ಸಿಎಂ ಆಸೆ ಈಡೇರಲಿಲ್ಲ: ಭುವನೇಶ್ವರಿ ಪ್ರತಿಮೆ ನಿರ್ಮಾಣ ವಿಳಂಬಕ್ಕೆ ಕಾರಣವೇನು ಗೊತ್ತಾ?

ಇಂದು ನಾಡಿನೆಲ್ಲಡೆ ರಾಜೋತ್ಸವ ಸಂಭ್ರಮ ಜೋರಾಗಿದೆ.ಆದ್ರೆ ಅಂದುಕೊಂಡಂತೆ ಆಗಿದ್ದರೆ ಇಂದು ವಿಧಾನಸೌಧದ ಮುಂದೆ ನಾಡದೇವತೆ ಭುವನೇಶ್ವರಿ ದೇವಿ ಪ್ರತಿಮೆ ಅನಾವರಣವಾಗಬೇಕಿತ್ತು.ಆದ್ರೆ ನಿರ್ಮಾಣ ಕಾರ್ಯ ಹೊಣೆಹೊತ್ತಿರೋ ದೆಹಲಿ ಮೂಲದ ಸಂಸ್ಥೆ, ಪ್ರತಿಮೆ ನಿರ್ಮಾಣ ಕಾರ್ಯ ಮುಗಿಸದೇ ಇದ್ದಿದ್ದರಿಂದ ಪ್ರತಿಮೆ ಅನಾವರಣ ಮುಂದಕ್ಕೆ ಹೋಗಿದೆ. ಈ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಸಿಎಂ ಆಸೆ ಈಡೇರಲಿಲ್ಲ: ಭುವನೇಶ್ವರಿ ಪ್ರತಿಮೆ ನಿರ್ಮಾಣ ವಿಳಂಬಕ್ಕೆ ಕಾರಣವೇನು ಗೊತ್ತಾ?
ಭುವನೇಶ್ವರಿ ಪ್ರತಿಮೆ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ರಮೇಶ್ ಬಿ. ಜವಳಗೇರಾ

Updated on: Nov 01, 2024 | 6:16 PM

ಬೆಂಗಳೂರು, (ನವೆಂಬರ್ 01): ರಾಜ್ಯಕ್ಕೆ ಕರ್ನಾಟಕ ಅಂತ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಧಾನಸೌಧದ ಆವರಣದಲ್ಲಿ ನಾಡದೇವಿ ಭುವನೇಶ್ವರಿ ದೇವಿ ಕಂಚಿನ ಪ್ರತಿಮೆ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿತ್ತು. ಕಳೆದ ವರ್ಷವೇ ಸರ್ಕಾರ ಪ್ರತಿಮೆ ನಿರ್ಮಾಣ ಮಾಡೋ ಮಾಹಿತಿ ನೀಡಿತ್ತು. ಕನ್ನಡಿಗರ ಅದಿದೇವತೆಯಾಗಿರೋ ಭುವನೇಶ್ವರಿ ದೇವಿ ಪ್ರತಿಮೆಯನ್ನು ನಿರ್ಮಾಣ ಮಾಡ್ತೇವೆ, ನವೆಂಬರ್ 1 ರಂದು ಅನಾವರಣ ಮಾಡ್ತೇವೆ ಎಂದು ಸಿಎಂ, ಸಚಿವ ಶಿವರಾಜ್ ತಂಗಡಗಿ ಹೇಳಿದ್ದರು. ಬರೋಬ್ಬರಿ 23 ಕೋಟಿ ವೆಚ್ಚದಲ್ಲಿ ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿ 25 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೂಡಾ ನೀಡಿತ್ತು. ಅಂದುಕೊಂಡಂತೆ ಆಗಿದ್ದರೆ ಕನ್ನಡಿಗರ ಹಬ್ಬವಾಗಿರೋ ಇಂದೇ ವಿಧಾನಸೌಧದಲ್ಲಿ ನಾಡದೇವತೆ ಭುವನೇಶ್ವರಿ ದೇವಿ ಪ್ರತಿಮೆ ಅನಾವರಣಗೊಳ್ಳಬೇಕಿತ್ತು. ಆದ್ರೆ 69 ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಭುವನೇಶ್ವರಿ ದೇವಿ ಪ್ರತಿಮೆ ಆನಾವರಣಗೊಳ್ಳಲಿಲ್ಲ. ಇದಕ್ಕೆ ಕಾರಣ ಪ್ರತಿಮೆ ನಿರ್ಮಾಣ ಕಾರ್ಯ ವಿಳಂಭ.

ಹೌದು ವಿಧಾನಸೌಧದಲ್ಲಿ ಮಹಾತ್ಮ ಗಾಂಧಿಯವರ ಮೂರ್ತಿ ನಿರ್ಮಾಣ ಮಾಡಿರೋ ದೆಹಲಿಯ ಸಂಸ್ಥೆ ಗೆ ಭುವನೇಶ್ವರಿ ದೇವಿ ಪ್ರತಿಮೆ ಮಾಡೋ ಗುತ್ತಿಗೆಯನ್ನು ನೀಡಲಾಗಿದೆ. ಆದ್ರೆ ಗುತ್ತಿಗೆ ಪಡೆದ ಸಂಸ್ಥೆ ಇನ್ನು ಪ್ರತಿಮೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿಲ್ಲಾ. ಪ್ರತಿಮೆ ನಿರ್ಮಾಣ ಕಾರ್ಯ ಮುಗಿಯಬೇಕಾದ್ರೆ ಇನ್ನು ಹೆಚ್ಚುಕಡಿಮೆ ತಿಂಗಳ ಸಮಯ ಬೇಕಾಗುತ್ತದೆಯಂತೆ. ಹೀಗಾಗಿ ನವೆಂಬರ್ ಅಂತ್ಯದೊಳಗೆ ಮತ್ತೊಮ್ಮೆ ಕಾರ್ಯಕ್ರಮ ಮಾಡಿ ಪ್ರತಿಮೆ ಅನಾವರಣ ಮಾಡ್ತೇವೆ ಅಂತಿದ್ದಾರೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ.

ಪ್ರತಿಮೆ ನಿರ್ಮಾಣ ವಿಳಂಬಕ್ಕೆ ಕಾರಣವೇನು?

ಇನ್ನು ಪ್ರತಿಮೆ ನಿರ್ಮಾಣ ಕಾರ್ಯ ವಿಳಂಭವಾಗ್ತಿರೋದೇಕೆ ಅನ್ನೋ ಬಗ್ಗೆ ಮಾಹಿತಿ ನೀಡಿರೋ ಸಚಿವ ಶಿವರಾಜ್ ತಂಗಡಗಿ,ಭುವನೇಶ್ವರಿ ಮೂರ್ತಿಯನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಭುವನೇಶ್ವರಿ ದೇವಿಯಸೀರೆ ನೆರಗು, ಮುಖಬಾವ ಸರಿಯಾಗಿ ಕಾಣಬೇಕು. ಕೆಲ ಸೂಕ್ಷ್ಮತೆಗಳನ್ನು ಅಚ್ಚುಕಟ್ಟಾಗಿ ಮಾಡುವ ಕೆಲಸವಿರೋದರಿಂದ ಸ್ವಲ್ಪ ವಿಳಂಭವಾಗಿದೆ.ನವೆಂಬರ್1 ರಂದೆ ಅನಾವರಣ ಮಾಡಬೇಕು ಅಂತ ಅವಸರದಲ್ಲಿ ಪ್ರತಿಮೆ ನಿರ್ಮಾಣ ಮಾಡಿದ್ರೆ,ಸ್ವಲ್ಪ ಹೆಚ್ಚು ಕಡಿಮೆಯಾದರು ಪ್ರತಿಮೆ ಲಕ್ಷಣವಾಗಿರಲ್ಲ. ನೋಡಿದ್ರೆ ಭುವನೇಶ್ವರಿ ಪ್ರತಿಮೆ ಹಾಗೆ ಕಾಣಲ್ಲ. ಅವಸರಲ್ಲಿ ಮಾಡಲು ಹೋದ್ರೆ ಮೂರ್ತಿ ಚೆನ್ನಾಗಿರಲ್ಲ ಎಂದು ನಿರ್ಮಾಣ ಮಾಡ್ತಿರೋರು ಹೇಳಿದ್ದಾರಂತೆ. ಹೀಗಾಗಿ ಪ್ರತಿಮೆ ನಿರ್ಮಾಣ ಕಾರ್ಯ ವಿಳಂಬವಾಗಿದೆ.

ಆದ್ರೆ ಆದಷ್ಟು ಬೇಗನೆ ಈ ಕೆಲಸವಾಗಬೇಕು ಅನ್ನೋ ಉದ್ದೇಶದಿಂದ ಇಬ್ಬರು ಅಧಿಕಾರಿಗಳನ್ನು ಪ್ರತಿಮೆ ತಯಾರಿಕೆ ಕೆಲಸದ ಮೇಲುಸ್ತುವಾರಿ ಮಾಡಲು ನಿಯೋಜಿಸಲಾಗಿದೆ. ನಾನು ಕೂಡಾ ಕಳೆದವಾರ ದೆಹಲಿಗೆ ಹೋಗಿ ಕೆಲಸವನ್ನು ಪರಿಶೀಲನೆ ಮಾಡಿದ್ದೇನೆ ಅಂತಿದ್ದಾರೆ ಸಚಿವ ತಂಗಡಗಿ. ಇನ್ನು ನಿರ್ಮಾಣ ಕಾರ್ಯ ದೆಹಲಿ ಮೂಲದ ಸಂಸ್ಥೆ ಗೆ ನೀಡಿರೋ ಬಗ್ಗೆ ಕೂಡಾ ಚರ್ಚೆ ನಡೆಯುತ್ತಿವೆ. ಆದ್ರೆ ಇದಕ್ಕೂ ಪ್ರತಿಕ್ರಿಯೆ ನೀಡಿರೋ ಸಚಿವ ತಂಗಡಗಿ, ಮೂರ್ತಿ ನಿರ್ಮಾಣ ಮಾಡೋರ ಬಳಿ ದೊಡ್ಡ ಮಟ್ಟದಲ್ಲಿ ಇನ್ಪ್ರಾಸ್ಟ್ರಕ್ಚರ್ ಇರಬೇಕಾಗುತ್ತದೆ. ಹೀಗಾಗಿ ದೆಹಲಿ ಮೂಲದ ಸಂಸ್ಥೆ ಗೆ ನೀಡಲಾಗಿದೆ ವಿನ, ಬೇರೆ ಉದ್ದೇಶವಿಲ್ಲಾ ಅಂತ ಹೇಳಿದ್ದಾರೆ.

ಕನ್ನಡ ರಾಜ್ಯೋತ್ಸವ ದಿನವೇ ಪ್ರತಿಮೆ ಅನಾವರಣಗೊಂಡಿದ್ದರೆ ಕನ್ನಡಿಗರ ಉತ್ಸಾಹ ಇಮ್ಮಡಿಯಾಗುತ್ತಿತ್ತು. ಆದ್ರೆ ಪ್ರತಿಮೆ ನಿರ್ಮಾಣ ವಿಳಂಬದಿಂದ ಇಂದು ಪ್ರತಿಮೆ ಅನಾವರಣವಾಗಿಲ್ಲ. ಆದಷ್ಟು ಬೇಗನೆ ನಾಡದೇವತೆ ಭುವನೇಶ್ವರಿ ದೇವಿ ಪ್ರತಿಮೆ ಅನಾವರಣವಾಗಲಿ. ಪ್ರತಿಮೆ ಚೆನ್ನಾಗಿರಲಿ ಅನ್ನೋದು ಕನ್ನಡಿಗರ ಆಶಯವಾಗಿದೆ.