ಸ್ವಂತ ದುಡ್ಡು, ಸ್ವಂತ ದುಡಿಮೆ: ರಸ್ತೆ ಸರಿಪಡಿಸೋಕೆ ಖಡಕ್ ಖಾಕಿ ಅಧಿಕಾರಿ ಕಾರ್ಮಿಕನಾದ ಪರಿ
ರಸ್ತೆಯ ದುಃಸ್ಥಿತಿ ನೋಡಿ ಎಷ್ಟೋ ಸಲ ಪೊಲೀಸರೇ ಗುಂಡಿಗಳನ್ನ ಮುಚ್ಚೋಕೆ ಮುಂದಾಗೋದನ್ನೂ ಸಹ ನೋಡಿದ್ದೀವಿ. ಅಂತೆಯೇ, ಜನಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಳಜಿ ವಹಿಸಿ ಮಾಡಬೇಕಾದ ಕೆಲಸವನ್ನು ಖಡಕ್ ಖಾಕಿ ಅಧಿಕಾರಿಯೊಬ್ಬರು ಮಾಡಲು ಮುಂದಾಗಿದ್ದಾರೆ.

ಮೈಸೂರು: ಅಪ್ಪಾ.. ಅಮ್ಮಾ.. ಅಯ್ಯೋ.. ಹಾಳಾದ್ ಗುಂಡಿಗಳು. ರಸ್ತೆಯಲ್ಲಿ ಗುಂಡಿಗಳಿವೆಯೋ ಅಥವಾ ಗುಂಡಿಯಲ್ಲಿ ರಸ್ತೆಯಿದೆಯೋ ಗೊತ್ತಿಲ್ಲ. ಹೀಗೆ ಹತ್ತು ಹಲವಾರು ರೀತಿ ಶಪಿಸುತ್ತಾ, ಅಧಿಕಾರಿಗಳನ್ನು ಬೈದು ಮುಂದಕ್ಕೆ ಸಾಗುವುದನ್ನು ನಾವೆಲ್ಲರೂ ಮಾಡಿರುತ್ತೇವೆ. ಕೆಲವೊಮ್ಮೆ, ರಸ್ತೆಯ ದುಃಸ್ಥಿತಿ ನೋಡಿ ಎಷ್ಟೋ ಸಲ ಪೊಲೀಸರೇ ಗುಂಡಿಗಳನ್ನ ಮುಚ್ಚೋಕೆ ಮುಂದಾಗೋದನ್ನೂ ಸಹ ನೋಡಿದ್ದೀವಿ.
ಅಂತೆಯೇ, ಜನಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಳಜಿ ವಹಿಸಿ ಮಾಡಬೇಕಾದ ಕೆಲಸವನ್ನು ಖಡಕ್ ಖಾಕಿ ಅಧಿಕಾರಿಯೊಬ್ಬರು ಮಾಡಲು ಮುಂದಾಗಿದ್ದಾರೆ. ಹೌದು, H.D.ಕೋಟೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ASI ದೊರೆಸ್ವಾಮಿ ಪಟ್ಟಣದ ಗದ್ದಿಗೆ ವೃತ್ತದಿಂದ ಮಲಾರ ಕಾಲೋನಿ ಕ್ರಾಸ್ ರಸ್ತೆಯಲ್ಲಿರುವ ಗುಂಡಿಗಳನ್ನು ತಾವೇ ಮುಂದೆ ನಿಂತು ಮುಚ್ಚಿಸಿದರು.
ಅದು ತಮ್ಮದೇ ದುಡ್ಡಲ್ಲಿ ಸ್ವಾಮಿ. ಯೆಸ್, ತಮ್ಮ ಸ್ವಂತ ಹಣ ಖರ್ಚು ಮಾಡಿರುವ ASI ದೊರೆಸ್ವಾಮಿ ಸಾರ್ವಜನಿಕರ ಸಹಕಾರ ಪಡೆದು ರಸ್ತೆಗುಂಡಿಗಳನ್ನ ಮುಚ್ಚಿಸಿದ್ದಾರೆ. ಮೆಚ್ಚುಗೆಯ ಸಂಗತಿಯೆಂದರೆ ಕೇವಲ ದುಡ್ಡು ಖರ್ಚು ಮಾಡಿದ್ದಲ್ಲದೇ ದೊರೆಸ್ವಾಮಿ ತಾವೇ ಕಾರ್ಮಿಕನಂತೆ ಎಲ್ಲರೊಂದಿಗೆ ಕೈಜೋಡಿಸಿ ಕೆಲಸ ಮಾಡಿದ್ದಾರೆ. ಗುಂಡಿಬಿದ್ದಿದ್ದ ಡಾಂಬರ್ ರಸ್ತೆಗೆ ಸ್ವಂತ ಹಣದಿಂದ ಕಾಂಕ್ರೀಟ್ ಹಾಕಿಸಿ ರಿಪೇರಿ ಮಾಡಿದ್ದಾರೆ. ಜನಸಾಮಾನ್ಯರಿಗಾಗಿ ಈ ಅಧಿಕಾರಿ ಬೆವರು ಸುರಿಸಿ ದುಡಿದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಅಂದ ಹಾಗೆ, ದೊರೆಸ್ವಾಮಿಯವರ ಸಮಾಜಮುಖಿ ಕೆಲಸಗಳಲ್ಲಿ ಇದೇ ಮೊದಲಲ್ಲ. ಈ ಹಿಂದೆ, ಕೊರೊನಾ ಸಂದರ್ಭದಲ್ಲಿ ದೊರೆಸ್ವಾಮಿ ಆಹಾರ ಕಿಟ್ಗಳನ್ನ ವಿತರಿಸಿ ಮಾನವೀಯತೆ ಮೆರೆದಿದ್ದರು.
Published On - 1:23 pm, Thu, 26 November 20