India vs England Test Series: ನಿವೃತ್ತರಾಗುವ ಹೊತ್ತಿಗೆ ಅಶ್ವಿನ್ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಳ್ಳಲಿದ್ದಾರೆ: ಕೆವಿನ್ ಪೀಟರ್ಸನ್

ಕ್ರಿಕೆಟ್​ನ ಎಲ್ಲ ಫಾರ್ಮಾಟ್​ಗಳಲ್ಲೂ ಅಶ್ವಿನ್ ಉತ್ಕೃಷ್ಟ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಅವರಲ್ಲಿ ಇನ್ನೂ ಎಷ್ಟು ಸಾಮರ್ಥ್ಯ ಉಳಿದಿದೆಯೆಂದರೆ, ಕ್ರಿಕೆಟ್​ಗೆ ವಿದಾಯ ಹೇಳುವಾಗ ಸರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಂಡಿರುತ್ತಾರೆ ಎಂದು ಪೀಟರ್ಸನ್ ಹೇಳಿದ್ದಾರೆ.

India vs England Test Series: ನಿವೃತ್ತರಾಗುವ ಹೊತ್ತಿಗೆ ಅಶ್ವಿನ್ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಳ್ಳಲಿದ್ದಾರೆ: ಕೆವಿನ್ ಪೀಟರ್ಸನ್
ಹೌದು, ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭವಾಗುವ ಮುನ್ನ ಅಶ್ವಿನ್ ಕೌಂಟಿ ಪಂದ್ಯವನ್ನಾಡಿದ್ದರು. ಸೋಮರ್‌ಸೆಟ್ ವಿರುದ್ದದ ಪಂದ್ಯದಲ್ಲಿ ಅಶ್ವಿನ್ ಸರ್ರೆ ಪರ ಕಣಕ್ಕಿಳಿದಿದ್ದರು. ಡ್ರಾನಲ್ಲಿ ಅಂತ್ಯಗೊಂಡಿದ್ದ ಈ ಪಂದ್ಯದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಟ್ಟು 34 ವಿಕೆಟ್​ಗಳು ಬಿದ್ದಿದ್ದವು. ಇದರಲ್ಲಿ ಕೇವಲ ಸ್ಪಿನ್ನರ್‌ಗಳು 32 ವಿಕೆಟ್ ಪಡೆದಿರುವುದು ವಿಶೇಷ.
ಅರುಣ್​ ಕುಮಾರ್​ ಬೆಳ್ಳಿ

Updated on: Mar 03, 2021 | 11:04 PM

ಹಿಂದಿ ಭಾಷೆಯ ಮೇಲೆ ಅಪಾರ ಒಲವಿಟ್ಟುಕೊಂಡು ಅದನ್ನು ಮಾತಾಡಲು ಕಲಿತಿರುವ ಮತ್ತು ಭಾರತೀಯ ಕ್ರಿಕೆಟರ್​ಗಳನ್ನು ನಿರಂತರವಾಗಿ ಪ್ರಶಂಸಿಸುವ ಇಂಗ್ಲೆಂಡ್​ನ ಮಾಜಿ ಆಟಗಾರ ಮತ್ತು ಈಗ ಕಾಮೆಂಟೇಟರ್​ ಆಗಿ ಕೆಲಸ ಮಾಡುತ್ತಿರುವ ಕೆವಿನ್ ಪೀಟರ್ಸನ್ ಪ್ರಚಂಡ ಆಫ್-ಸ್ಪಿನ್ನರ್ ರವಿಚಂದ್ರನ್ ಆಶ್ವಿನ್ ಪ್ರಸಕ್ತ ಸರಣಿಯಲ್ಲಿ ನೀಡುತ್ತಿರುವ ಪ್ರದರ್ಶನಗಳನ್ನು ಕೊಂಡಾಡಿ ಅವರು ಭಾರತದ ಸರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ತಮ್ಮ ವೃತ್ತಿಬದುಕಿನ ಉತ್ಕೃಷ್ಟ ಫಾರ್ಮನಲ್ಲಿರುವ ಅಶ್ವಿನ್ ಇಂಗ್ಲೆಂಡ್ ವಿರುದ್ಧ ಬೌಲಿಂಗ್ ಅಲ್ಲದೆ ಬ್ಯಾಟಿಂಗ್​ನಲ್ಲೂ ಮಿಂಚುತ್ತಿದ್ದಾರೆ. ಮೊಟೆರಾದಲ್ಲಿ ನಡೆದ ಮೂರನೆ ಟೆಸ್ಟ್​ನಲ್ಲಿ ಅವರು ದೀರ್ಘಾವೃತ್ತಿಯ ಕ್ರಿಕೆಟ್​ನಲ್ಲಿ 400 ವಿಕೆಟ್​ ಪಡೆದ 4 ನೇ ಭಾರತೀಯನೆನಿಸಿಕೊಂಡರು. ಈ ಸಾಧನೆಯನ್ನು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ನಂತರ ಅತಿ ವೇಗದಲ್ಲಿ ಮಾಡಿದ ಬೌಲರ್ ಎನಿಸಿಕೊಂಡರು.

ಬೆಟ್​ವೇ ಇನ್​ಸೈಡರ್ ಹೆಸರಿನ ಕ್ರೀಡಾ ವೆಬ್​ಸೈಟ್​ಗೆ ಬರೆದಿರುವ ಬ್ಲಾಗ್​ನಲ್ಲಿ ಪೀಟರ್ಸನ್, ಅಶ್ವಿನ್ ಅವರಷ್ಟು ಉತ್ತಮವಾಗಿ ಪಿಚ್​ ಕಂಡೀಶನ್​ಗಳನ್ನು ಬಳಸಿಕೊಳ್ಳುವ ಬೌಲರ್ ಮತ್ತೊಬ್ಬನಿಲ್ಲ ಎಂದು ಹೇಳಿದ್ದಾರೆ.

‘ಎರಡನೇ ಅತಿವೇಗದಲ್ಲಿ 400 ವಿಕೆಟ್​ಗಳನ್ನು ಪಡೆಯುವ ಸಾಧನೆಯನ್ನು ಅಶ್ವಿನ್ ಮಾಡಿರುವುದು ಸಾಮಾನ್ಯ ಮಾತಲ್ಲ. ಸ್ವದೇಶದಲ್ಲಿ ಆಡುತ್ತಿರಲಿ ಅಥವಾ ವಿದೇಶದಲ್ಲಿ; ಪಿಚ್​ ಕಂಡೀಶನ್​ಗಳನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಳ್ಳುವ ಅವರು ನಿಸ್ಸಂದೇಹವಾಗಿ ಚಾಣಾಕ್ಷ ಬೌಲರ್. ಅವರ ಬೌಲಿಂಗ್​ಲ್ಲಿರುವ ವೈವಿಧ್ಯತೆ ಮತ್ತು ನಿಯಂತ್ರಣ ಅಪ್ರತಿಮವಾದದ್ದು’ ಎಂದು ಪೀಟರ್ಸನ್ ಬ್ಲಾಗ್​ನಲ್ಲಿ ಹೇಳಿದ್ದಾರೆ.

Kevin Pietersen

ಕೆವಿನ್ ಪೀಟರ್ಸನ್

‘ಕ್ರಿಕೆಟ್​ನ ಎಲ್ಲ ಫಾರ್ಮಾಟ್​ಗಳಲ್ಲೂ ಅವರು ಉತ್ಕೃಷ್ಟ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಅವರಲ್ಲಿ ಇನ್ನೂ ಎಷ್ಟು ಸಾಮರ್ಥ್ಯ ಉಳಿದಿದೆಯೆಂದರೆ, ಕ್ರಿಕೆಟ್​ಗೆ ವಿದಾಯ ಹೇಳುವಾಗ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಂಡಿರುತ್ತಾರೆ’ ಎಂದು ಪೀಟರ್ಸನ್ ಹೇಳಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್​ ಸರಣಿಯಲ್ಲಿ ಅವರು ಇದುವರೆಗೆ ಮುಗಿದಿರುವ 3 ಪಂದ್ಯಗಳಲ್ಲಿ 15.71 ಸರಾಸರಿಯಲ್ಲಿ 24 ವಿಕೆಟ್​ ಪಡೆದಿದ್ದಾರೆ. ಕಳೆದ ತಿಂಗಳು ಐಸಿಸಿಯ ಮಾಸಿಕ ಕ್ರಿಕೆಟರ್ ಗೌರವಕ್ಕೆ ಪಾತ್ರರಾದ ಅವರು ಪ್ರಸಕ್ತ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿ ಐಸಿಸಿ ಬೌಲರ್​ಗಳ ಟೆಸ್ಟ್​ ರ‍್ಯಾಕಿಂಗ್​ನಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಸದರಿ ಸರಣಿಯ ಕೊನೆ ಮತ್ತು ನಾಲ್ಕನೆ ಟೆಸ್ಟ್​ ಗುರುವಾರದಂದು ಅದೇ ಮೊಟೆರಾ ಮೈದಾನದಲ್ಲಿ ನಡೆಯಲಿದೆ. ಭಾರತ 2-1 ಅಂತರದ ಮುನ್ನಡೆ ಸಾಧಿಸಿದ್ದು ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಮತ್ತೊಮ್ಮೆ ಇಂಗ್ಲೆಂಡ್ ಆಟಗಾರರನ್ನು ಗೋಳು ಹೊಯ್ದಕೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: ನ್ಯೂಜಿಲೆಂಡ್​ನಲ್ಲಿ ನಾವು ಮೂರೇ ದಿನಗಳಲ್ಲಿ ಟೆಸ್ಟ್​ ಸೋತಾಗ ಪಿಚ್​ಗಳ ಬಗ್ಗೆ ಯಾರೂ ಮಾತಾಡಲಿಲ್ಲ: ವಿರಾಟ್ ಕೊಹ್ಲಿ

Published On - 10:54 pm, Wed, 3 March 21

ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Loading...
Unable to load recommendations.
Follow Us