
[lazy-load-videos-and-sticky-control id=”69BueS3J-fY”]
ಬೆಂಗಳೂರು: ಮಳೆರಾಯನ ಅವಾಂತರಕ್ಕೆ ರಾಜ್ಯದ ಹಲವು ಭಾಗಗಳು ನಲುಗಿ ಹೋಗಿದೆ. ಆದರೆ, ಈ ನಡುವೆ ಕೆಲವು ಯುವಕರು ಹಾಗೂ ಚಿಣ್ಣರು ಮಳೆಯಲ್ಲಿ ಮೋಜು ಮಸ್ತಿ ಮಾಡಲು ಸಹ ಮುಂದಾಗಿದ್ದಾರೆ.
ನೇತ್ರಾವತಿ ನದಿಯಲ್ಲಿ ಯುವಕರ ಮೋಜು ಮಸ್ತಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ನದಿಯ ಹರಿವು ಕೊಂಚ ಕಡಿಮೆಯಾಗಿದೆ. ಆದ್ದರಿಂದ ಬಂಟ್ವಾಳದ ಕೆಲ ಯುವಕರು ಸಂದರ್ಭ ಬಳಸಿಕೊಂಡು ಮೋಜು ಮಸ್ತಿಯಲ್ಲಿ ತೊಡಗಿಕೊಂಡರು.
ಬಂಟ್ವಾಳದ ಪಾಣೆಮಂಗಳೂರಿನಲ್ಲಿ ಸ್ಥಳೀಯ ಯುವಕರು ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಜಲ ಸಾಹಸಕ್ಕೆ ಮುಂದಾದರು. ಜಿಲ್ಲೆಯಲ್ಲಿ ಇಂದು ಕೂಡಾ ರೆಡ್ ಅಲರ್ಟ್ ಇದ್ದು ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಆದರೂ ಹದಿಹರೆಯದ ಬಿಸಿರಕ್ತದ ಯುವಕರು ಮಾತ್ರ ನೀರಗೆ ಡೈವ್ ಹೊಡೆಯುತ್ತಾ ಮಜಾ ಮಾಡಿದರು.
ಬಾಲಿವುಡ್ ಹಾಡಿಗೆ ನದಿಗೆ ಡೈವ್ ಹೊಡೆದ ಯುವಕ
ಇನ್ನು ಇತ್ತ ಉತ್ತರ ಕರ್ನಾಟಕದ ಬಾಗಲಕೋಟೆಯಲ್ಲೂ ಯುವಕನೊಬ್ಬನ ಹುಚ್ಚು ಸಾಹಸ ಬೆಳಕಿಗೆ ಬಂದಿದೆ. ಘಟಪ್ರಭಾ ನದಿ ಪ್ರವಾಹದಲ್ಲೂ ಯುವಕ ಹುಚ್ಚು ಸಾಹಸಕ್ಕೆ ಮುಂದಾಗಿದ್ದಾನೆ. ಬಾಲಿವುಡ್ನ ಹಿಂದಿ ಹಾಡಿಗೆ ನದಿಗೆ ಡೈವ್ ಹೊಡೆದ ಯುವಕ ತನ್ನ ಕಪಿಚೇಷ್ಟೆಯ ವಿಡಿಯೋ ಬೇರೆ ತೆಗೆದಿದ್ದಾನೆ. ಇದೀಗ ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಸಹ ಆಗಿದೆ.
ಸ್ಲೋಮೋಷನ್ ವಿಡಿಯೊ ತೆಗೆದಿರುವ ಯುವಕ ಜಿಲ್ಲೆಯ ಮುಧೋಳ -ಯಾದವಾಡ ಘಟಪ್ರಭಾ ಸೇತುವೆ ಮೇಲಿಂದ ಜಂಪ್ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಯುವಕನ ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಅವನನ್ನ ಹಿಡಿಯಲು ಮುಂದಾಗಿದ್ದಾರಂತೆ.
ಹೆದ್ದಾರಿ ಬಂದ್, ಚಿಣ್ಣರ ಮೋಜು ಮಸ್ತಿ ಶುರು
ಇನ್ನು ಮೈಸೂರಿನ ಊಟಿ ಹೆದ್ದಾರಿಯಲ್ಲಿ ಮಕ್ಕಳ ಮೋಜಿನಾಟ ನೋಡಲು ಬಲು ಚಂದವಾಗಿತ್ತು. ಪ್ರವಾಹದಿಂದ ನಂಜನಗೂಡಿನ ಮಲ್ಲನ ಮೂಲೆ ಮಠದ ಬಳಿ ನೀರು ಹರಿದು ಬಂದು ಹೆದ್ದಾರಿ ಜಲಾವೃತಗೊಂಡಿದೆ. ಹೀಗಾಗಿ, ಆಡಳಿತದಿಂದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹಾಗಾಗಿ, ಯಾವುದೇ ಆತಂಕ ಇಲ್ಲದೆ ಪುಟಾಣಿಗಳು ಬಿಂದಾಸ್ ಆಗಿ, ನೀರಿನಲ್ಲಿ ಆಟವಾಡುತ್ತಾ ಸಂಭ್ರಮಿಸಿದರು.
Published On - 2:28 pm, Sun, 9 August 20