ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದು ನಮ್ಮ ಧ್ಯೇಯವಾಗಿದೆ; ಯಾದಗಿರಿಯಲ್ಲಿ ಸಿಎಂ ಬೊಮ್ಮಾಯಿ ಮಾತು
ದೇವತ್ಕಲ್ ಗ್ರಾಮಕ್ಕೆ ಇಂದು ಸಿಎಂ ಆಗಮಿಸಿದ್ದಾರೆ. ಈ ವೇಳೆ ತೆರೆದ ವಾಹನದಲ್ಲಿ ಬಸವರಾಜ ಬೊಮ್ಮಾಯಿ ಅದ್ದೂರಿ ಮೆರವಣಿಗೆ ಮಾಡಲಾಗಿದೆ. ಶಾಸಕ ರಾಜುಗೌಡ ಟ್ರ್ಯಾಕ್ಟರ್ ಚಲಾಯಿಸಿ ಸಿಎಂ ಅವರನ್ನು ಖುದ್ದು ಬರಮಾಡಿಕೊಂಡಿದ್ದಾರೆ.
ಯಾದಗಿರಿ: ಪಠ್ಯದಲ್ಲಿ ಭಗವದ್ಗೀತೆ (Bhagavad Gita) ಅಳವಡಿಸುವುದು ನಮ್ಮ ಧ್ಯೇಯವಾಗಿದೆ. ಮಕ್ಕಳಿಗೆ ನೈತಿಕ ಶಿಕ್ಷಣ ಕೊಡಬೇಕೆಂದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವುದು ನಮ್ಮ ಧ್ಯೇಯ ಅಂತ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ನಲ್ಲಿ ಹೇಳಿಕೆ ನೀಡಿದ್ದಾರೆ. ನಿನ್ನೆ ಗುಜರಾತ್ನಲ್ಲಿ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದ್ದಾರೆ. ಈ ಕುರಿತು ನಮ್ಮ ಸಚಿವರು ಚರ್ಚೆ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯವರು ವಿವರ ಪಡೆದ ನಂತರ ತೀರ್ಮಾನ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮಕ್ಕೆ ಇಂದು ಸಿಎಂ ಆಗಮಿಸಿದ್ದಾರೆ. ಈ ವೇಳೆ ತೆರೆದ ವಾಹನದಲ್ಲಿ ಬಸವರಾಜ ಬೊಮ್ಮಾಯಿ ಅದ್ದೂರಿ ಮೆರವಣಿಗೆ ಮಾಡಲಾಗಿದೆ. ಶಾಸಕ ರಾಜುಗೌಡ ಟ್ರ್ಯಾಕ್ಟರ್ ಚಲಾಯಿಸಿ ಸಿಎಂ ಅವರನ್ನು ಖುದ್ದು ಬರಮಾಡಿಕೊಂಡಿದ್ದಾರೆ. ಡೊಳ್ಳು, ತಮಟೆ ಬಾರಿಸುವ ಮೂಲಕ ಅದ್ದೂರಿ ಮೆರವಣಿಗೆ ಮಾಡಲಾಗಿದೆ. ಪೂರ್ಣಕುಂಭ ಹೊತ್ತು ಯುವತಿಯರು ಮೆರವಣಿಯಲ್ಲಿ ಭಾಗವಹಿಸಿದ್ದಾರೆ. ಸಿಎಂಗೆ ಸಚಿವರಾದ ಆರ್ ಅಶೋಕ್, ಗೋವಿಂದ ಕಾರಜೋಳ, ಪ್ರಭು ಚವ್ಹಾಣ್ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದರು.
ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ- ಬೊಮ್ಮಾಯಿ: ಪಳವಳ್ಳಿ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಪ್ರಯಾಣಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿ ಹೇಳಿಕೆ ನೀಡಿದ ಸಿಎಂ, ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಬಸ್ ಪಲ್ಟಿಯಾದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತೇನೆ ಎಂದರು.
ಇನ್ನಾದ್ರೂ ಅವರು ಬುದ್ಧಿ ಕಲಿಯಲಿ; ಸಚಿವ ಶಂಕರಪಾಟೀಲ್: ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಶಂಕರಪಾಟೀಲ್ ಮುನೇನಕೊಪ್ಪ, ಒಬ್ಬ ಮಂತ್ರಿಯಾಗಿ ಅದಕ್ಕೆ ನನ್ನ ಒಪ್ಪಿಗೆ ಇದೆ. ಈಗಾಗಲೇ ಶಿಕ್ಷಣ ಸಚಿವ ನಾಗೇಶ ಅವರು ಈ ವಿಚಾರದ ಬಗ್ಗೆ ಈ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ನವರು ಚುನಾವಣೆ ದೃಷ್ಠಿಕೋನ ಇಟ್ಟುಕೊಂಡು ಈ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಯಾವಾಗಲೂ ಅವರದು ಓಟ್ ಬ್ಯಾಂಕ್ ರಾಜಕೀಯ. ಪಂಚರಾಜ್ಯ ಚುನಾವಣೆಯಲ್ಲಿ ಇಡೀ ದೇಶದ ಜನರೇ ಅವರಿಗೆ ಪಾಠ ಕಲಿಸಿದ್ದಾರೆ. ಜನ ಅವರನ್ನ ತಿರಸ್ಕಾರ ಮಾಡಿದ್ದಾರೆ ಇನ್ನಾದ್ರೂ ಅವರು ಬುದ್ಧಿ ಕಲಿಯಲಿ. ಬಿಜೆಪಿಯವರ ಅಭಿವೃದ್ಧಿ ಕೆಲಸಗಳನ್ನ ಕಾಂಗ್ರೆಸ್ಗೆ ಸಹಿಸಲು ಆಗುತ್ತಿಲ್ಲ ಎಂದು ಹೇಳಿದರು. ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿಷಯವನ್ನ ರಾಷ್ಟ್ರಮಟ್ಟದಲ್ಲಿ ಹಬ್ಬಿಸುವ ಅವಶ್ಯಕತೆ ಇರಲಿಲ್ಲ. ಕೋರ್ಟ್ ನೀಡಿದ ತೀರ್ಪು ವಿರೋಧಿಸಿ ಬಂದ್ ಗೆ ಕರೆಕೊಟ್ಟಾಗ ಕಾಂಗ್ರೆಸ್ ಅದಕ್ಕೆ ಸಪೋರ್ಟ್ ಮಾಡಿದೆ. ಕಾಂಗ್ರೆಸ್ನ ಈ ನಡೆ ಸರಿಯಲ್ಲ. ಕಾಶ್ಮೀರ ಫೈಲ್ಸ್ ಚಿತ್ರ ದೇಶದ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಬೇಕು. ಈ ಮೂಲಕ ದೇಶದ ಜನತೆಗೆ ಇತಿಹಾಸ ತಿಳಿಯಲಿದೆ ಎಂದರು.
ಅರ್ಧ ವಿಚಾರ ಇಟ್ಟುಕೊಂಡು ಚರ್ಚೆ ಮಾಡಿದರೆ ಅದು ತಪ್ಪು- ಆರಗ ಜ್ಞಾನೇಂದ್ರ: ಈಗಾಗಲೇ ಶಿಕ್ಷಣ ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಕ್ಷಣಕ್ಕೆ ಈ ಬಗ್ಗೆ ಏನೂ ಮಾಡುವುದಿಲ್ಲ. ಈ ಕುರಿತು ಪೂರ್ಣ ಪ್ರಮಾಣದ ಚರ್ಚೆ ನಡೆಸುವ ಅಗತ್ಯವಿದೆ. ಅರ್ಧ ವಿಚಾರ ಇಟ್ಟುಕೊಂಡು ಚರ್ಚೆ ಮಾಡಿದರೆ ಅದು ತಪ್ಪು ಅಂತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೀಗಡಿ ಗ್ರಾಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇದನ್ನೂ ಓದಿ
Vishal: ವೃದ್ಧಾಶ್ರಮಗಳಲ್ಲಿ ಅನ್ನದಾನ ನಡೆಸಿ ಪುನೀತ್ಗೆ ಅರ್ಥಪೂರ್ಣ ನಮನ ಸಲ್ಲಿಸಿದ ವಿಶಾಲ್
Bone Health: ಮೂಳೆಗಳ ಬಲವರ್ಧನಗೆ ಈ ಅಭ್ಯಾಸಗಳು ಒಳಿತು
Published On - 12:53 pm, Sat, 19 March 22