ಮೇವು, ನೀರಿಲ್ಲದೆ ಜಾನುವಾರುಗಳು ಪರದಾಟ, ಜಾತ್ರೆ-ಸಂತೆಗಳಲ್ಲಿ ಕಡಿಮೆ ಬೆಲೆಗೆ ರೈತರಿಂದ ಮಾರಾಟ
ಭೀಕರ ಬರಗಾಲ ಆವರಿಸಿಕೊಂಡಿದೆ. ಮಳೆಯಾಗದ ಕಾರಣಕ್ಕೆ ರೈತರ ಮುಂಗಾರು ಮತ್ತು ಹಿಂಗಾರು ಬೆಳೆ ಹಾಳಾಗಿ ಹೋಗಿದೆ. ಅನ್ನದಾತ ಬರಗಾಲದ ಕೂಪಕ್ಕೆ ಸಿಲುಕಿ ಒದ್ದಾಡುವಂತ ಪರಿಸ್ಥಿತಿ ಎದುರಾಗಿದೆ. ಇನ್ನೊಂದು ಕಡೆ ಜಮೀನಿನಲ್ಲಿ ಮೇವಿಲ್ಲ, ಕುಡಿಯುವುದಕ್ಕೂ ನೀರು ಸಿಗದೆ ಜಾನುವಾರುಗಳು ಹೈರಾಣಾಗಿವೆ. ಇದೆ ಕಾರಣಕ್ಕೆ ರೈತರು ಜಾನುವಾರುಗಳನ್ನ ಸಂತೆಗಳಲ್ಲಿ, ಜಾತ್ರೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.
ಯಾದಗಿರಿ, ಏ.11: ಭೀಕರ ಬರಗಾಲಕ್ಕೆ ಕಂಗಾಲಾಗಿರುವ ಯಾದಗಿರಿ(Yadgiri) ಜಿಲ್ಲೆಯ ರೈತರು, ಜಾನುವಾರುಗಳನ್ನು ಸಾಕಾಲಾಗಿದೆ ಜಾತ್ರೆ-ಸಂತೆಗಳಲ್ಲಿ ಸಿಕ್ಕ ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಂಡು ಕೇಳರಿಯದಂತ ಭೀಕರ ಬರಗಾಲ ಆವರಿಸಿಕೊಂಡಿದೆ. ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಕಾರಣಕ್ಕೆ ಅನ್ನದಾತರು, ಮುಂಗಾರು-ಹಿಂಗಾರು ಬೆಳೆಯನ್ನ ಕಳೆದುಕೊಂಡು ಕಂಗಾಲಾಗಿ ಹೋಗಿದ್ದಾರೆ. ಇನ್ನೊಂದು ಕಡೆ ಮಳೆ ಕೊರತೆಯಿಂದ ಬರಗಾಲ ಆವರಿಸಿದ್ದರಿಂದ ನದಿಗಳು, ಕೆರೆಗಳು, ಹಳ್ಳ-ಕೊಳ್ಳಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಜನ ಜಾನುವಾರುಗಳಿಗೆ ಕುಡಿಯುವುದಕ್ಕೂ ನೀರು ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಜನರು ಹೇಗಾದರೂ ಮಾಡಿ ದುಡ್ಡು ಕೊಟ್ಟು ನೀರು ಖರೀದಿ ಮಾಡಿ ದಾಹ ತೀರಿಸಿಕೊಳ್ಳಬಹುದು. ಆದ್ರೆ, ಜಾನುವಾರುಗಳ ಸ್ಥಿತಿ ಹೇಳತೀರದಾಗಿದೆ. ಬೆಳಗ್ಗೆ ಜಮೀನುಗಳಿಗೆ ಹೋಗುವ ಜಾನುವಾರುಗಳಿಗೆ ತಿನ್ನುವುದಕ್ಕೆ ಮೇವು, ಕುಡಿಯುವುದಕ್ಕೆ ಹನಿ ನೀರು ಸಿಗುತ್ತಿಲ್ಲ. ಇರುವ ಅಲ್ವಸ್ವಲ್ಪ ನೀರು ಕೂಡ ತಾಪಮಾನಕ್ಕೆ ಬತ್ತಿ ಹೋಗಿದೆ. ಇದೆ ಕಾರಣಕ್ಕೆ ರೈತರಿಗೆ ಜಾನುವಾರುಗಳ ಹೊಟ್ಟೆ ತುಂಬಿಸಲು ಆಗುತ್ತಿಲ್ಲ. ಈ ಹಿನ್ನಲೆ ಯಾದಗಿರಿ ಜಿಲ್ಲೆಯ ರೈತರು, ಎಲ್ಲಿ ಜಾತ್ರೆ, ಸಂತೆಗಳು ಇರುತ್ತವೆಯೋ ಅಲ್ಲಿಗೆ ಹೋಗಿ ಜಾನುವಾರುಗಳನ್ನ ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ:ನೀರಿಲ್ಲದೆ ಘಟಪ್ರಭಾ ನದಿ ಖಾಲಿ: ಸರ್ಕಾರದ ವಿರುದ್ಧ ರೈತರು ಆಕ್ರೋಶ, ಉಗ್ರ ಪ್ರತಿಭಟನೆ ಎಚ್ಚರಿಕೆ
ಯಾದಗಿರಿ ಜಿಲ್ಲೆಯಲ್ಲಿ ಈ ಬಾರಿ ಭೀಕರ ಬರಗಾಲ ಆವರಿಸಿಕೊಂಡಿದ್ದ ಕಾರಣಕ್ಕೆ ರೈತರು ಕಂಗಲಾಗಿ ಹೋಗಿದ್ದಾರೆ. ಅದರಲ್ಲೂ ಜಿಲ್ಲೆಯ ಜನರ ಜೀವನಾಡಿಯಾಗಿದ್ದ ಕೃಷ್ಣ ಮತ್ತು ಭೀಮಾ ನದಿಗಳು ಬತ್ತಿ ಹೋಗಿವೆ. ಇದರಿಂದ ಜೀವ ಜಲಕ್ಕಾಗಿ ಹಾಹಾಕಾರ ಶುರುವಾಗಿದೆ. ಮುಂಗಾರು ಮತ್ತು ಹಿಂಗಾರು ಬೆಳೆಗಳು ಕೈಕೊಟ್ಟ ಕಾರಣಕ್ಕೆ ರೈತರ ಬಳಿ ಮೇವಿನ ಕೊರತೆ ಎದುರಾಗಿದೆ. ರೈತರಲ್ಲಿ ಕಳೆದ ಬಾರಿಯಂತೆ ಈ ಬಾರಿ ಕೂಡ ಮೇವು ಸಿಗುತ್ತಿಲ್ಲ. ಕಳೆದ ಬಾರಿ ಮುಂಗಾರು ಮತ್ತು ಹಿಂಗಾರು ಬೆಳೆ ಚೆನ್ನಾಗಿ ಬಂದ ಕಾರಣಕ್ಕೆ ಯಾದಗಿರಿ ಜಿಲ್ಲೆಯ ರೈತರು ಬೆಸಿಗೆ ಮುಗಿಯುವ ತನಕ ಮೇವು ಸಂಗ್ರಹ ಮಾಡಿಕೊಂಡಿದ್ದರು. ಆದ್ರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು, ಮೇವು ಕೊರತೆಯಿದೆ.
ಇದರ ಜೊತೆಗೆ ಜಲಮೂಲಗಳು ಖಾಲಿಯಾಗಿದ್ದ ಕಾರಣಕ್ಕೆ ಜಾನುವಾರುಗಳಿಗೆ ಕುಡಿಯುವುದಕ್ಕೂ ನೀರು ಸಿಗುತ್ತಿಲ್ಲ. ಇನ್ನು ಭೀಕರ ಬರಗಾಲ ಆವರಿಸಿಕೊಂಡು ಜಾನುವಾರುಗಳು ಒದ್ದಾಡುತ್ತಿದ್ದರೂ ಸಹ ಸರ್ಕಾರದಿಂದ ಮೇವು ಬ್ಯಾಂಕ್ ಆರಂಭಿಸುವ ಕೆಲಸ ಆಗಿಲ್ಲ. ಕೊನೆಗೆ ಜಾನುವಾರುಗಳು ಬದುಕಿಸುವುದು ಕಷ್ಟ ಎಂದುಕೊಂಡ ರೈತರು, ಮಾರಾಟ ಮಾಡುತ್ತಿದ್ದಾರೆ. ಇನ್ನು 1 ಲಕ್ಷಕ್ಕೆ ಮಾರಾಟವಾಗಬೇಕಾಗಿರುವ ಎತ್ತುಗಳನ್ನ 50 ರಿಂದ 60 ಸಾವಿರ ರೂ. ಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಮೇವು ಬ್ಯಾಂಕ್ ಆರಂಭಿಸುವ ಕೆಲಸ ಮಾಡದೇ ಹೋದರೆ, ಮುಂದಿನ ವರ್ಷ ರೈತರು ಕೃಷಿ ಕಾಯಕ ಮಾಡಲಾರದ ಸ್ಥಿತಿ ಎದುರಾಗುತ್ತದೆ ಎಂದು ರೈತ ಮುಖಂಡರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಭೀಕರ ಬರಗಾಲದಿಂದ ಜನ-ಜಾನುವಾರುಗಳು ಅಕ್ಷರಶ ಕಂಗಲಾಗಿ ಹೋಗಿದೆ. ಇದರಿಂದ ಜಲ ಮೂಲಗಳು ಬತ್ತಿ ಹೋಗಿವೆ. ಜೊತೆಗೆ ಜಾನುವಾರುಗಳಿಗೆ ಕುಡಿಯುವುದಕ್ಕೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ಕೊನೆಗೆ ಜಾನುವಾರುಗಳನ್ನ ಮಾರಾಟ ಮಾಡುವಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ