ಕೋಲಾರ: ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯೂಟ್ಯೂಬ್ ಚಾನೆಲ್ ವರದಿಗಾರ
ತಮ್ಮ ಡೆತ್ ನೋಟ್ನಲ್ಲಿ ಶ್ರೀಧರ್ ತಾನು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲವೆಂದು ಬರೆದುಕೊಂಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ರಾಬರ್ಟ್ಸನ್ ಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೋಲಾರ: ಯೂಟ್ಯೂಬ್ ಚಾನಲ್ ಒಂದರ ವರದಿಗಾರನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ ನಡೆದಿದೆ. ವಿ.ಟಿವಿ ಹೆಸರಿನ ಯೂಟ್ಯೂಬ್ ಚಾನಲ್ನ ವರದಿಗಾರ ಶ್ರೀಧರ್(45) ಆತ್ಮಹತ್ಯೆಗೆ ಶರಣಾದ ವರದಿಗಾರ. ಕಳೆದ ಹಲವು ವರ್ಷಗಳಿಂದ ಕೆಜಿಎಫ್ ನಗರದಲ್ಲಿ ಕೆಲವು ಸ್ಥಳೀಯ ಪತ್ರಿಕೆಗಳು ಹಾಗೂ ಯೂಟ್ಯೂಬ್ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀಧರ್ ಸಕ್ರಿಯ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದರು. ಈ ನಡುವೆ ಕೆಜಿಎಫ್ನ ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯೊಬ್ಬಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪೊಲೀಸರು ಕರೆದು ವಿಚಾರಣೆ ನಡೆಸಿದ್ದರು ಎನ್ನಲಾಗಿದ್ದು ಇದರಿಂದ ಮನನೊಂದು ಆತ್ಮಹತ್ಯೆ ನಿರ್ಧಾರ ಮಾಡಿರಬಹುದು ಎನ್ನಲಾಗಿದೆ.
ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಧರ್ ಅವರನ್ನು ನಿನ್ನೆ ವಿಚಾರಣೆ ನಡೆಸಿದ್ದರು, ಜೊತೆಗೆ ಕರೆದಾಗ ವಿಚಾರಣೆ ಬರುವಂತೆ ಹೇಳಿ ಕಳಿಸಿದ್ದರು. ನಿನ್ನೆ ರಾತ್ರಿ ವಿಚಾರಣೆ ಮುಗಿಸಿಕೊಂಡು ಬಂದಿದ್ದ ಶ್ರೀಧರ್ ಇಂದು ಬೆಳಗ್ಗೆ ಮನೆಯಿಂದ ಬಂದವರೇ ಕೆಜಿಎಫ್ ರಾಬರ್ಟ್ಸನ್ ಪೇಟೆ ಬಸ್ ನಿಲ್ದಾಣದ ಬಳಿ ಇರುವ ತಮ್ಮ ವಿಟಿವಿ ಯೂಟ್ಯೂಬ್ ಚಾನಲ್ನ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ತಮ್ಮ ಡೆತ್ ನೋಟ್ನಲ್ಲಿ ಶ್ರೀಧರ್ ತಾನು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲವೆಂದು ಬರೆದುಕೊಂಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ರಾಬರ್ಟ್ಸನ್ ಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ‘ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸಾಕ್ಷಿಗಳು ಬೇಕಿದ್ದ ಹಿನ್ನೆಲೆ ಕರೆದು ವಿಚಾರಣೆೆಗೆಂದು ಕರೆದಿದ್ದೆವು. ಅವರಿಗೆ ಯಾವುದೇ ಒತ್ತಡ ಹಾಕಿರಲಿಲ್ಲ. ಅವರಿಂದ ಇನ್ನೂ ಸಾಕಷ್ಟು ಮಾಹಿತಿ ಪಡೆಯಬೇಕಿತ್ತು. ಅಷ್ಟರಲ್ಲೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆಸುತ್ತೇವೆ‘ ಎಂದು ಡಿವೈಎಸ್ಪಿ ಉಮೇಶ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ: ಶಾಸಕ ರಮೇಶ್ ಜಾರಕಿಹೊಳಿ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಇಲ್ಲಿದೆ ಕುತೂಹಲಕರ ವಿವರ
ಸುದ್ದಿ ವಿಶ್ಲೇಷಣೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಕಾಂಗ್ರೆಸ್ನಲ್ಲಿ ಈಗಲೇ ಹಲವಾರು ಮುಖ್ಯಮಂತ್ರಿಗಳು!
(YouTube channel reporter from Kolar who wrote a suicide note and committed suicide)
Published On - 6:57 pm, Sun, 20 June 21