ಶಾಸಕ ಸುನೀಲ್ ಕುಮಾರ್ ಜತೆ 20 ನಿಮಿಷ ಚರ್ಚಿಸಿದ ಅರುಣ್ ಸಿಂಗ್; ಅದೊಂದು ಪತ್ರವೇ ಕಾರಣ ಪ್ರತ್ಯೇಕ ಮಾತುಕತೆಗೆ
ಪತ್ರದ ವಿಚಾರ ಅರುಣ್ ಸಿಂಗ್ ಗಮನಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಕಚೇರಿಯಲ್ಲಿ ಭೇಟಿಯಾಗುವಂತೆ ಸುನೀಲ್ಗೆ ತಿಳಿಸಿದ್ದರು. ಅದರಂತೆ ಇಂದು ಭೇಟಿಯಾದ ಶಾಸಕ ಸುನೀಲ್ ಕುಮಾರ್ರೊಂದಿಗೆ 20 ನಿಮಿಷ ಚರ್ಚೆ ನಡೆಸಿದ್ದಾರೆ.
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯದ ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಇಂದು ರಾಜ್ಯಕ್ಕೆ ಭೇಟಿ ನೀಡಿ, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ, ಭೋಜನ ಮುಗಿಸಿ ತೆರಳಿದ್ದಾರೆ. ಹಾಗೆ ಹೋಗುವ ಮುನ್ನ ಸಿಎಂ ಯಡಿಯೂರಪ್ಪನವರ ಸರ್ಕಾರವನ್ನು ಹೊಗಳಿದ್ದಲ್ಲದೆ, ಸಂಪುಟ ವಿಸ್ತರಣೆಯ ಹೊಣೆಯನ್ನೂ ಯಡಿಯೂರಪ್ಪನವರ ಹೆಗಲಿಗೇ ವಹಿಸಿದ್ದಾರೆ. ಅಲ್ಲಿಗೆ, ಇಂದಾದರೂ ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದ ಬಿಜೆಪಿಗರಿಗೆ ಸಣ್ಣ ನಿರಾಸೆಯೇ ಆಗಿದೆ.
ಭೇಟಿಗೆ ಪತ್ರ ಕಾರಣ ಆದರೆ ಈ ಮಧ್ಯೆ ಅರುಣ್ ಸಿಂಗ್ ಇಂದು ಶಾಸಕ ಸುನೀಲ್ ಕುಮಾರ್ ಅವರೊಂದಿಗೆ ಪ್ರತ್ಯೇಕವಾಗಿ, 20 ನಿಮಿಷ ಮಾತನಾಡಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ವಿಧಾನಸಭೆ ಮುಖ್ಯಸಚೇತಕ ಸುನೀಲ್ ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ಗೆ ಪತ್ರ ಬರೆದು, ಪಕ್ಷದ ಕೆಲವು ಆಂತರಿಕ ವಿಚಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಪತ್ರದ ವಿಚಾರ ಅರುಣ್ ಸಿಂಗ್ ಗಮನಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಕಚೇರಿಯಲ್ಲಿ ಭೇಟಿಯಾಗುವಂತೆ ಸುನೀಲ್ಗೆ ತಿಳಿಸಿದ್ದರು. ಅದರಂತೆ ಇಂದು ಭೇಟಿಯಾದ ಶಾಸಕ ಸುನೀಲ್ ಕುಮಾರ್ರೊಂದಿಗೆ 20 ನಿಮಿಷ ಚರ್ಚೆ ನಡೆಸಿದ್ದಾರೆ. ಅದಾದ ಬೆನ್ನಲ್ಲೇ ಸಚಿವರು, ಸಂಸದರು, ಶಾಸಕರೊಂದಿಗೆ ಅರುಣ್ ಸಿಂಗ್ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಈ ಹಂತದ ಮಾತುಕತೆಯೀಗ ಸಿಕ್ಕಾಪಟೆ ಕುತೂಹಲ ಮೂಡಿಸಿದೆ. ಪಕ್ಷದ ಆಂತರಿಕ ಸಮಸ್ಯೆಗಳನ್ನೆಲ್ಲ ಸುನೀಲ್ ಅರುಣ್ಸಿಂಗ್ ಎದುರು ಹೇಳಿದ್ದಾರಾ ಎಂಬ ಪ್ರಶ್ನೆಯೂ ಎದ್ದಿದೆ.
ಏನಿತ್ತು ಪತ್ರದಲ್ಲಿ? ಸುನೀಲ್ ಕುಮಾರ್ ರಾಜ್ಯಾಧ್ಯಕ್ಷರಿಗೆ ಬರೆದ ಪತ್ರದಲ್ಲಿ, ಕೆಲವು ವಿಚಾರಗಳನ್ನು ಬಹಿರಂಗವಾಗಿ ಮಾತನಾಡುತ್ತಿರುವ ಶಾಸಕರು, ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿಯ ಮೂಲ ಸಿದ್ಧಾಂತದಡಿ ಕೆಲಸ ಮಾಡುತ್ತಿರುವ ಕಾರ್ಯಕರ್ತರು ನಿಗಮ ಮಂಡಳಿ ನೇಮಕ, ಮಂತ್ರಿ ಮಂಡಲ ರಚನೆ ವಿಚಾರವಾಗಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮೂಲ ಮತ್ತು ವಲಸಿಗರು ಎಂಬ ವಿಭಜನಾ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಪಕ್ಷದ ಶಿಸ್ತಿನ ಬಗ್ಗೆ ಎಲ್ಲರಿಗೂ ಗಟ್ಟಿಯಾಗಿ ಹೇಳಬೇಕಿದೆ. ಇನ್ನು ಶಾಸಕರೂ ಕೂಡ ಪಕ್ಷದ ಚೌಕಟ್ಟಿನಲ್ಲಿಯೇ ಅಭಿಪ್ರಾಯವನ್ನು ಹಂಚಿಕೊಳ್ಳಬೇಕು. ನೀವು ರಾಜ್ಯಾಧ್ಯಕ್ಷರು ಎಲ್ಲ ಶಾಸಕರ ಮಾತು, ಅನಿಸಿಕೆಯನ್ನೂ ಆಲಿಸಬೇಕು. ಹಾಗಾಗಿ ಕೂಡಲೇ ಒಂದು ಶಾಸಕರ ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದರು.
ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಅಂತಿಮ ನಿರ್ಧಾರ ಕೈಗೊಳ್ತಾರೆ.. BSY ಅಂಗಳಕ್ಕೆ ಚೆಂಡೆಸೆದ ಅರುಣ್ ಸಿಂಗ್
Published On - 4:55 pm, Sun, 6 December 20