇಸ್​ ಹೊತ್ತು ಪಾತಕಲೋಕದ ಪ್ರವೇಶ ಪಡೆದ ಸುನೀಲ, ಬೆಕ್ಕಿನ ಕಣ್ಣು ರಾಜೇಂದ್ರನನ್ನು ಕೊಲೆ ಮಾಡಿದ ನಂತರ ತಾನೊಬ್ಬ ಡಾನ್ ಎನ್ನುವ ಹಂತಕ್ಕೆ ಬೆಳೆದುಬಿಟ್ಟಿದ್ದ. ಆರ್​ಎಸ್​ಎಸ್​ನ ಪರಿವಾರ ಸಂಘಟನೆಯಾಗಿರುವ ರಾಷ್ಟ್ರೋತ್ಥಾನದ ಅಡಿಯಲ್ಲಿ ಪುನೀತ್ ರಾಜ್​ಕುಮಾರ್ ಅವರ ಹೆಸರಿನಲ್ಲಿ ಸುನೀಲ ರಕ್ತದಾನ ಶಿಬಿರ ಆಯೋಜಿಸಿ ರಾಜಕೀಯ ಸೇರ್ಪಡೆಗೆ ಯತ್ನಿಸುತ್ತಿದ್ದಾನೆ. ಚಾಮರಾಜಪೇಟೆ ಕ್ಷೇತ್ರವನ್ನೇ ಸುನೀಲ ಆರಿಸಿಕೊಂಡಿರುವುದು ಗಮನ ಸೆಳೆದಿದೆ. ಆದರೆ ಖಾಸಗಿಯಾಗಿ ಕೆಲವರೊಂದಿಗೆ ಮಾತನಾಡುವಾಗ, ‘ರಾಜಕೀಯಕ್ಕೆ ಬರಲು ಇನ್ನೂ ಸಮಯವಿದೆ’ ಎಂದು ಹೇಳುತ್ತಿದ್ದಾನೆ.

ವರದಿ: ಎಚ್​.ವಿ.ಕಿರಣ್, ಪ್ರಜ್ವಲ್, ಜಗದೀಶ್

ಇದನ್ನೂ ಓದಿ: ಕಣ್ಮುಚ್ಚಿ ಕುಳಿತಿದೆಯಾ ಪೊಲೀಸ್ ಇಲಾಖೆ: ಸಿಸಿಬಿ ದಾಳಿ ವೇಳೆ ಎಸ್ಕೇಪ್ ಆದ ಎಂದಿದ್ದ ಸೈಲೆಂಟ್ ಸುನೀಲ ಬಹಿರಂಗ ಸಭೆಯಲ್ಲಿ ಭಾಗಿ

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Tue, 29 November 22