
ಬೆಳಗಾವಿ, ಡಿಸೆಂಬರ್ 11: ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ‘ಬ್ರೇಕ್ಫಾಸ್ಟ್’ ಮೀಟಿಂಗ್ ಮಾಡಿದ್ದಾಯಿತು. ನಾನ್ ವೆಜ್ ಊಟವೂ ಮುಗೀತು. ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಘಂಟಾಘೋಷವಾಗಿ ಹೇಳಿಯೂ ಆಯಿತು. ಆದರೆ, ಕಾಂಗ್ರೆಸ್‌ನಲ್ಲಿ ಕುರ್ಚಿ ಕ್ರಾಂತಿಯ ಕಿಚ್ಚು ಮಾತ್ರ ಆರಿಲ್ಲ. ಎಲ್ಲವೂ ತಣ್ಣಗಾಯ್ತು ಎನ್ನುವಾಗಲೇ ಮತ್ತೆ ಸಿಎಂ ಪುತ್ರ ಯತೀಂದ್ರ ಅಧಿಕಾರ ಹಂಚಿಕೆ ವಿಚಾರವಾಗಿ ಮಾತನಾಡಿದ್ದಾರೆ. ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಕೂಡ ಸ್ಪಷ್ಟವಾಗಿ ಹೇಳಿದೆ ಎಂದು ಪುನರುಚ್ಛರಿಸಿದ್ದಾರೆ.
ಮೂರು ದಿನದ ಹಿಂದೆಯಷ್ಟೇ ‘ಟಿವಿ9’ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದ ಯತೀಂದ್ರ, ಡಿಕೆ ಶಿವಕುಮಾರ್ ಸಹ ಸಿಎಂ ಆಕಾಂಕ್ಷಿಯಾಗಿದ್ದು, ಅವಕಾಶ ಮಾಡಿ ಕೊಡಿ ಎಂದು ಕೇಳಿದ್ದರು. ಆದರೆ ಹೈಕಮಾಂಡ್, ನಾಯಕತ್ವ ಬದಲಾವಣೆ ಪರಿಸ್ಥಿತಿ ಇಲ್ಲ ಎಂದಿತ್ತು ಎಂಬುದಾಗಿ ತಿಳಿಸಿದ್ದರು.
ಈ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಮನೆಯಲ್ಲಿ ಕುರ್ಚಿ ವಿಚಾರವಾಗಿ ಮತ್ತೆ ಕಂಪನ ಉಂಟಾಗಿತ್ತು. ಇದೀಗ ಮತ್ತೆ ಪುನರುಚ್ಛರಿಸಿರುವ ಯತೀಂದ್ರ, ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲ ಎಂದು ಹೈಕಮಾಂಡ್ ಹೇಳಿರುವುದಾಗಿ ಕಡ್ಡಿಮುರಿದಂತೆ ಹೇಳಿದ್ದಾರೆ. ಅಧಿವೇಶನದ ಹೊತ್ತಲ್ಲೇ ಯತೀಂದ್ರ ಹೇಳಿಕೆ ನೀಡಿದ್ದು, ಕಾಂಗ್ರೆಸ್‌ನಲ್ಲಿ ಮತ್ತೆ ಕಂಪನ ಸೃಷ್ಟಿಸಿದೆ.
ಯತೀಂದ್ರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಇದಕ್ಕೆಲ್ಲಾ ಸಿಎಂ ಸಿದ್ದರಾಮಯ್ಯ ಉತ್ತರ ಕೊಡುತ್ತಾರೆ ಎಂದು ಚೆಂಡನ್ನು ಸಿಎಂ ಅಂಗಳಕ್ಕೆ ಎಸೆದಿದ್ದಾರೆ.
ಪದೇ ಪದೇ ತಂದೆ ಪರ ಬ್ಯಾಟ್ ಬೀಸುತ್ತಿರುವ ಯತೀಂದ್ರ ಹೇಳಿಕೆ ಡಿಕೆ ಶಿವಕುಮಾರ್ ಬಣವನ್ನು ಕೆರಳಿಸಿದೆ. ಯತೀಂದ್ರಗೆ ಶಾಸಕ ಇಕ್ಬಾಲ್ ಹುಸೇನ್ ತಿರುಗೇಟು ಕೊಟ್ಟಿದ್ದಾರೆ. ಯಾರಿಗೂ ಕೂಡಾ ವರಿಷ್ಠರ ಸ್ಥಾನ ತುಂಬಲು ಅವಕಾಶವಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಯತೀಂದ್ರ ಏನು ಹೇಳಿದ್ದಾರೋ ಅವರನ್ನೇ ಕೇಳಿ ಎಂದ ಭೈರತಿ ಸುರೇಶ್, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ.
ಒಂದೆಡೆ ಯತೀಂದ್ರ ಹೇಳಿಕೆ ಸಂಚಲನ ಸೃಷ್ಟಿಸಿದ್ದರೆ, ಮತ್ತೊಂದ್ಕಡೆ ಬೆಳಗಾವಿಯಲ್ಲಿ ಡಿನ್ನರ್ ರಾಜಕೀಯ ಜೋರಾಗಿದೆ. ಡಿನ್ನರ್ ಸಭೆಯ ಹೆಸರಲ್ಲಿ ಅಹಿಂದ ನಾಯಕರು ರಣತಂತ್ರ ರೂಪಿಸಿದ್ದಾರೆ. ಮಾಜಿ ಶಾಸಕ ಫಿರೋಜ್ ಸೇಠ್ ಮನೆಯಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಔತಣಕೂಟದಲ್ಲಿ ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಖಾದರ್, ಸಚಿವರಾದ ಜಮೀರ್, ಸತೀಶ್ ಜಾರಕಿಹೊಳಿ, ಹೆಚ್ಸಿ ಮಹದೇವಪ್ಪ, ಭೈರತಿ ಸುರೇಶ್ ಭಾಗಿಯಾಗಿದ್ದರು. ಹಾಗೆಯೇ ಶಾಸಕರಾದ ಪ್ರಸಾದ್ ಅಬ್ಬಯ್ಯ, ಆಸೀಫ್ ಸೇಠ್, ಅಶೋಕ್ ಪಟ್ಟಣ, ಖನಿಜ್ ಫಾತಿಮಾ, ರಿಜ್ವಾನ್ ಅರ್ಷದ್, ಎಂಎಲ್ಸಿ ಸಲೀಂ ಭಾಗಿಯಾಗಿದ್ದಾರೆ. ಡಿನ್ನರ್ ಮೀಟಿಂಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಗೈರಾಗಿದ್ದು, ಅವರ ಆಪ್ತರೂ ಹಾಜರಾಗಿರಲಿಲ್ಲ.
ಡಿನ್ನರ್ ಮೀಟಿಂಗ್ ಬಗ್ಗೆ ಗುಟ್ಟು ಬಿಟ್ಟುಕೊಡದ ನಾಯಕರು, ಯಾವುದೇ ರಾಜಕೀಯ ಚರ್ಚೆಯಾಗಿಲ್ಲ ಎನ್ನುತ್ತಿದ್ದಾರೆ. ಆದರೆ, ಡಿನ್ನರ್ ಮೀಟಿಂಗ್‌ನಲ್ಲಿ ಅಹಿಂದ ನಾಯಕರು ಸಿದ್ದರಾಮಯ್ಯ ಪರ ಬಹುಪರಾಕ್ ಹಾಕಿರುವುದು ಮೂಲಗಳಿಂದ ತಿಳಿದುಬಂದಿದೆ. ನೀವೇ ನಮ್ಮ ನಾಯಕ. ಅಲ್ಪಸಂಖ್ಯಾತರ ಪರವಾಗಿ ಇರುವ ನಾಯಕರು ನೀವೇ. ನಮ್ಮ ಜನ ನಿಮ್ಮನ್ನ ನಂಬಿ ವೋಟ್ ಹಾಕಿದಾರೆ. ನಾವು ನಿಮ್ಮ ಜತೆ ಇರ್ತೇವೆ ಮುಂದುವರೆಯಿರಿ ಎಂದು ಅಲ್ಪಸಂಖ್ಯಾತ ನಾಯಕರು ಸಿದ್ದರಾಮಯ್ಯಗೆ ಅಭಯ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಎಂದ ಯತೀಂದ್ರ: ಮಾರ್ಮಿಕವಾಗಿ ಉತ್ತರ ಕೊಟ್ಟ ಡಿ.ಕೆ. ಶಿವಕುಮಾರ್
ಇದರ ಜೊತೆಗೆ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಎಸ್‌ಟಿ ನಾಯಕರು ಕೂಡಾ ಡಿನ್ನರ್ ಮೀಟಿಂಗ್ ಮಾಡಿದ್ದಾರೆ. ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಕುತೂಹಲ ಮೂಡಿಸಿದೆ.