Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಫೋಟಕ ಪತ್ತೆ ಕಾರ್ಯ ಮಾಡ್ತಿದ್ದ ಕ್ಯಾಂಡಿ ಚಿಕಿತ್ಸೆ ಫಲಕಾರಿಯಾಗದೆ ಸಾವು; ಯಾದಗಿರಿಯಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಯಾದಗಿರಿ ಪೊಲೀಸ್ ಇಲಾಖೆಯ ಡಾಗ್ ಸ್ಕ್ವಾಡ್ ಶ್ವಾನವು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಕಳೆದ 2013 ಸೆಪ್ಟೆಂಬರ್ ತಿಂಗಳಲ್ಲಿ ಕ್ಯಾಂಡಿ ಜನಿಸಿತು. 2014 ರಲ್ಲಿ ತರಬೇತಿ ನೀಡಲಾಗಿದೆ. ಲ್ಯಾಬ್ರಾಡರ್ ರೆಟ್ರಿವರ್ ತಳಿಯ ಕ್ಯಾಂಡಿಯು ಅತ್ಯಂತ ಚುರುಕಾಗಿತ್ತು.

ಸ್ಫೋಟಕ ಪತ್ತೆ ಕಾರ್ಯ ಮಾಡ್ತಿದ್ದ ಕ್ಯಾಂಡಿ ಚಿಕಿತ್ಸೆ ಫಲಕಾರಿಯಾಗದೆ ಸಾವು; ಯಾದಗಿರಿಯಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
ಕ್ಯಾಂಡಿ
Follow us
TV9 Web
| Updated By: ಆಯೇಷಾ ಬಾನು

Updated on:Mar 14, 2022 | 4:31 PM

ಯಾದಗಿರಿ: ಪೊಲೀಸರ ಅಚ್ಚುಮೆಚ್ಚಿನ ಕ್ಯಾಂಡಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ವರ್ಗದ ಪ್ರತಿಯೊಬ್ಬರು ಈ ಶ್ವಾನವನ್ನು ಕ್ಯಾಂಡಿ ಕ್ಯಾಂಡಿ ಎಂದು ಕರೆಯುತ್ತಿದ್ದರು. ಆದರೆ, ಎಲ್ಲರ ಪ್ರೀತಿಗೆ ಪಾತ್ರವಾದ ಕ್ಯಾಂಡಿ ಸಾವಿನ ಸುದ್ದಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರ ಕಣ್ಣಲ್ಲಿ ನೀರು ತರಿಸಿದೆ. ಅನೇಕ ಸ್ಫೋಟಕ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಡಾಗ್ ಸ್ಕ್ವಾಡ್ ಡಾಗ್ ಕಳೆದುಕೊಂಡು ಪೊಲೀಸ್ ಇಲಾಖೆಯು ಈಗ ಕಣ್ಣೀರು ಹಾಕಿದೆ.

ಯಾದಗಿರಿ ಪೊಲೀಸ್ ಇಲಾಖೆಯ ಡಾಗ್ ಸ್ಕ್ವಾಡ್ ಶ್ವಾನವು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಕಳೆದ 2013 ಸೆಪ್ಟೆಂಬರ್ ತಿಂಗಳಲ್ಲಿ ಕ್ಯಾಂಡಿ ಜನಿಸಿತು. 2014 ರಲ್ಲಿ ತರಬೇತಿ ನೀಡಲಾಗಿದೆ. ಲ್ಯಾಬ್ರಾಡರ್ ರೆಟ್ರಿವರ್ ತಳಿಯ ಕ್ಯಾಂಡಿಯು ಅತ್ಯಂತ ಚುರುಕಾಗಿತ್ತು. ಸ್ಫೋಟಕ ಪತ್ತೆ ಹಚ್ಚುವ ಕಾರ್ಯ ಸೇವೆ ಮಾಡಿದೆ. ಯಾದಗಿರಿ ಪೊಲೀಸ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದೆ.

ಪಿಎಂ ಮೋದಿ ಕಾರ್ಯಕ್ರಮಕ್ಕೆ ಕರ್ತವ್ಯ ನಿರ್ವಹಿಸಿದ ಕ್ಯಾಂಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಚುನಾವಣೆ ಪ್ರಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ಕಲಬುರಗಿಗೆ ಅಗಮಿಸಿದ ವೇಳೆ ಬಂದೋಬಸ್ತ್ ಕರ್ತವ್ಯ ಮಾಡಿದೆ. ಅದೆ ರೀತಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಾಜ್ಯಕ್ಕೆ ಆಗಮಿಸಿದಾಗ ಸ್ಫೋಟಕ ಪತ್ತೆ ಹಚ್ಚುವ ಕಾರ್ಯ ಮಾಡಿದೆ. ಯಾದಗಿರಿ ಜಿಲ್ಲೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಆಗಮಿಸಿದಾಗ ಭದ್ರತೆ ಕರ್ತವ್ಯ ಪಾಲಿಸಿದೆ.

Yadgir Police dog Death 2

ಸರ್ಕಾರಿ ಗೌರವದೊಂದಿಗೆ ಕ್ಯಾಂಡಿ ಅಂತ್ಯಕ್ರಿಯೆ

ಮೈಸೂರು ದಸರಾ, ಹಂಪಿ ಉತ್ಸವ ಹಾಗೂ ಬೆಳಗಾವಿ ಅಧಿವೇಶನದಲ್ಲಿ ಕ್ಯಾಂಡಿ ಸುಮಾರು 175 ವಿಐಪಿ ಬಂದೋಬಸ್ತ್ ಕರ್ತವ್ಯಗಳಲ್ಲಿ ಎ.ಎಸ್.ಸಿ.ತಂಡದೊಂದಿಗೆ ಭಾಗವಹಿಸಿದೆ. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಯಾದಗಿರಿ ನಗರದ ಜನನಿಬಿಡ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡಿದೆ.

ಚಿಕಿತ್ಸೆ ಫಲಕಾರಿಯಾಗದೆ ಸಾವು ನೆಚ್ಚಿನ ಕ್ಯಾಂಡಿಗೆ ಅನಾರೋಗ್ಯ ಹಿನ್ನೆಲೆ ಜಿಲ್ಲಾ ಪಶು ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕ್ಯಾಂಡಿ ಇಂದು ಮೃತಪಟ್ಟಿದೆ. ಕ್ಯಾಂಡಿ ಸಾವಿನ ಸುದ್ದಿ ಕೇಳಿ ಕುಟುಂಬದ ಸದಸ್ಯರನ್ನು ಕಳೆದುಕೊಂಡಂತಾಗಿತ್ತು.

ಕ್ಯಾಂಡಿ ಸಾವಿಗೆ ಕಣ್ಣೀರು ಕ್ಯಾಂಡಿ ಶ್ವಾನದ ಹ್ಯಾಂಡ್ಲರ್ ಆದ ಹೆಡ್ ಕಾನ್ಸ್ಟೇಬಲ್ ಸೋಮಣ್ಣಗೌಡ ಕಣ್ಣೀರು ಹಾಕಿದರು. ಶ್ವಾನದ ಜೊತೆ ಸದಾ ಒಡನಾಟ ಹೊಂದಿದ್ದ ಸೋಮಣ್ಣಗೌಡ ಕಣ್ಣೀರು ಹಾಕುವ ದೃಶ್ಯವು ಹೃದಯ ಕಲುಕುವಂತಿತ್ತು. ಈ ಬಗ್ಗೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ಕ್ಯಾಂಡಿ ಶ್ವಾನವು ಸ್ಫೋಟಕ ಪತ್ತೆ ಕಾರ್ಯದಲ್ಲಿ ತೊಡಗಿತ್ತು. 175 ವಿಐಪಿಗಳ ಭದ್ರತೆ ಕಾರ್ಯದಲ್ಲಿ ತೊಡಗಿದೆ. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗಿದೆ ಎಂದರು.

ಪೊಲೀಸ್ ಕವಾಯತು ಮೈದಾನದಲ್ಲಿ ಕ್ಯಾಂಡಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಆಗಮಿಸಿ ನೆಚ್ಚಿನ ಕ್ಯಾಂಡಿಯ ಅಂತಿಮ ದರ್ಶನ ಪಡೆದರು. ಸಕಲ ಸರಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು. ಈ ವೇಳೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಡಿವೈಎಸ್ಪಿ ವಿರೇಶ, ಆರ್ ಪಿಐ ರಾಚಪ್ಪ ಅವರು ಅಂತ್ಯಕ್ರಿಯೆ ಕಾರ್ಯದಲ್ಲಿ ಭಾಗಿಯಾದರು.

ಇದನ್ನೂ ಓದಿ: The Kashmir Files: ‘ದಿ ಕಾಶ್ಮೀರ್ ಫೈಲ್ಸ್’ ಐಎಂಡಿಬಿ ರೇಟಿಂಗ್​ನಲ್ಲಿ ಧಿಡೀರ್ ಕುಸಿತ; ವಿವೇಕ್ ಅಗ್ನಿಹೋತ್ರಿ ಅಸಮಾಧಾನ

Published On - 4:30 pm, Mon, 14 March 22