ಕೊರೊನಾದಿಂದ ಪತಿ ನಿಧನ; ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣು
ಪತಿ ಕಿರಣ್ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದು ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 11 ತಿಂಗಳ ಹಿಂದಷ್ಟೇ ಕಿರಣ್, ಪೂಜಾ ಮದುವೆಯಾಗಿತ್ತು.
ಮಂಡ್ಯ: ಪತಿಯ ಅಂತ್ಯಕ್ರಿಯೆ ಬಳಿಕ ಪತ್ನಿಯೂ ನೇಣಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿ ನಡೆದಿದೆ. ಇಂದು ಬೆಂಗಳೂರಲ್ಲಿ ಕೊರೊನಾದಿಂದ ಪತಿ ಕಿರಣ್ ಸಾವನ್ನಪ್ಪಿದ್ದರು. ಪತ್ನಿ ಪೂಜಾ ಕೂಡ ಪತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಪತಿ ಕಿರಣ್ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದು ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 11 ತಿಂಗಳ ಹಿಂದಷ್ಟೇ ಕಿರಣ್, ಪೂಜಾ ಮದುವೆಯಾಗಿತ್ತು. ಈ ದುಃಖಕರ ಘಟನೆಯಿಂದಾಗಿ ಕಿರಣ್ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.
ನಿನ್ನೆಯೂ ಕೂಡ ಇಂತಹುದೇ ಒಂದು ಘಟನೆ ರಾಮನಗರ ವ್ಯಾಪ್ತಿಯಲ್ಲಿ ನಡೆದಿತ್ತು. ಕೊರೊನಾದಿಂದ ಪತಿ ಮರಣಿಸಿದ ಸುದ್ದಿ ಕೇಳಿ ಪತ್ನಿ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆ ಕನಕಪುರದ ಬಸವೇಶ್ವರನಗರದಲ್ಲಿ ನಡೆದಿತ್ತು. ಪತಿಯ ಸಾವಿನ ಸುದ್ದಿ ತಿಳಿದು ಮನನೊಂದು ಪತ್ನಿ, 3 ತಿಂಗಳ ಗರ್ಭಿಣಿ ನಂದಿನಿ(28) ಆತ್ಮಹತ್ಯೆ ಮಾಡಿಕೊಂಡಿದ್ದರು.
ಪತಿ ಸತೀಶ್ ಕೊರೊನಾದಿಂದ ಮೈಸೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಸತೀಶ್ ಅಂತ್ಯಸಂಸ್ಕಾರ ಬಳಿಕ ನಂದಿನಿಗೆ ವಿಚಾರ ತಿಳಿಸಲಾಗಿತ್ತು. ಈ ಆಘಾತಕಾರಿ ಸಂಗತಿ ತಿಳಿದು, ಮನನೊಂದು ಪತ್ನಿ ನಂದಿನಿ ನೇಣಿಗೆ ಶರಣಾಗಿದ್ದಾರೆ. ಕನಕಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಕರ್ನಾಟಕ ಕೊರೊನಾ ಸೋಂಕಿತರ ವಿವರ ಕರ್ನಾಟಕ ರಾಜ್ಯದಲ್ಲಿ ಇಂದು ಒಂದೇ ದಿನ 31,183 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 451 ಜನರು ಕೊವಿಡ್ನಿಂದ ಇಂದು ಮೃತಪಟ್ಟಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 8214 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು 200 ಜನರು ನಿಧನರಾಗಿದ್ದಾರೆ. ಇಂದು ಪತ್ತೆಯಾದ ಸೋಂಕಿತರ ಮೂಲಕ ರಾಜ್ಯದಲ್ಲಿ ಈವರೆಗಿನ ಕೊರೊನಾ ಸೋಂಕಿತರ ಸಂಖ್ಯೆ 23,98,925 ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿತರ ಪೈಕಿ 18,91,042 ಜನರು ಕೊವಿಡ್ ಸೋಂಕುಮುಕ್ತರಾಗಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 24,658 ಜನರು ಸಾವನ್ನಪ್ಪಿದ್ದು ಸದ್ಯ 4,83,204 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: Corona Vaccine: ಕೊರೊನಾ ಲಸಿಕೆಯನ್ನು ಕೈಗೆ ಏಕೆ ನೀಡಲಾಗುತ್ತದೆ? ಸೊಂಟಕ್ಕೆ ಏಕಿಲ್ಲ? ಇಲ್ಲಿದೆ ಸಂಪೂರ್ಣ ವಿವರ
Published On - 6:17 pm, Sat, 22 May 21