ಪೂಜ್ಯ ತಂದೆ-ಮಕ್ಕಳು ಎಲ್ಲರನ್ನೂ ಮುಗಿಸಲು ಹೊರಟಿದ್ದಾರೆ: ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ

| Updated By: Rakesh Nayak Manchi

Updated on: Mar 11, 2024 | 9:01 PM

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಕಾರ್ಯಕರ್ತರು ಮತ್ತು ಕೆಲವು ಬಿಜೆಪಿ ನಾಯಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದೇ ವಿಚಾರವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಪೂಜ್ಯ ತಂದೆ-ಮಕ್ಕಳು ಎಲ್ಲರನ್ನೂ ಮುಗಿಸಬೇಕೆಂದು ಮಾಡುತ್ತಿದ್ದಾರೆ ಎಂದಿದ್ದಾರೆ.

ಪೂಜ್ಯ ತಂದೆ-ಮಕ್ಕಳು ಎಲ್ಲರನ್ನೂ ಮುಗಿಸಲು ಹೊರಟಿದ್ದಾರೆ: ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ
ಪೂಜ್ಯ ತಂದೆ-ಮಕ್ಕಳು ಎಲ್ಲರನ್ನೂ ಮುಗಿಸಲು ಹೊರಟಿದ್ದಾರೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್
Follow us on

ಯಾದಗಿರಿ, ಮಾ.11: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಇವರ ಪುತ್ರನೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಿರುದ್ಧ ಮತ್ತೆ ಗುಡುಗಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಪೂಜ್ಯ ತಂದೆ-ಮಕ್ಕಳು ಎಲ್ಲರನ್ನೂ ಮುಗಿಸಬೇಕೆಂದು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹಗೆ ಟಿಕೆಟ್ ಕೈತಪ್ಪುವ ವಿಚಾರವಾಗಿ ಯಾದಗಿರಿಯಲ್ಲಿ ಮಾತನಾಡಿದ ಯತ್ನಾಳ್, ನನಗೆ ಬಾಗಲಕೋಟೆ, ಕೊಪ್ಪಳ, ಬೆಳಗಾವಿ ಕ್ಷೇತ್ರದಿಂದ ಆಯ್ಕೆ ಕೊಟ್ಟಿದ್ದರು. ನನಗೆ ಕೇಂದ್ರ ಮಂತ್ರಿ ಮಾಡುತ್ತೇನೆ ಅಂದರೂ ನಿಲ್ಲುವುದಿಲ್ಲ ಅಂದಿದ್ದೇನೆ. ನಾನು ದೆಹಲಿಗೆ ಹೋದರೆ ಇಲ್ಲಿ ಅಪ್ಪ-ಮಗನ ರಾಜ್ಯ ನಡೆಯುತ್ತದೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಕೇಂದ್ರದಲ್ಲಿ ಹಿರಿಯ ಮಗ ರಾಘವೇಂದ್ರಗೆ ಮಂತ್ರಿ ಮಾಡುವುದು. ರಾಜ್ಯದಲ್ಲಿ ಕಿರಿಯ ಮಗ ವಿಜಯೇಂದ್ರಗೆ ಮುಖ್ಯಮಂತ್ರಿ ಮಾಡುವುದು. ಆದರೆ ನಾವೇನು ಮಾಡುತ್ತಿದ್ದೇವೆ ಎಂದು ಯಡಿಯೂರಪ್ಪ ವಿರುದ್ಧ ಕಿಡಿಕಾರಿದ ಯತ್ನಾಳ್, ಯಾರು ಏನು ಪಿತೂರಿ ಮಾಡಿದರೂ ನಾವು ಯಾರಿಗೂ ಅಂಜುವುದಿಲ್ಲ. ನಾವು ಕಿತ್ತೂರು ಚೆನ್ನಮ್ಮನ ವಂಶಸ್ಥರು ಎಂದರು.

ಚುನಾವಣೆ ನಂತರ ಹೊಂದಾಣಿಕೆ ನಾಯಕರ ಅಂತ್ಯ

ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಲೋಕಸಭೆ ಚುನಾವಣೆ ಬಳಿಕ BJP ಹೊಂದಾಣಿಕೆ ನಾಯಕರ ಅಂತ್ಯವಾಗುತ್ತದೆ ಎಂದರು. ಅಲ್ಲದೆ, ಕರ್ನಾಟಕದಲ್ಲಿ ವಿಜಯೇಂದ್ರ ನೋಡಿ ಯಾರು ಕೂಡ ವೋಟ್ ಹಾಕಲ್ಲ. ಹಾಕಿದರೆ ಯಡಿಯೂರಪ್ಪ ಒಬ್ಬ ವೋಟ್ ಹಾಕಬಹುದು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಬಾಂಬ್ ಬ್ಲಾಸ್ಟ್ ಪ್ರಕರಣ ನಡೆದಾಗ ಕೆಲ ಸಚಿವರು ಅಪ್ರಬುದ್ಧ ಹೇಳಿಕೆ ನೀಡಿದ್ದರು: ಬಸನಗೌಡ ಪಾಟೀಲ್ ಯತ್ನಾಳ್

ಇದು ಮೋದಿ ಚುನಾವಣೆ, ಯಡಿಯೂರಪ್ಪ ಚುನಾವಣೆ ಅಲ್ಲ

ನರೇಂದ್ರ ಮೋದಿ ಚುನಾವಣೆ ಇದೆ, ವಿಜಯೇಂದ್ರ ತೆಗೆದುಕೊಂಡು ಏನು ಮಾಡೋದು. ವಿಜಯೇಂದ್ರ ಪಾರ್ಟಿ ಅಧ್ಯಕ್ಷ ಇರಲಿ ಸುಡಗಾಡು ಇರಲಿ. ರಾಜ್ಯದಲ್ಲಿ 28 ಸ್ಥಾನ ಗೆದ್ದೆ ಗೆಲ್ಲುತ್ತೆ. ಇದ್ದಕ್ಕೆ ವಿಜಯೇಂದ್ರ ಸಂಬಂಧ ಪಡಲ್ಲ. ಇದು ಮೋದಿ ಚುನಾವಣೆ. ಯಡಿಯೂರಪ್ಪ ಚುನಾವಣೆ ಅಲ್ಲ. ಯಡಿಯೂರಪ್ಪ ಹೆಸರಲ್ಲಿ ಯಾವಾಗ ರಾಜ್ಯದಲ್ಲಿ 120 ಸ್ಥಾನಗಳು ಬಂದಿವೆ? ಎಂದು ಪ್ರಶ್ನಿಸಿದರು.

ಡಿಕೆ ಶಿವಕುಮಾರ್​ಗೆ ಯತ್ನಾಳ್ ಕೌಂಟರ್

ಶಾಸಕ ಶಾಮನೂರು ಶಿವಶಂಕರಪ್ಪ ಮೂಲಕ ಕಾಂಗ್ರೆಸ್ ಶಾಸಕರನ್ನ 50 ಕೋಟಿಗೆ ಖರೀದಿ ಮಾಡಲು ಪ್ಲಾನ್ ಮಾಡಿದ್ದರು ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಕೌಂಟರ್ ಕೊಟ್ಟ ಯತ್ನಾಳ್, ನಾವು ಯಾವ ಸರ್ಕಾರನೂ ಬೀಳಿಸುವುದಿಲ್ಲ. ಅವರಿಗೆ ಅತೃಪ್ತಿ ಆದರೆ ಅವರಾಗೆ ಬರುತ್ತಾರೆ. ಶಾಮನೂರ್ ಸಂಬಂಧವಿಲ್ಲ ಸತೀಶ್ ಜಾರಕಿಹೊಳಿ ಸಂಬಂಧವಿಲ್ಲ. ಕಾಂಗ್ರೆಸ್​ನ ಶಾಸಕರು ಸಂಪೂರ್ಣವಾಗಿ ಹತಾಶರಾಗಿದ್ದಾರೆ ಎಂದರು.

ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ದುರಂಕಾರ, ಏಕ ವಚನದಲ್ಲಿ ಮಾತಾಡುವ ಸ್ಟೈಲ್​ನಿಂದಲೇ ಕಾಂಗ್ರೆಸ್ ನಾಶವಾಗುತ್ತದೆ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್​ನಲ್ಲಿ ಏನು ಆಗುತ್ತದೆ ಬಿಜೆಪಿಯಲ್ಲಿ ಏನು ಆಗುತ್ತೆ ಗೊತ್ತಿಲ್ಲ ಎಂದರು.

ಲೋಕಸಭೆಯಲ್ಲಿ ಬಿಜೆಪಿ 400 ಸ್ಥಾನ ಬರುತ್ತದೆ. ಕಾಂಗ್ರೆಸ್ ನೆಲಕಚ್ಚಿ ಹೋಗುತ್ತದೆ. ಆಗ ದೇಶದಲ್ಲಿ ಏನು ಬೇಕಾದರೂ ಬದಲಾವಣೆ ಆಗಬಹುದು. ಕರ್ನಾಟಕದಲ್ಲೂ ಬದಲಾವಣೆ ಆಗುತ್ತೆ. ಕರ್ನಾಟಕದಲ್ಲಿ ಅಜೀತ್ ಪವಾರ್ ಹಾಗೂ ಏಕನಾಥ ಶಿಂಧೆ ಹುಟ್ಟಿದ್ದಾರೆ. ಅವರಿಗೆ ಈಗಾಗ್ಲೇ ತೊಟ್ಟಿಲಿಗೆ ಹಾಕಿ‌ ನಾಮಕರಣ ಮಾಡಿದ್ದೇವೆ. ಅಷ್ಟರಲ್ಲೇ ಅವರು ಪ್ರೌಢಾವಸ್ಥೆಗೆ ಬರುತ್ತಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ