AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆರಾಯನ ಆರ್ಭಟಕ್ಕೆ ಕಂಗಾಲಾದ ಯಾದಗಿರಿ ಜನ; ಮುಳುಗಿದ ಸೇತುವೆ, ಶಾಲೆಗೂ ನುಗ್ಗಿದ ನೀರು

ಯಾದಗಿರಿ ಜಿಲ್ಲೆಯಾದ್ಯಂತ ಮಳೆರಾಯ ಅಬ್ಬರ ಜೋರಾಗಿದೆ. ನಿನ್ನೆ(ಆ.31) ಸಂಜೆಯಿಂದ ಅಬ್ಬರಿಸುತ್ತಿರುವ ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಮನೆ ಅಂಗಡಿಗಳಿಗೆ ಮಳೆ ನೀರು ನುಗ್ಗಿದ್ರೆ, ರಸ್ತೆಗಳು ಜಲಾವೃತವಾಗಿವೆ. ಇನ್ನೊಂದು ಕಡೆ ಸೇತುವೆ ಮುಳುಗಡೆಯಾಗಿ ವಾಹನ ಸಂಚಾರಕ್ಕೆ ಬ್ರೇಕ್ ಬಿದ್ದಿದೆ..

ಮಳೆರಾಯನ ಆರ್ಭಟಕ್ಕೆ ಕಂಗಾಲಾದ ಯಾದಗಿರಿ ಜನ; ಮುಳುಗಿದ ಸೇತುವೆ, ಶಾಲೆಗೂ ನುಗ್ಗಿದ ನೀರು
ಮಳೆರಾಯನ ಆರ್ಭಟಕ್ಕೆ ಕಂಗಾಲಾದ ಯಾದಗಿರಿ ಜನ
ಅಮೀನ್​ ಸಾಬ್​
| Updated By: ಕಿರಣ್ ಹನುಮಂತ್​ ಮಾದಾರ್|

Updated on: Sep 01, 2024 | 3:57 PM

Share

ಯಾದಗಿರಿ, ಸೆ.01: ಯಾದಗಿರಿ ಜಿಲ್ಲೆಯಾದ್ಯಂತ ಮಳೆರಾಯನ ಅಬ್ಬರ ಜೋರಾಗಿದೆ. ನಿನ್ನೆ(ಆ.31) ಸಂಜೆ ಆರಂಭವಾದ ಮಳೆ ಇನ್ನುವರೆಗೂ ಕಮ್ಮಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ನಗರದ ಹಲವು ಕಡೆ ರಸ್ತೆಗಳು ಸಂಪೂರ್ಣವಾಗಿ ಜಲಾವೃತ್ತಗೊಂಡಿದ್ದು, ಅಂಗಡಿ, ಶಾಲೆ ಹಾಗೂ ಮನೆಗಳಿಗೂ ಸಹ ನೀರು ನುಗ್ಗಿದೆ.

ಮಳೆಯಿಂದ ಜಿಲ್ಲೆಯಲ್ಲಿ ಹಲವು ಅವಾಂತರ

ಇನ್ನು ಮಳೆಯಿಂದಾಗಿ ಯಾದಗಿರಿ ತಾಲೂಕಿನ ಪಗಲಾಪುರ ಬಳಿಯ ಸೇತುವೆ ಸಂಪೂರ್ಣವಾಗಿ ಜಲಾವೃತ್ತಗೊಂಡಿದ್ದು, ಹಳ್ಳಕ್ಕೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದ್ದ ಸೇತುವೆ ಮುಳುಗಡೆಯಾಗಿದೆ. ಪಗಲಾಪುರ, ಮುಷ್ಟುರ್, ಶೆಟ್ಟಗೇರ, ಜೀನಕೇರ ಸೇರಿದಂತೆ ಹತ್ತಾರು ಹಳ್ಳಿಯ ಜನ ಯಾದಗಿರಿ ನಗರಕ್ಕೆ ಬರಬೇಕು ಅಂದರೆ ಇದೆ ಸೇತುವೆ ಮಾರ್ಗವಾಗಿ ಬರಬೇಕು. ಆದ್ರೆ, ಸೇತುವೆ ಮುಳುಗಡೆಯಿಂದಾಗಿ ವಾಹನ ಸಂಚಾರಕ್ಕೆ ತಾಲೂಕು ಆಡಳಿತ ನಿರ್ಬಂಧ ಹೇರಿದೆ. ಹೀಗಾಗಿ ಸ್ಥಳದಲ್ಲಿ ಪೊಲೀಸರನ್ನ ನಿಯೋಜನೆ ಮಾಡಿ ವಾಹನಗಳು ಸಂಚಾರ ಮಾಡದಂತೆ ಕ್ರಮ ವಹಿಸಲಾಗಿದೆ.

ಇದನ್ನೂ ಓದಿ:Karnataka Rains: ಕರ್ನಾಟಕದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಭಾರಿ ಮಳೆ

ಕಷ್ಟಪಟ್ಟು ಬೆಳೆದ ಬೆಳೆ ನೀರುಪಾಲು; ಕಂಗಾಲಾದ ರೈತ

ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಮಳೆ ಹೊಡೆತಕ್ಕೆ ನೂರಾರು ಎಕರೆ ಪ್ರದೇಶ ನೀರಿನಲ್ಲಿ ಮುಳುಗಿ ಹೋಗಿದೆ. ಜಮೀನುಗಳಿಗೆ ನೀರು ನುಗ್ಗಿದ ಕಾರಣಕ್ಕೆ ರಾಶಿಗೆ ಬಂದಿದ್ದ ಬೆಳೆಗಳು ನೀರು ಪಾಲಾಗಿವೆ. ಹೆಸರು ಮತ್ತು ಉದ್ದು ಬೆಳೆಯೋಕೆ ರೈತರು ಎಕರೆಗೆ 10 ರಿಂದ 15 ಸಾವಿರ ರೂ. ಖರ್ಚು ಮಾಡಿದ್ದರು. ಸದ್ಯ ರಾಶಿ ಮಾಡುವ ಹೊತ್ತಿನಲ್ಲೇ ಮಳೆರಾಯ ಆರ್ಭಟ ತೋರಿದ್ದರಿಂದ ಕೊಯಿಲೂರ್,ಪಗಲಾಪುರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ನೂರಾರು ಎಕರೆ ಬೆಳೆ ನೀರು ಪಾಲಾಗಿದೆ. ಕೇವಲ ಹೆಸರು ಮತ್ತು ಉದ್ದಿನ ಬೆಳೆ ಮಾತ್ರ ಅಲ್ಲದೆ ತೊಗರಿ ಮತ್ತು ಹತ್ತಿ ಬೆಳೆ ಸಹ ನೀರಿನಲ್ಲಿ ಮುಳುಗಡೆಯಾಗಿದೆ. ಬೆಳೆ ಕಳೆದುಕೊಂಡು ಅನ್ನದಾತರು ಕಂಗಲಾಗಿದ್ದಾರೆ.

ಶಾಲೆಗೆ ನುಗ್ಗಿದ ನೀರು

ಇನ್ನು ಇದೆ ಮಳೆಯಿಂದಾಗಿ ಕೊಯಿಲೂರ್ ಗ್ರಾಮದ ಪ್ರತಿಯೊಂದು ರಸ್ತೆಗಳು ಸಂಪೂರ್ಣವಾಗಿ ಜಲಾವೃತ್ತಗೊಂಡಿವೆ. ಗ್ರಾಮದಲ್ಲಿ ಜನ ಓಡಾಡುವುದಕ್ಕೂ ಸಹ ಕಷ್ಟ ಆಗಿದೆ. ಇದೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೂ ನೀರು ನುಗ್ಗಿದೆ. ಮಳೆ ನೀರು ನುಗ್ಗಿದ್ದರಿಂದ ಶಾಲೆಯ ಮೈದಾನ ಸ್ವೀಮಿಂಗ್ ಫುಲ್ ಆಗಿ ಬದಲಾಗಿದೆ. ಇನ್ನು ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಮಳೆ ನೀರು ಹೊರ ಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ. ಇನ್ನು ಮಳೆ ನೀರಿನಿಂದ ಹಾನಿಗೊಳಗಾದ ಪ್ರದೇಶಕ್ಕೆ ಯಾದಗಿರಿ ತಹಶೀಲ್ದಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಟ್ಟಿನಲ್ಲಿ ಯಾದಗಿರಿ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ರಸ್ತೆಗಳು ಜಮೀನುಗಳು ಜಲಾವೃತ್ತಗೊಂಡಿದ್ದು, ಜನ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅಧಿಕಾರಿಗಳು ಮನೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ