ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ: ಬಿಎಲ್ ಸಂತೋಷ್ ಆ ರೀತಿ ಹೇಳಿದ್ದಾರೆ ಅನ್ನೋದು ಸುಳ್ಳು: ಮಾಜಿ ಸಚಿವ ಶ್ರೀರಾಮುಲು
40-45 ಜನ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ಆ ರೀತಿಯಲ್ಲಿ ಹೇಳುವ ಪ್ರಶ್ನೆನೆ ಇಲ್ಲ, ಆ ರೀತಿ ಹೇಳಿದ್ದಾರೆ ಎನ್ನೋದು ಎಲ್ಲಾ ಸುಳ್ಳು. ಕಮಿಷನ್ ಮುಚ್ಚಿ ಹಾಕಲು ಆಪರೇಷನ್ ಹಸ್ತ ಚಾಲ್ತಿಗೆ ತಂದಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಯಾದಗಿರಿ, ಸೆಪ್ಟೆಂಬರ್ 2: ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿ ಇದ್ದಾರೆಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ (BL Santhosh) ಆ ರೀತಿ ಹೇಳಿದ್ದಾರೆ ಅನ್ನೋದು ಸುಳ್ಳು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸರ್ಕಾರದ ಯೋಗ್ಯತೆ ಜನತೆಗೆ ಗೊತ್ತಾಗುತ್ತೆ. ಕಮಿಷನ್ ಮುಚ್ಚಿ ಹಾಕಲು ಆಪರೇಷನ್ ಹಸ್ತ ಚಾಲ್ತಿಗೆ ತಂದಿದ್ದಾರೆ. ಸಿಎಂ ಭೇಟಿಗೆ ಹೋದರೆ ಕಾಂಗ್ರೆಸ್ ಸೇರುತ್ತಾರೆ ಅಂತ ಹಬ್ಬಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಯಾರೂ ಕೂಡ ಪಕ್ಷ ಬಿಟ್ಟು ಹೋಗಲ್ಲ
ಮಾಜಿ ಸಚಿವರು, ಶಾಸಕರು ಯಾರೂ ಕೂಡ ಪಕ್ಷ ಬಿಟ್ಟು ಹೋಗಲ್ಲ. ಶೀಘ್ರದಲ್ಲೇ ವಿರೋಧ ಪಕ್ಷದ ನಾಯಕರನ್ನ ಆಯ್ಕೆ ಮಾಡಲಾಗುತ್ತೆ. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ ಶ್ರೀರಾಮುಲು, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಾಬಾ ಸಾಹೇಬರ ಸಂವಿಧಾನ ದೌರ್ಜನ್ಯ ದಬ್ಬಾಳಿ ಮಾಡುವಂತೆ ಪ್ರಿಯಾಂಕ್ ಹೇಳಿಕೊಟ್ಟರ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ರಾಜಕೀಯ; ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ VS ಬಿಎಲ್ ಸಂತೋಷ್ ಬಣ ಸಂಘರ್ಷ ಮತ್ತೆ ಮುನ್ನೆಲೆಗೆ
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ನಮ್ಮ ಕಾರ್ಯಕರ್ತರನ್ನ ತುಳಿಯುವಂತ ಕೆಲಸ ಮಾಡಲಾಗುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಜನರು ಕೊಟ್ಟ ತೀರ್ಮಾನದ ವಿರುದ್ಧ ಕೆಲಸ ಮಾಡಲು ಸಿದ್ಧರಿಲ್ಲ
ಕಾಂಗ್ರೆಸ್ 5 ವರ್ಷ ಸರ್ಕಾರ ನಡೆಸಲಿ ಅಂತಾ ಪ್ರಾರ್ಥನೆ ಮಾಡುತ್ತೇನೆ. ಕಾಂಗ್ರೆಸ್ಗೆ 135 ಸ್ಥಾನ ಕೊಟ್ಟಿದ್ದಾರೆ, ಅವರು ಸರ್ಕಾರ ನಡೆಸಲಿ. ನಾವು ಸರ್ಕಾರ ಬೀಳಿಸುವ ಕೆಲಸ ಮಾಡುವುದಿಲ್ಲ. ಜನರು ಕೊಟ್ಟ ತೀರ್ಮಾನದ ವಿರುದ್ಧ ಕೆಲಸ ಮಾಡಲು ಸಿದ್ಧರಿಲ್ಲ. ಆದರೆ ಕಾಂಗ್ರೆಸ್ಸಿಗರು ಬಿಬಿಎಂಪಿಯಲ್ಲಿ 50% ಲಂಚ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ 50% ಕಮಿಷನ್ ಸರ್ಕಾರ. ವಿಧಾನಸೌಧದ ಕೆಳಮಹಡಿಯಿಂದ 3ನೇ ಮಹಡಿಯವರೆಗೂ ಲಂಚ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಎಲ್ ಸಂತೋಷ್ ಹೇಳಿದ್ದೇನು?
ನಮ್ಮಲ್ಲಿಂದ ಯಾರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. 10 ಜನ ಹೋದರೂ ಅದಕ್ಕೆ ಸಮನಾದ ಒಬ್ಬರನ್ನು ಕರೆತರಬಹುದು. ನನ್ನ ಜೊತೆಯೇ ಸಂಪರ್ಕದಲ್ಲಿ 40 – 45 ಜನ ಇದ್ದಾರೆ. ದೆಹಲಿಯವರು ಒಪ್ಪಿಗೆ ಕೊಟ್ಟರೆ ನಾಳೆ ಒಂದು ದಿನದ ಕೆಲಸ ಅಷ್ಟೆ. ಆದರೆ ನಮಗೆ ಈಗ ಅಗತ್ಯವಿಲ್ಲ. ನಾವು ಈಗ ಸರ್ಕಾರ ಮಾಡಬೇಕಾಗಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಇತ್ತೀಚೆಗೆ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:00 pm, Sat, 2 September 23