
ಬಾಗಲಕೋಟೆ: ಕೊವಿಡ್ ಕರ್ತವ್ಯಕ್ಕೆ ತೆರಳುವ ವೇಳೆ ಅಪಘಾತದಲ್ಲಿ ಸಾವನ್ನಪ್ಪಿದ ಅಂಗನವಾಡಿ ಕಾರ್ಯಕರ್ತೆಯ ಕುಟುಂಬಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 50 ಲಕ್ಷ ರೂಪಾಯಿ ಪರಿಹಾರ ನೀಡಲಾಗಿರುವ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮ ನಡೆದಿದೆ.
ಮೇ 18ರಂದು ಕೊವಿಡ್ ಕರ್ತವ್ಯಕ್ಕೆ ತೆರಳುವ ವೇಳೆ ಅವಘಡದಲ್ಲಿ ಮೃತಪಟ್ಟಿದ್ದ ಪ್ರಭಾವತಿ ಹಂಗರಗಿ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಲಾಗಿದೆ. ಪ್ರಭಾವತಿಯವರ ಹೆಸರಿನಲ್ಲಿದ್ದ 50 ಲಕ್ಷ ರೂಪಾಯಿ ವಿಮೆ ಹಣವನ್ನು ಸಂದಾಯ ಮಾಡಲಾಗಿದೆ.
ಪ್ರಭಾವತಿ ನಂದಿಕೇಶ್ವರ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೇ 18 ರಂದು ಕೊವಿಡ್ ಕರ್ತವ್ಯಕ್ಕೆ ತೆರಳುವ ವೇಳೆ ಬೈಕ್‌ನಿಂದ ಬಿದ್ದು ಪ್ರಭಾವತಿ ತಲೆಗೆ ಗಂಭೀರ ಗಾಯವಾಗಿತ್ತು. ನಂತರ, ಚಿಕಿತ್ಸೆ ಫಲಿಸದೆ ಮೇ 20 ರಂದು ಸಾವನ್ನಪ್ಪಿದ್ದರು.
ಕೊರೊನಾಪೀಡಿತರಾಗಿ ಸಾವನ್ನಪ್ಪಿದರೆ ಮಾತ್ರ ವಾರಿಯರ್ ಕುಟುಂಬಕ್ಕೆ ಪರಿಹಾರ ಕೊಡಲಾಗುವುದು ಎಂದು ಅಧಿಕಾರಿಗಳು ಆಗ ತಿಳಿಸಿದ್ದರಂತೆ. ಹಾಗಾಗಿ, ಟಿವಿ 9 ಈ ಬಗ್ಗೆ ಮೇ 22ರಂದು ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಆಗ, ಆರೋಗ್ಯ ಸಚಿವ ಶ್ರೀರಾಮುಲು ಕೊರೊನಾ ವಾರಿಯರ್ ಕುಟುಂಬಕ್ಕೆ ಪರಿಹಾರ ಕೊಡಿಸೋದಾಗಿ ಟಿವಿ 9ಗೆ ಭರವಸೆ ನೀಡಿದ್ದರು.
ಸದ್ಯ ಪ್ರಭಾವತಿ ಪತಿ ಕುಮಾರಯ್ಯ ಹಂಗರಗಿ ಅಕೌಂಟ್ಗೆ 50 ಲಕ್ಷ ರೂಪಾಯಿ ಹಣ ಸಂದಾಯವಾಗಿದೆ. ತಮ್ಮ ಸಂಕಷ್ಟವನ್ನು ಬೆಳಕಿಗೆ ಬರುವಂತೆ ಮಾಡಿದ ಟಿವಿ 9ಗೆ ಕುಮಾರಯ್ಯ , ಮಗಳು ಪ್ರತಿಭಾ ಮತ್ತು ಇತರೆ ಕುಟುಂಬಸ್ಥರು ತಮ್ಮ ಧನ್ಯವಾದ ತಿಳಿಸಿದ್ದಾರೆ.
Published On - 11:59 am, Sat, 19 September 20