Sooryavansham: ಸೂರ್ಯವಂಶಂ ಹಿಂದಿ ಸಿನಿಮಾದ ಬಗ್ಗೆ ಚಂದ್ರನ ಮೇಲಿರುವವರನ್ನು ಕೇಳಿದರೂ ಉತ್ತರ ಸಿಗುತ್ತೆ: ಅನುಪಮ್​ ಖೇರ್

| Updated By: ಸಾಧು ಶ್ರೀನಾಥ್​

Updated on: Mar 02, 2021 | 11:46 AM

Amitabh Bachchan: ಬಾಲಿವುಡ್​ನ ಖ್ಯಾತ ನಟ, ಬಿಗ್​ ಬಿ ಎಂದೇ ಹೆಸರಾದ ಅಮಿತಾಭ್ ಬಚ್ಚನ್ ಅಭಿನಯದ ಸೂರ್ಯವಂಶಂ ಸಿನಿಮಾ ತೆರೆಕಂಡು ಸುಮಾರು 2 ದಶಕ ಆಗಿದೆ. ಅಷ್ಟಾದರೂ ಇಂದಿಗೂ ಈ ಚಿತ್ರವನ್ನು ವಾಹಿನಿಯಲ್ಲಿ ಪದೇಪದೇ ಪ್ರಸಾರ ಮಾಡುತ್ತಲೇ ಇರುತ್ತಾರೆ.

Sooryavansham: ಸೂರ್ಯವಂಶಂ ಹಿಂದಿ ಸಿನಿಮಾದ ಬಗ್ಗೆ ಚಂದ್ರನ ಮೇಲಿರುವವರನ್ನು ಕೇಳಿದರೂ ಉತ್ತರ ಸಿಗುತ್ತೆ: ಅನುಪಮ್​ ಖೇರ್
ಸಂಗ್ರಹ ಚಿತ್ರ
Follow us on

ತಂತ್ರಜ್ಞಾನ ಬದಲಾದ ಮೇಲೆ ಮನರಂಜನೆಯ ವ್ಯಾಖ್ಯಾನವೂ ಬದಲಾಗಿದೆ. ಕಳೆದೊಂದು ದಶಕದಲ್ಲೇ ಮನರಂಜನಾ ಕ್ಷೇತ್ರ ಅತಿ ದೊಡ್ಡ ಮಟ್ಟದ ಸ್ಥಿತ್ಯಂತರಕ್ಕೆ ಸಾಕ್ಷಿಯಾಗಿದೆ. ಕೆಲ ವರ್ಷಗಳ ಹಿಂದೆ ಊರಿಗೊಂದೋ ಎರಡೋ ಟಿವಿ ಇರುತ್ತಿದ್ದ ಕಾಲದಲ್ಲಿ ಜನರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದ ಬಗೆಯನ್ನು ಈಗಿನ ಕಾಲದ ಮಕ್ಕಳಿಗೆ ಕಲ್ಪಿಸಿಕೊಳ್ಳಲೂ ಅಸಾಧ್ಯ. ಕಾಲ ಉರುಳಿದಂತೆ ಊರೂರಿಗೆ ಥಿಯೇಟರ್​ ಬಂದು, ಮನೆಮನೆಗೆ ಟಿವಿ ಬಂದು ಸಿನಿಲೋಕ ಜನರಿಗೆ ಮತ್ತಷ್ಟು ಹತ್ತಿರವಾಯಿತು. ಈಗೀಗ ಎಲ್ಲ ಮನೆಗಳೂ ಮೊಬೈಲ್​ ಮನೆಗಳಾಗಿದ್ದು, ಮೊಬೈಲ್​ ಬೆಡ್​ ರೂಮಿಗೂ ಪ್ರವೇಶ ಪಡೆದಿದ್ದು, ಅಲ್ಲಿಂದಲೇ ಮನರಂಜನೆ ಪ್ರಾಪ್ತಿಯಾಗುತ್ತಿರುವ ಕಾಲವಿದು!

ಪರಿಸ್ಥಿತಿ ಹೀಗಿರುವಾಗ, ಮೊದಮೊದಲು ಒಂದೇ ಸಿನಿಮಾವನ್ನು ವಾರಕ್ಕೆ ಹತ್ತು ಬಾರಿ ಹಾಕಿದರೂ ನೋಡುತ್ತಿದ್ದ ಜನರಿಗೆ ಕಾಲಕ್ರಮೇಣ ಅದು ಬೇಸರ ತರುವಂತಾಯಿತು. ಅಷ್ಟಾದರೂ ಇಂದಿಗೂ ಅದೆಷ್ಟೋ ಸಿನಿಮಾಗಳು ಪದೇ ಪದೇ ಟಿವಿ ವಾಹಿನಿಗಳಲ್ಲಿ ಪ್ರದರ್ಶನ ಕಾಣುತ್ತಲೇ ಇರುತ್ತವೆ. ಸಿನಿಮಾದ ಡೈಲಾಗ್​ಗಳು ಬಾಯಿಪಾಠವಾಗುವ ಮಟ್ಟಕ್ಕೂ ಕೆಲ ಸಿನಿಮಾಗಳು ಪ್ರದರ್ಶನ ಕಂಡಿದ್ದುಂಟು. ಇದೀಗ ಬಾಲಿವುಡ್​ನ ಹಿರಿಯ ನಟ ಅನುಪಮ್​ ಖೇರ್​ ಈ ವಿಷಯದ ಬಗ್ಗೆಯೇ ಟ್ವೀಟ್ ಮಾಡಿದ್ದಾರೆ. ಟ್ವೀಟ್​ನಲ್ಲಿ ಅಮಿತಾಭ್ ಬಚ್ಚನ್ ಅಭಿನಯದ ಸೂರ್ಯವಂಶಂ ಸಿನಿಮಾವನ್ನು ಪದೇಪದೇ ಪ್ರಸಾರ ಮಾಡುವ ಖಾಸಗಿ ವಾಹಿನಿಯ ಕಾಲೆಳೆದಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

ಬಾಲಿವುಡ್​ನ ಖ್ಯಾತ ನಟ, ಬಿಗ್​ ಬಿ ಎಂದೇ ಹೆಸರಾದ ಅಮಿತಾಭ್ ಬಚ್ಚನ್ ಅಭಿನಯದ ಸೂರ್ಯವಂಶಂ ಸಿನಿಮಾ ತೆರೆ ಕಂಡು ಸುಮಾರು 2 ದಶಕ ಆಗಿದೆ. ಅಷ್ಟಾದರೂ ಇಂದಿಗೂ ಈ ಚಿತ್ರವನ್ನು ವಾಹಿನಿಯಲ್ಲಿ ಪದೇಪದೇ ಪ್ರಸಾರ ಮಾಡುತ್ತಲೇ ಇರುತ್ತಾರೆ. ವಾರಕ್ಕೆ ಒಂದು ಅಥವಾ ಎರಡು ಬಾರಿಯಾದರೂ ಈ ಸಿನಿಮಾ ಟಿವಿ ಮೇಲೆ ಮೂಡಲೇಬೇಕು ಎನ್ನುವುದು ಸಂಪ್ರದಾಯದಂತೆ ಆಗಿಬಿಟ್ಟಿದೆ. ಮೊನ್ನೆ (ಫೆಬ್ರವರಿ 28) ಸಹ ಖಾಸಗಿ ವಾಹಿನಿಯಲ್ಲಿ ಈ ಸಿನಿಮಾ ಪ್ರಸಾರವಾಗಿದೆ. ಇದರ ಬಗ್ಗೆ ಅಂದು ಸಂಜೆ ಟ್ವೀಟ್​ ಮಾಡಿದ್ದ ವಾಹಿನಿ, ಸಿನಿಮಾ ಪ್ರಸಾರದ ಬಗ್ಗೆ ಹೇಳಿಕೊಂಡಿತ್ತು. ಆದರೆ, ಆ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ನಟ ಅನುಪಮ್​ ಖೇರ್ ವಾಹಿನಿಯ ಕಾಲೆಳೆದಿದ್ದಾರೆ.

ಸೂರ್ಯವಂಶಂ ಸಿನಿಮಾದಲ್ಲಿ ಅನುಪಮ್​ ಖೇರ್ ಸಹ ಅಭಿನಯಿಸಿದ್ದು, ಚಿತ್ರ ಪ್ರಸಾರದ ಬಗ್ಗೆ ವಾಹಿನಿಯು ವೀಕ್ಷಕರಿಗೆ ಕೇಳಿದ್ದ ಪ್ರಶ್ನೆಗೆ ತಮಾಷೆಯ ಉತ್ತರ ನೀಡಿದ್ದಾರೆ. ‘ನೀವು ಈ ಸಿನಿಮಾವನ್ನು ಅದೆಷ್ಟು ಸಲ ಪ್ರದರ್ಶಿಸಿದ್ದೀರಿ ಎಂದರೆ, ಈ ಪ್ರಶ್ನೆಯನ್ನು ಚಂದ್ರಲೋಕದಲ್ಲಿ ವಾಸಿಸುತ್ತಿರುವವರಿಗೆ ಕೇಳಿದರೂ ಉತ್ತರ ಸಿಗುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ. ಕಳೆದ ಬಾರಿ ಸೂರ್ಯವಂಶಂ 19 ವರ್ಷ ಪೂರೈಸಿದ ಸಂದರ್ಭದಲ್ಲೂ ಟ್ವೀಟ್ ಮಾಡಿದ್ದ ಅನುಪಮ್​ ಖೇರ್​, ಕಿರುತೆರೆ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ನೋಡಲ್ಪಟ್ಟ ಸಿನಿಮಾ ಸೂರ್ಯವಂಶಂ ಇರಬಹುದು! ಎಂದು ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ:
‘ಅನಾರೋಗ್ಯ..ಸರ್ಜರಿ’: ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಪೋಸ್ಟ್​ ನೋಡಿ ಅಭಿಮಾನಿಗಳಲ್ಲಿ ಆತಂಕ​

ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಸಿನಿಮಾ ಪ್ರದರ್ಶನಕ್ಕೆ ತಡೆ: ಮಹಾರಾಷ್ಟ್ರ ಕಾಂಗ್ರೆಸ್ ಬೆದರಿಕೆ