
ಬೆಂಗಳೂರು, ಜನವರಿ 19: ಕರ್ನಾಟಕದ (Karnataka) ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೀಡಲಾಗುವ ಶೂ ಮತ್ತು ಸಾಕ್ಸ್ ವಿತರಣಾ ಯೋಜನೆಯಲ್ಲಿ ಈ ಬಾರಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ. ಹವಾಮಾನ ವೈಪರೀತ್ಯ ಹಾಗೂ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಕೆಲವು ಜಿಲ್ಲೆಗಳಲ್ಲಿ ಶೂ ಬದಲಿಗೆ ಚಪ್ಪಲಿ (Sandals) ವಿತರಿಸಲು ಶಿಕ್ಷಣ ಇಲಾಖೆ (Education Department) ಚಿಂತನೆ ನಡೆಸಿದೆ. ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ದೀರ್ಘಕಾಲ ಶೂ ಧರಿಸುವುದರಿಂದ ವಿದ್ಯಾರ್ಥಿಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತಿವೆ ಎಂಬ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ, ಪ್ರಾದೇಶಿಕ ಹವಾಮಾನಕ್ಕೆ ತಕ್ಕಂತೆ ಪಾದರಕ್ಷೆಗಳನ್ನು ಒದಗಿಸಲು ಇಲಾಖೆ ಮುಂದಾಗಿದೆ.
ದೀರ್ಘಕಾಲ ಶೂ ಧರಿಸುವುದರಿಂದ ಪಾದಗಳಲ್ಲಿ ಬೆವರು ನಿಂತು ಚರ್ಮದ ಸೋಂಕು (Fungal Infection) ತಗಲುವ ಸಾಧ್ಯತೆ ಇರುತ್ತದೆ. ಅಲ್ಲದೆ ಮಳೆಗಾಲದಲ್ಲಿ ಸಾಕ್ಸ್ ಮತ್ತು ಶೂ ಒದ್ದೆಯಾದರೆ ಒಣಗುವುದು ಕಷ್ಟ. ಇದರಿಂದ ವಾಸನೆ ಬರುವ ಸಾಧ್ಯತೆ ಹೆಚ್ಚು. ಮತ್ತೊಂದೆಡೆ, ಬೇಸಿಗೆಯ ಬಿಸಿಲಿನಲ್ಲಿ ಮತ್ತು ಮಳೆಗಾಲದ ಕೆಸರಿನಲ್ಲಿ ಶೂಗಳಿಗಿಂತ ಚಪ್ಪಲಿ ಅಥವಾ ಸ್ಯಾಂಡಲ್‌ಗಳನ್ನು ಧರಿಸುವುದು ಮಕ್ಕಳಿಗೆ ಹೆಚ್ಚು ಆರಾಮದಾಯಕ ಎಂಬ ಕಾರಣಗಳಿಂದಾಗಿ ಚಪ್ಪಲಿಮ ಕೊಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಈ ಯೋಜನೆಯನ್ನು ಜಾರಿಗೆ ತರುವ ಮೊದಲು, ಯಾವ ಜಿಲ್ಲೆಗಳಲ್ಲಿ ಚಪ್ಪಲಿಗೆ ಹೆಚ್ಚಿನ ಬೇದಿಕೆ ಇದೆ ಎಂಬ ಬಗ್ಗೆ ಮಾಹಿತಿ ಕಲೆಹಾಕಲು ಶಿಕ್ಷಣ ಇಲಾಖೆಯು ಉಪನಿರ್ದೇಶಕರಿಗೆ ಸೂಚನೆ ನೀಡಿದೆ. ವಿಶೇಷವಾಗಿ ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯವು ಈ ಬಗ್ಗೆ ವರದಿ ನೀಡುವಂತೆ ನಿರ್ದೇಶಿಸಿದೆ. ಶೂ ಧರಿಸಲು ಕಷ್ಟವಾಗುವ ಪ್ರದೇಶಗಳ ಜಿಲ್ಲೆಗಳ ಪಟ್ಟಿಯನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ವಿದ್ಯಾರ್ಥಿಗಳಿಗೆ ಶೂ ಬದಲು ಚಪ್ಪಲಿ ನೀಡುವ ಪ್ರಸ್ತಾಪ ಹೊಸದೇನಲ್ಲ. 2015ರಲ್ಲಿಯೂ ಇಂತಹದ್ದೊಂದು ಯೋಜನೆ ರೂಪಿಸಲಾಗಿತ್ತು. ಆದರೆ ವಿವಿಧ ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ಆ ಯೋಜನೆಯನ್ನು ಕೈಬಿಡಲಾಗಿತ್ತು. ಈಗ ಹತ್ತು ವರ್ಷಗಳ ನಂತರ ಮತ್ತೆ ಈ ‘ಚಪ್ಪಲಿ ಭಾಗ್ಯ’ ಸುದ್ದಿಯಲ್ಲಿದೆ.
ಇದನ್ನೂ ಓದಿ: ಪ್ರಶ್ನೆಪತ್ರಿಕೆ ಲೀಕ್ ತಡೆಗೆ ಕಠಿಣ ಕ್ರಮ: ಆರೋಪಿಗಳಷ್ಟೇ ಅಲ್ಲ ಕಾಲೇಜುಗಳೂ ಬ್ಲಾಕ್ ಲಿಸ್ಟ್ಗೆ, ಮಾನ್ಯತೆ, ಅನುದಾನಕ್ಕೂ ಕತ್ತರಿ
ಪ್ರಸ್ತುತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ನೀಡಲಾಗುತ್ತಿದೆ. ಒಂದರಿಂದ 5 ನೇ ತರಗತಿ ವಿದ್ಯಾರ್ಥಿಗೆ ತಲಾ 265 ರೂಪಾಯಿ, 6 ರಿಂದ 8 ನೇ ತರಗತಿ ವಿದ್ಯಾರ್ಥಿಗೆ ತಲಾ 295 ರೂಪಾಯಿ, 9ರಿಂದ 10 ನೇ ತರಗತಿ ವಿದ್ಯಾರ್ಥಿಗೆ ತಲಾ 325 ರೂಪಾಯಿ ನಿಗದಿ ಮಾಡಲಾಗಿದೆ.