ಲೊಕೇಶನ್ ಮಾಹಿತಿ ಸೋರಿಕೆಗೆ ಆಪಲ್-ಗೂಗಲ್ ಕಡಿವಾಣ
ನಮ್ಮ ಸ್ಥಳ ವಿವರಗಳನ್ನು ಇತರ ಟೆಕ್ ಕಂಪೆನಿಗಳು ಪಡೆಯದಂತೆ ಮಾಡಲು ಆಪಲ್ ಮತ್ತು ಗೂಗಲ್ ಸಂಸ್ಥೆ ಜೊತೆಯಾಗಿ ಕೆಲಸ ಮಾಡುತ್ತಿವೆ.

ಟೆಕ್ ಕಂಪೆನಿಗಳು ಸಾಮಾನ್ಯವಾಗಿ ಬಳಕೆದಾರರ ಸ್ಥಳ ವಿವರಗಳನ್ನು (Location) ಪಡೆದುಕೊಳ್ಳುತ್ತದೆ. ಆಯಾ ಪ್ರದೇಶವನ್ನು ಆಧರಿಸಿ ಹೆಚ್ಚು ನಿಖರವಾದ ಮಾಹಿತಿ ನೀಡಲು ಇದು ಸಹಾಯ ಮಾಡುತ್ತದೆ. ಆದರೆ ಲೊಕೇಶನ್ ವಿವರಗಳು ಅಷ್ಟಕ್ಕೇ ಉಳಿಯುವುದಿಲ್ಲ. ಬದಲಾಗಿ ಇತರ ಸಂಸ್ಥೆಗಳೊಂದಿಗೆ ಅವುಗಳು ಹಂಚಿಕೆಯಾಗುತ್ತದೆ. ಇದರಿಂದ ಪಾರಾಗಲು ಬಳಕೆದಾರರು ಪರದಾಡುವುದೂ ಇದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಾಯುತ್ತಿರುವವರಿಗೆ ಸಂತಸದ ಸುದ್ದಿಯೊಂದು ಬರುವ ಸೂಚನೆ ಸಿಕ್ಕಿದೆ.
ನಮ್ಮ ಸ್ಥಳ ವಿವರಗಳನ್ನು ಇತರ ಟೆಕ್ ಕಂಪೆನಿಗಳು ಪಡೆಯದಂತೆ ಮಾಡಲು ಆಪಲ್ ಮತ್ತು ಗೂಗಲ್ ಸಂಸ್ಥೆ ಜೊತೆಯಾಗಿ ಕೆಲಸ ಮಾಡುತ್ತಿವೆ. ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯ ವರದಿಯಂತೆ, ಆಪಲ್ ಮತ್ತು ಗೂಗಲ್ ಸಂಸ್ಥೆಯು X-Mode Social ನಂತಹ ಡಾಟಾ ಬ್ರೋಕರ್ ಸಂಸ್ಥೆಗಳು ಬಳಕೆದಾರರ ಸ್ಥಳ ವಿವರಗಳನ್ನು ಪಡೆದುಕೊಳ್ಳದಂತೆ ಮಾಡಲು ಪ್ರಯತ್ನಿಸುತ್ತಿದೆ. iOS ಮತ್ತು ಆಂಡ್ರಾಯ್ಡ್ ಎರಡೂ ಮಾದರಿಯ ಮೊಬೈಲ್ ಫೋನ್ಗಳಿಗೆ ಈ ಆಯ್ಕೆ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ.
X-Mode Social ಸಂಸ್ಥೆಯು ಇತರ ಆಪ್ ಅಭಿವೃದ್ಧಿಗೊಳಿಸುವವರಿಗೆ ಒಂದು ಕೋಡ್ ಮತ್ತು ಸಾಫ್ಟ್ವೇರ್ ಡೆವಲಪ್ಮೆಂಟ್ ಕಿಟ್ನ್ನು (SDK) ನೀಡುತ್ತದೆ. ಅದನ್ನು ಆಪ್ನಲ್ಲಿ ಅಳವಡಿಸಲಾಗುತ್ತದೆ. ಈ ಮೂಲಕ ಬಳಕೆದಾರರ ಸ್ಥಳ ವಿವರಗಳನ್ನು ಆ ಕಂಪೆನಿಯು ಪಡೆಯುತ್ತದೆ. ಬಳಿಕ ಮಾಹಿತಿ/ಡಾಟಾವನ್ನು ಮಾರಾಟಮಾಡುತ್ತದೆ. ಇದರಿಂದ ಬಳಕೆದಾರರ ವಿವರಗಳನ್ನು X-Mode Social ಸಂಸ್ಥೆಗೆ ನೀಡಿದ ಆಯಾ ಆಪ್ಗಳು ಕೂಡ ಹಣ ಪಡೆಯುತ್ತವೆ. ಮದರ್ಬೋರ್ಡ್ ಎಂಬ ಸಂಸ್ಥೆಯ ವರದಿಯಂತೆ, X-Mode Social, ವಿಶ್ವದಾದ್ಯಂತ ಪ್ರತೀ ತಿಂಗಳಿಗೆ ಸುಮಾರು 400 ಆಪ್ಗಳ, 60 ದಶಲಕ್ಷ ಬಳಕೆದಾರರ ಡಾಟಾ ಸಂಗ್ರಹ ಮಾಡುತ್ತದೆ.
ಈಗ ಈ ಸಮಸ್ಯೆ, ಭಯದಿಂದ ದೂರವಾಗುವ ಕಾಲ ಸನ್ನಿಹಿತವಾದಂತಿದೆ. ಆಪಲ್ ಮತ್ತು ಗೂಗಲ್ ಜೊತೆಯಾಗಿ ಆಯಾ ಆಪ್ಗಳಿಂದ X-Mode Social ನ ಸಹಭಾಗಿತ್ವದಿಂದ ಹೊರಬರಲು ಸೂಚಿಸುತ್ತಿವೆ. ಈ ಬಗ್ಗೆ ಆಪ್ ಅಭಿವೃದ್ಧಿಗೊಳಿಸುವವರಿಗೆ ಆಪಲ್ ಸಂಸ್ಥೆ ಎರಡು ತಿಂಗಳ ಕಾಲಾವಕಾಶ ನೀಡಿದೆ. ಗೂಗಲ್ ಸಂಸ್ಥೆ ಕೇವಲ ಒಂದು ತಿಂಗಳ ಅವಧಿ ಜೊತೆಗೆ 30 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ ಎಂದು ಮೂಲಗಳು ತಿಳಿಸಿವೆ. ಈ ನಿರ್ಧಾರಕ್ಕೆ ವಿರುದ್ಧವಾಗಿ ಆಪ್ಗಳು ವ್ಯವಹರಿಸಿದರೆ, ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ನಿಂದ ಅಂತಹ ಅಪ್ಲಿಕೇಷನ್ಗಳನ್ನು ತೆಗೆದುಹಾಕುವುದಾಗಿಯೂ ಅವು ಎಚ್ಚರಿಸಿವೆ.
Published On - 9:49 pm, Mon, 14 December 20