ಮತ್ತೆ ಆರಂಭವಾಗಲಿ ಮಡಿಲು ಕಿಟ್ ಯೋಜನೆ: ಬೀದರ್ ಮಹಿಳೆಯರ ಒತ್ತಾಯ
ಮಡಿಲು ಕಿಟ್ ಯೋಜನೆ ಸ್ಥಗಿತಗೊಂಡಿರುವುದರಿಂದ ಹಸುಗೂಸಿನ ಆರೈಕೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಹೆಣಗಾಡಬೇಕಾದ ಸ್ಥಿತಿ ಬಡವರ್ಗದ ಮಹಿಳೆಯರಿಗೆ ಎದುರಾಗಿದೆ.
ಬೀದರ್: ಬಾಣಂತಿಯರಿಗೆ ಅನುಕೂಲವಾಗಲೆಂದು ಜಾರಿಗೊಳಿಲಾಗಿದ್ದ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಮಡಿಲು ಕಿಟ್ ಯೋಜನೆ ಸ್ಥಗಿತಗೊಂಡಿದೆ. ಹಾಗಾಗಿ ಹಸುಗೂಸಿನ ಆರೈಕೆಗೆ ಬೇಕಾದ ವಸ್ತುಗಳನ್ನ ಖರೀದಿಸಲು ಹೆಣಗಾಡಬೇಕಾದ ಸ್ಥಿತಿ ಬಡವರ್ಗದ ಮಹಿಳೆಯರಿಗೆ ಎದುರಾಗಿದೆ. ಅವರಿಗೆ ಅಕ್ಷಯ ಪಾತ್ರೆಯಂತಿದ್ದ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಮತ್ತೆ ಆರಂಭವಾಗಬೇಕು ಎಂದು ಬೀದರ್ ಜಿಲ್ಲೆಯ ಹೆಣ್ಣುಮಕ್ಕಳು ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಬಡ ಬಾಣಂತಿಯರಿಗೆ ಅಕ್ಷಯ ಪಾತ್ರೆಯಂತಿದ್ದ ಮಡಿಲು ಕಿಟ್ ಯೋಜನೆ ರಾಜ್ಯಾದ್ಯಾಂತ ಸ್ಥಗಿತವಾಗಿದ್ದು ಅದಕ್ಕೆ ಬೀದರ್ ಜಿಲ್ಲೆಯೂ ಹೊರತಾಗಿಲ್ಲ. ಪ್ರತಿ ವರ್ಷ ಜಿಲ್ಲೆಯಲ್ಲಿ ಸರಾಸರಿ 20 ಸಾವಿರಕ್ಕೂ ಹೆಚ್ಚು ಹೆರಿಗೆಯಾಗುತ್ತವೆ. ತಾಯಿ ಮತ್ತು ಮಗುವಿಗೆ ಅಗತ್ಯವಿರುವ 19 ವಸ್ತುಗಳನ್ನು ಸರ್ಕಾರ ಉಚಿತವಾಗಿ ನೀಡುತ್ತಿತ್ತು. ಸರಕಾರ ಮಡಿಲು ಕಿಟ್ ಯೋಜನೆಗೆ ಎರಡು ವರ್ಷದಿಂದ ಬ್ರೇಕ್ ಹಾಕಿರುವುದರಿಂದ ಮಹಿಳೆಯರು ತೀವ್ರ ಕಷ್ಟಪಡುವಂತಾಗಿದೆ.
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದ ಗರ್ಭಿಣಿಯರು ಸರಕಾರಿ ಅಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಾಗ ಮಡಿಲು ಕಿಟ್ ವಿತರಣೆ ಮಾಡಲಾಗುತ್ತಿತ್ತು. ಕಾಟನ್ ಡಯಾಪರ್, ಸ್ಯಾನಿಟರಿ ನ್ಯಾಪ್ಕಿನ್, ಎಣ್ಣೆ, ಸೋಪು, ಬೆಲ್ಟ್ ಹಾಗೂ ಬೆಡ್ ಸ್ಪ್ರೆಡ್ ಮೊದಲಾದವುಗಳನ್ನು ಕಿಟ್ ಒಳಗೊಂಡಿರುತ್ತಿತ್ತು. ಅನುದಾನ ಕೊರತೆಯ ನೆಪವೊಡ್ಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಯೋಜನೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಬಡವರು ಅನಿವಾರ್ಯವಾಗಿ ನೂರಾರು ರೂಪಾಯಿ ಖರ್ಚುಮಾಡಿ ಮಗುವಿಗೆ ಬೇಕಾದ ಸೋಪು, ಶಾಂಪು, ಎಣ್ಣೆ, ಡಯಾಪರ್ಗಳನ್ನು ಕೊಳ್ಳಬೇಕಾಗಿದೆ.
ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಸಹಯೋಗದಲ್ಲಿ 2007ರಲ್ಲಿ ಮಡಿಲು ಕಿಟ್ ವಿತರಣೆ ಯೋಜನೆ ಆರಂಭಿಸಲಾಗಿತ್ತು. ಯೋಜನೆಯ ಲಾಭವನ್ನು ಸುಮಾರು ಒಂದು ದಶಕದ ಕಾಲ ರಾಜ್ಯಾದ್ಯಂತ್ಯ ಸಾವಿರಾರು ಬಾಣಂತಿಯರು ಪಡೆದುಕೊಂಡಿದ್ದರು. 2007 ರಿಂದ 2013 ರವೆರೆಗೆ ರಾಜ್ಯ ಸರಕಾರ ಅನುದಾನವನ್ನ ನೀಡಿದ್ದರೆ, 2013-2017 ರವರೆಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಎರಡು ವರ್ಷದಿಂದ ರಾಜ್ಯ ಸರಕಾರ, ರಾಷ್ಟ್ರೀಯ ಆರೋಗ್ಯ ಮಿಷನ್ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಯೋಜನೆಗೆ ಬ್ರೇಕ್ ಹಾಕಿದೆ.
ಮಡಿಲು ಕಿಟ್ ಯೋಜನೆ ಬಗ್ಗೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಶ್ಲಾಘನೆ ವ್ಯಕ್ತಪಡಿಸಿತ್ತು, ಬಾಣಂತಿಯರೂ ಸಂತಸದಿದ್ದರು. ಆದರೆ ಅನುದಾನದ ಕೊರತೆಯ ನೆಪವೊಡ್ಡಿ ಮಡಿಲು ಕಿಟ್ ವಿತರಣೆಗೆ ಸರಕಾರ ಬ್ರೇಕ್ ಹಾಕಿದೆ. ಸ್ಥಗಿತವಾಗಿರುವ ಮಡಿಲು ಕಿಟ್ ಯೋಜನೆಯನ್ನು ಮತ್ತೆ ಆರಂಭಿಸಿ ಬಣ ಬಾಣಂತಿಯರಿಗೆ ಸವಲತ್ತು ಮಾಡಿಕೊಡಲಿ ಅಂತ ಜಿಲ್ಲೆಯ ನೂರಾರು ಮಹಿಳೆಯರು ಅಂಗಲಾಚುತ್ತಿದ್ದಾರೆ.
ಬೀದರ್: ಪಂಚತಾರಾ ವಿಶ್ವ ವಿದ್ಯಾಲಯದಲ್ಲಿ ಸಿಬ್ಬಂದಿ ಕೊರತೆ; ಬರೋಬ್ಬರಿ 1269 ಹುದ್ದೆಗಳು ಖಾಲಿ!
Published On - 3:20 pm, Fri, 15 January 21