ಕೊರೊನಾದಿಂದ ಬಚಾವ್ ಆದ್ರೆ ಸಾಕಪ್ಪಾ ಅಂತಾ ಎಲ್ರೂ ಅಂದುಕೊಳ್ತಿದ್ರೆ, ಇಲ್ಲೊಬ್ಬ ಐನಾತಿ ಲೇಡಿ ಸ್ಯಾನಿಟೈಸರ್, ಎನ್-95 ಮಾಸ್ಕ್ ನೀಡುವುದಾಗಿ ವಂಚನೆ ಮಾಡಿದ್ದಾಳೆ. ಬೆಂಗಳೂರಿನ ವೈದ್ಯ ಡಾ.ಜಯಂತ್ ಎಂಬುವವರಿಗೆ ನಟಾಲಿನ್ ಎಂಬ ಮಹಿಳೆ 25 ಸಾವಿರ ರೂ. ಪಡೆದು ದೋಖಾ ಎಸಗಿದ್ದಾಳೆ. ವೈಟ್‌ಫೀಲ್ಡ್ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚಕಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರಿಗೆ ‘ಸಾರಿ’ ಕೊರೊನಾ! ರಾಜ್ಯ ರಾಜಧಾನಿಯಲ್ಲಿ ಕೊರೊನಾ ವೈರಸ್ ಅಬ್ಬರಿಸಿ ಬೊಬ್ಬಿರಿಯುತ್ತಲೇ ಇದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಮೃತಪಟ್ಟವರ ಸಂಖ್ಯೆಯೂ ದುಪ್ಪಟ್ಟಾಗುತ್ತಿದೆ. ಇದರಲ್ಲಿ ILI ಮತ್ತು SARI ಯಿಂದಲೇ ಸೋಂಕಿತರು ಹೆಚ್ಚಾಗಿ ಮೃತಪಟ್ಟಿದ್ದಾರೆ. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೊರೊನಾ ಬಂದರೆ ಹೆಚ್ಚು ಹೊಡೆತ ಕೊಡುತ್ತಿದ್ದು, ಱಪಿಡ್ ಟೆಸ್ಟ್ಗೆ ಬಿಬಿಎಂಪಿ ಮುಂದಾಗಿದೆ.
ವೈರಸ್ ನಿಯಂತ್ರಣಕ್ಕೆ ಪ್ಲ್ಯಾನ್ ಬೆಂಗಳೂರಿನಲ್ಲಿ ನಿಯಂತ್ರಣಕ್ಕೆ ಸಿಗದೇ ಕೊರೊನಾ ವೈರಸ್ ನಾಗಾಲೋಟ ನಡೆಸುತ್ತಿದೆ. ಹೀಗಾಗಿ, ವೈರಸ್ ಗೆ ಲಂಗು ಲಗಾಮು ಹಾಕುವ ಸಲುವಾಗಿ ಸಿಎಂ ಬಿ ಎಸ್ ಯಡಿಯೂರಪ್ಪ ಸಭೆ ಮೇಲೆ ಸಭೆ ನಡೆಸಿದ್ದಾರೆ. ಬಿಬಿಎಂಪಿ ದಕ್ಷಿಣ ವಲಯ ಉಸ್ತುವಾರಿ ಸಚಿವ ಆರ್ ಅಶೋಕ್ ಮತ್ತು ಅಧಿಕಾರಿಗಳ ಜೊತೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಿಎಸ್ವೈ ಸಭೆ ನಡೆಸಿದ್ರು. ಸೋಂಕು ನಿಯಂತ್ರಣದ ಬಗ್ಗೆ ಕೆಲ ಸೂಚನೆಗಳನ್ನ ಸಿಎಂ ನೀಡಿದ್ರು.
ನಿಲ್ಲದ ಬೆಡ್ ಸಮಸ್ಯೆ ಕೊರೊನಾ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ಗಳ ಸಮಸ್ಯೆ ಇಲ್ಲಾ ಅಂತಾ ಸರ್ಕಾರ ಎಷ್ಟೇ ಬೊಬ್ಬೆ ಹೊಡೆದ್ರೂ, ವಾಸ್ತವದಲ್ಲಿ ಮಾತ್ರ ರೋಗಿಗಳಿಗೆ ಬೆಡ್ಗಳೇ ಸಿಕ್ತಿಲ್ಲ. ಬೆಂಗಳೂರು ಹೊರವಲಯದ ಬಿಐಇಸಿ ಯಲ್ಲಿ 10,100 ಬೆಡ್ ಇದೆ ಅನ್ನೋದು ಬರೀ ಸುಳ್ಳು ಅನ್ನೋದು ಬಯಲಾಗ್ತಿದೆ. ಯಾಕಂದ್ರೆ, ಮಾದಾವರದಲ್ಲಿ ಈವರೆಗೂ ಕೇವಲ 5 ಸಾವಿರ ಬೆಡ್ಗಳನ್ನ ಮಾತ್ರ ವ್ಯವಸ್ಥೆ ಮಾಡಲಾಗಿದೆ.
‘ಬೆಡ್ ಕೊಡದಿದ್ರೆ ಸೀಲ್ಡೌನ್’ ಕೊರೊನಾ ರೋಗಿಗಳಿಗೆ ಬೆಡ್ಗಳನ್ನ ನೀಡಬೇಕು ಅಂತಾ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಸೂಚಿಸಿದ್ರೂ ಕೂಡ, ಖಾಸಗಿಯವರು ಅಟ್ಟಹಾಸ ಮೆರೆಯುತ್ತಿದ್ದಾರೆ. ಇದ್ರಿಂದ ಎಚ್ಚೆತ್ತ ಸಚಿವ ಭೈರತಿ ಬಸವರಾಜ್, ಏಕಾಏಕಿ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಬೆಡ್ಗಳ ಕೊರತೆ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, 50% ಬೆಡ್ ಕೊಡಲೇಬೇಕು. ಬೆಡ್ ಕೊಡದಿದ್ರೆ ಸೀಲ್ ಡೌನ್ ಮಾಡಿ ಅಂತಾ ಅಧಿಕಾರಿಗಳಿಗೆ ತಾಕೀತು ಮಾಡಿದ್ರು.
ವೈದ್ಯರ ಕುಟುಂಬಕ್ಕೆ ಅನ್ಯಾಯ! ಕೊರೊನಾ ಸೋಂಕಿತರ ಪಾಲಿಗೆ ದೇವರಾಗಿರೋ ವೈದ್ಯರಿಗೇ ಸೋಂಕು ಹರಡುತ್ತಿದ್ದರೂ ಸಹ, ಅವರಿಗೂ ಸೂಕ್ತ ಚಿಕಿತ್ಸೆ ಸಿಗ್ತಿಲ್ಲ. ಹೌದು, ಬೊಮ್ಮನಹಳ್ಳಿ ಆರೋಗ್ಯಧಿಕಾರಿಯ ತಂದೆ ತಾಯಿ ಹಾಗೂ ಮಾವ ಮೂವರು ಕೊರೊನಾಗೆ ಬಲಿಯಾಗಿದ್ದಾರೆ. ವೈದ್ಯರ ಕುಟುಂಬಸ್ಥರಿಗೆ ಸೂಕ್ತ ಚಿಕಿತ್ಸೆ ಕೊಡದೇ ಇದ್ದುದ್ದಕ್ಕೆ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
‘ನ್ಯಾಯಾಂಗ ತನಿಖೆ ನಡೆಸಿ’ ಕೊವಿಡ್ ಉಪಕರಣ ಖರೀದಿಯಲ್ಲಿ ಸರ್ಕಾರ ಅವ್ಯವಹಾರ ನಡೆಸಿದೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದೇನೆ. ತನಿಖೆ ನಡೆಸಲಿ, ಸತ್ಯ ಹೊರಬರಲಿ, ಜನರೇ ನಿರ್ಧರಿಸುತ್ತಾರೆ. ಬಿಜೆಪಿಯವರು ನ್ಯಾಯಾಂಗ ತನಿಖೆಗೆ ಹೆದರುತ್ತಿರುವುದೇಕೆ ಅಂತಾ ಕಿಡಿಕಾರಿದ್ರು.
ಗರ್ಭಿಣಿಯರಿಗೆ ‘ಹೆರಿಗೆ’ ಸಮಸ್ಯೆ ಕೊರೊನಾ ವೈರಸ್ನಿಂದಾಗಿ ಬೆಂಗಳೂರಿನಲ್ಲಿ ಗರ್ಭಿಣಿಯರ ಪಾಡು ಹೇಳತೀರದಂತಾಗಿದೆ. ನಗರದಲ್ಲಿ ಬಹುತೇಕ ಆಸ್ಪತ್ರೆಗಳು ಕೊವಿಡ್ ಆಸ್ಪತ್ರೆಗಳಾಗಿದ್ದು, ಕೊವಿಡ್ನಿಂದಾಗಿ ಹಲವು ಖಾಸಗಿ ಆಸ್ಪತ್ರೆಗಳು ಬಂದ್ ಆಗಿವೆ. ಹೀಗಾಗಿ, ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಿಗೆ ಡಿಮ್ಯಾಂಡ್ ಹೆಚ್ಚಿದ್ದು, ಪ್ರತಿ ತಿಂಗಳು 700-1500 ಹೆರಿಗೆ ಕೇಸ್‌ಗಳು ಬರುತ್ತಿದ್ದು, ಸಮಸ್ಯೆ ಹೆಚ್ಚಾಗಿದೆ.