PM Modi ISRO Visit: ಪ್ರಧಾನಿ ಮೋದಿ ಸ್ವಾಗತಕ್ಕೆ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಹೋಗದ್ದೇಕೆ? ಇಲ್ಲಿದೆ ಕಾರಣ

ಶಿಷ್ಟಾಚಾರದ ಪ್ರಕಾರ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ಥಾವರ್​​ಚಂದ್ ಗೆಹ್ಲೋಟ್​ ತೆರಳಬೇಕಿತ್ತು. ಆದರೆ, ಅಧಿಕಾರಿಗಳಷ್ಟೇ ಮೋದಿ ಅವರನ್ನು ಸ್ವಾಗತಿಸಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಮತ್ತು ರಾಜ್ಯಪಾಲರು ಮೋದಿ ಸ್ವಾಗತಕ್ಕೆ ತೆರಳದ್ದೇಕೆ? ಇದಕ್ಕೆ ಸ್ವತಃ ಮೋದಿ ಅವರೇ ನೀಡಿದ ಕಾರಣ ಇಲ್ಲಿದೆ.

PM Modi ISRO Visit: ಪ್ರಧಾನಿ ಮೋದಿ ಸ್ವಾಗತಕ್ಕೆ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಹೋಗದ್ದೇಕೆ? ಇಲ್ಲಿದೆ ಕಾರಣ
ಪ್ರಧಾನಿ ಮೋದಿ ಸ್ವಾಗತಕ್ಕೆ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಹೋಗದ್ದೇಕೆ? ಇಲ್ಲಿದೆ ಕಾರಣ
Follow us
| Updated By: ಗಣಪತಿ ಶರ್ಮ

Updated on: Aug 26, 2023 | 10:35 AM

ಬೆಂಗಳೂರು, ಆಗಸ್ಟ್ 26: ಚಂದ್ರಯಾನ-3 ರ ಅಮೋಘ ಯಶಸ್ಸಿನ ನಂತರ ಇದೀಗ ಪಿಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಬಂದ ಪ್ರಧಾನಿ  ನರೇಂದ್ರ ಮೋದಿ (Narendra Modi) ವಿಜ್ಞಾನಿಗಳನ್ನು ಅಭಿನಂದಿಸಿ ಹಲವು ಘೋಷಣೆಗಳನ್ನೂ ಮಾಡಿ ನಿರ್ಗಮಿಸಿದರು. ಆದರೆ, ಪ್ರಧಾನಿಯವರು ಹೆಚ್​ಎಎಲ್ ವಿಮಾನ ನಿಲ್ದಾಣಕ್ಕೆ ಬಂದಾಗ ಶಿಷ್ಟಾಚಾರದ ಪ್ರಕಾರ ಅವರನ್ನು ಸ್ವಾಗತಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ಥಾವರ್​​ಚಂದ್ ಗೆಹ್ಲೋಟ್​ ತೆರಳಬೇಕಿತ್ತು. ಆದರೆ, ಅಧಿಕಾರಿಗಳಷ್ಟೇ ಮೋದಿ ಅವರನ್ನು ಸ್ವಾಗತಿಸಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಮತ್ತು ರಾಜ್ಯಪಾಲರು ಮೋದಿ ಸ್ವಾಗತಕ್ಕೆ ತೆರಳದ್ದೇಕೆ? ಇದಕ್ಕೆ ಸ್ವತಃ ಮೋದಿ ಅವರೇ ನೀಡಿದ ಕಾರಣ ಇಲ್ಲಿದೆ.

ಹೆಚ್​ಎಎಲ್​ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಮಾತನಾಡಿದ ಮೋದಿ, ಭಾರತದಲ್ಲಿ ಬೆಳಕು ಹರಿದಿದೆ, ಆ ಬೆಳಕಿನಲ್ಲಿ ಬೆಂಗಳೂರಿಗರ ಮುಖ ನೋಡಿದೆ. ವಿದೇಶದಲ್ಲಿದ್ದಾಗ ಅಲ್ಲಿಂದಲೇ ಬೆಂಗಳೂರಿಗೆ ಬರಲು ನಿರ್ಧರಿಸಿದೆ. ಅದಕ್ಕೆ ಶೀಘ್ರದಲ್ಲೇ ವ್ಯವಸ್ಥೆ ಮಾಡಿದ ಮತ್ತು ಪ್ರೊಟೊಕಾಲ್ ಪಾಲಿಸಿದ (ಶಿಷ್ಟಾಚಾರ) ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ರಾಜ್ಯಪಾಲರಿಗೆ ಧನ್ಯವಾದ ಎಂದು ಮೋದಿ ಹೇಳಿದರು. ಹಾಗಾದರೆ ಶಿಷ್ಟಾಚಾರ ಪಾಲಿಸಿದ ಎಂದು ಅವರು ಹೇಳಿದ್ದು ಯಾವ ಅರ್ಥದಲ್ಲಿ? ಸಿಎಂ ಹಾಗೂ ರಾಜ್ಯಪಾಲರು ಅವರ ಸ್ವಾಗತಕ್ಕೆ ಹೋಗಿದ್ದರಷ್ಟೇ ಹಾಗೆ ಹೇಳಬೇಕಿತ್ತಲ್ಲವೇ ಎಂಬ ಅನುಮಾನ ವ್ಯಕ್ತವಾಗುವುದು ಸಹಜ.

ಇದನ್ನೂ ಓದಿ: National Space Day: ಚಂದ್ರಯಾನ-3 ಯಶಸ್ವಿಯಾದ ದಿನ, ಆಗಸ್ಟ್​ 23 ಇನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ; ಮೋದಿ ಘೋಷಣೆ

ಮೋದಿ ಅವರ ಬೆಂಗಳೂರು ಭೇಟಿ ನಿಗದಿಯಾಗಿದ್ದು ದಿಡೀರ್ ಆಗಿ. ಬೆಂಗಳೂರಿಗೆ ಬೇಟಿ ನೀಡುವ ಬಗ್ಗೆ ಯಾವುದೇ ಪೂರ್ವ ಸೂಚನೆಯೂ ಇರಲಿಲ್ಲ. ಆಗಸ್ಟ್ 23ರಂದು ಯಾವಾಗ ಚಂದ್ರಯಾನ-3 ರ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆಯಿತೋ ಆವಾಗ ಮೋದಿ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಲು ನಿರ್ಧರಿಸಿದರು. ಅವರು ಆಗ ದಕ್ಷಿಣ ಆಫ್ರಿಕಾದ ಜೋಹಾನ್ಸ್​​ಬರ್ಗ್​​​​ನಲ್ಲಿ ಇದ್ದರು. ಅಲ್ಲಿಂದ ಗ್ರೀಕ್​ಗೆ ತೆರಳಿ ಭಾರತಕ್ಕೆ ಮರಳುವವರಿದ್ದರು. ಕೇವಲ 2 ದಿನಗಳಷ್ಟೇ ಇದ್ದುದು. ಅಷ್ಟರಲ್ಲಿ ಬೆಂಗಳೂರಿನಲ್ಲಿ ಪ್ರಧಾನಿ ಭೇಟಿಗೆ ಬೇಕಾದ ಎಲ್ಲ ಸಿದ್ಧತೆ, ಭದ್ರತೆಯ ಏರ್ಪಾಡಾಗಬೇಕು. ಬಹು ದೂರದ ಗ್ರೀಕ್​ನ ಅಥೆನ್ಸ್​ನಿಂದ ಬರುವುದಾದ ಕಾರಣ ನಿಖರವಾಗಿ ಇಂತಿಷ್ಟೇ ಹೊತ್ತಿಗೆ ಬೆಂಗಳೂರಿಗೆ ತಲುಪಬಹುದು ಎಂಬ ಖಚಿತತೆ ಇರಲಿಲ್ಲ. ಇದೇ ಕಾರಣಕ್ಕೆ ತಮ್ಮ ಸ್ವಾಗತಕ್ಕೆ ಮುಖ್ಯಮಂತ್ರಿ, ರಾಜ್ಯಪಾಲರು ಬರುವುದು ಬೇಡ ಎಂದು ಸೂಚನೆ ನೀಡಿದ್ದಾಗಿ ಸ್ವತಃ ಮೋದಿ ಅವರೇ ಬಹಿರಂಗಪಡಿಸಿದ್ದಾರೆ. ಇಷ್ಟೇ ಅಲ್ಲ, ಬಿಜೆಪಿ ನಾಯಕರೇ ಮೋದಿ ಅವರ ಭೇಟಿಗೆ ಕಾತರರಾಗಿ ಏರ್​ಪೋರ್ಟ್​ ಹೊರಭಾಗದಲ್ಲಿ ಕಾದು ಕುಳಿತಿದ್ದರೂ ಪ್ರಧಾನಿ ಮಾತ್ರ ಯಾರನ್ನೂ ಭೇಟಿ ಮಾಡದೆ ನೇರ ವಿಜ್ಞಾನಿಗಳ ಬಳಿ ತೆರಳಿ ಅವರ ಬಳಿಯಷ್ಟೇ ಸಮಾಲೋಚನೆ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ