ಕೊರೊನಾ ಸೋಂಕು ಭೀತಿ; ಕಳೆಕಟ್ಟಲಿಲ್ಲ ಮೈಲಾರಲಿಂಗ ಜಾತ್ರೆ
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ತೀರಾ ಕಡಿಮೆ ಪ್ರಮಾಣದಲ್ಲಿ ಕುರಿಮರಿಗಳನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಯಾದಗಿರಿ: ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಮೈಲಾಪುರದ ಮೈಲಾರಲಿಂಗ ದೇವಸ್ಥಾನದಲ್ಲಿ ಈ ಬಾರಿ ಕೊರೊನಾ ಸೋಂಕು ಭೀತಿಯಿಂದ ಕುರಿಗಳ ಸಂಖ್ಯೆ ಕಡಿಮೆಯಾಗಿದೆ. ದೇವಸ್ಥಾನದ ಆದಾಯದಲ್ಲಿ ಒಟ್ಟು ₹10 ಲಕ್ಷ ಖೋತವಾಗಿದೆ ಎಂದು ಮೂಲಗಳು ತಿಳಿಸಿವೆ.
ಕೊರೊನಾ ಪರಿಣಾಮ ಈ ವರ್ಷ ಜಾತ್ರಾ ಮಹೋತ್ಸವನ್ನು ಸರಳವಾಗಿ ಆಚರಿಸಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಸೇರುತ್ತಿದ್ದ ಭಕ್ತರ ಸಮೂಹ ಈ ವರ್ಷ ಸಾವಿರಕ್ಕೆ ಇಳಿದಿತ್ತು. ಹೀಗಾಗಿ ಕುರಿಮರಿಗಳ ಸಂಖ್ಯೆಯಲ್ಲೂ ಇಳಿಕೆ ಕಂಡಿದ್ದು, ದೇವಸ್ಥಾನಕ್ಕೆ ಹರಿದು ಬರುತ್ತಿದ್ದ ಆದಾಯಕ್ಕೆ ಕತ್ತರಿ ಬಿದ್ದಂತಾಗಿದೆ.
ನಿಷೇಧವಿದ್ದರೂ ನಿಲ್ಲದ ಆಚರಣೆ ಪ್ರತಿ ವರ್ಷ ಮಕರ ಸಂಕ್ರಾಂತಿ ದಿನ ನಡೆಯುವ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಅಸಂಖ್ಯಾತ ಭಕ್ತರು ಭಕ್ತಿಪರವಶರಾಗಿ ಮಲ್ಲಯ್ಯನ ಪಲ್ಲಕ್ಕಿ ಮೇಲೆ ಕುರಿ ಮರಿಗಳನ್ನ ಎಸೆಯುತ್ತಾರೆ. ಈ ಪದ್ಧತಿಗೆ ಕಾನೂನಿನ ಪ್ರಕಾರ ನಿಷೇಧ ಹೇರಲಾಗಿದೆಯಾದರೂ ಅಧಿಕಾರಿಗಳ ಕಣ್ಣು ತಪ್ಪಿಸಿ ಇದನ್ನು ಮುಂದುವರೆಸಿಕೊಂಡು ಬರಲಾಗಿದೆ. ಕುರಿಮರಿಗಳನ್ನು ಪತ್ತೆ ಹಚ್ಚುವುದಕ್ಕೆ ಪಶು ಇಲಾಖೆ ಅಧಿಕಾರಿಗಳು ಹಗಲಿರಳು ಕಾರ್ಯಾಚರಣೆ ನಡೆಸಿದರೂ ಸಂಪೂರ್ಣ ತಡೆಗಟ್ಟುವುದು ಸಾಧ್ಯವಾಗಿಲ್ಲ. ಈ ವರ್ಷ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಒಟ್ಟು 107 ಕುರಿಮರಿಗಳನ್ನು ವಶಪಡಿಸಿಕೊಂಡಿದ್ದರು.

ಕಳೆದ ವರ್ಷ 900 ಕುರಿಮರಿ ವಶ ಕಳೆದ ವರ್ಷ ನಡೆದ ಜಾತ್ರಾ ಮಹೋತ್ಸವದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಟ್ಟು 900 ಕುರಿಮರಿಗಳನ್ನು ವಶಕ್ಕೆ ಪಡೆದಿದ್ದರು. ವಶಪಡಿಸಿಕೊಂಡ ಕುರಿಮರಿಗಳನ್ನ ಮಹೋತ್ಸವ ಮುಗಿದ ಮೇಲೆ ಅಧಿಕಾರಿಗಳು ಹರಾಜು ಪ್ರಕ್ರಿಯೆ ನಡೆಸಿ ಮಾರುತ್ತಿದ್ದರು. ಕಳೆದ ವರ್ಷ ಇದರಿಂದ ₹ 13 ಲಕ್ಷ ಹಣ ದೇವಸ್ಥಾನಕ್ಕೆ ಬಂದಿತ್ತು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ತೀರಾ ಕಡಿಮೆ ಪ್ರಮಾಣದಲ್ಲಿ ಕುರಿಮರಿಗಳನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಪಲ್ಲಕ್ಕಿ ಮೇಲೆ ಎಸೆದರೆ ಕುರಿಮರಿ ಆರೋಗ್ಯ ಚೆನ್ನಾಗಿರುತ್ತೆ ಭಕ್ತರು ಬಹುಕಾಲದಿಂದ ಮಲ್ಲಯ್ಯನ ಪಲ್ಲಕ್ಕಿ ಮೇಲೆ ಕುರಿಮರಿಗಳನ್ನ ಎಸೆಯುತ್ತಾ ಬಂದಿದ್ದಾರೆ. ಇದರ ಹಿಂದೆ ಪ್ರಮುಖ ಕಾರಣವಿದೆ. ಪ್ರತಿ ವರ್ಷ ಭಕ್ತರು ಕುರಿಮರಿಗಳನ್ನ ತಂದು ಮಲ್ಲಯ್ಯನ ಪಲ್ಲಕ್ಕಿ ಗಂಗಾಸ್ನಾನಕ್ಕೆ ಹೋಗುವ ಸಂದರ್ಭದಲ್ಲಿ ಪಲ್ಲಕ್ಕಿ ಮೇಲೆ ಕುರಿಮರಿಗಳನ್ನ ಎಸೆದು ಭಕ್ತಿ ಪರಾಕಾಷ್ಠೆಯನ್ನ ಮೆರೆಯುತ್ತಾರೆ. ಹೀಗೆ ಮಾಡಿದರೆ ಮನೆಯಲ್ಲಿರುವ ಕುರಿಗಳಿಗೆ ಯಾವುದೇ ರೋಗ ಬರುವುದಿಲ್ಲ ಎಂಬ ನಂಬಿಕೆಯನ್ನು ಜನರು ಹೊಂದಿದ್ದಾರೆ.
ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ವಶಪಡಿಸಿಕೊಂಡ 107 ಕುರಿಮರಿಗಳನ್ನ ಹರಾಜು ಹಾಕಿದ್ದು ₹ 2.40 ಲಕ್ಷ ಆದಾಯ ಬಂದಿದೆ. ಕಳೆದ ವರ್ಷ ₹ 13 ಲಕ್ಷ ಬಂದಿತ್ತು. ಕುರಿಮರಿಗಳ ಹರಾಜಿನಿಂದ ಬಂದ ಹಣವನ್ನ ದೇವಸ್ಥಾನ ಅಭಿವೃದ್ಧಿ ಮಂಡಳಿಗೆ ನೀಡಲಾಗುತ್ತದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಶರಣಭೂಪಾಲರೆಡ್ಡಿ ಹೇಳಿದ್ದಾರೆ.



