ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ಅಧಿಕಾರಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಹರಸಾಹಸ ಪಡಲಾಗುತ್ತಿದೆ. ಡಿಸೆಂಬರ್ನಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಈ ಬಗ್ಗೆ ಬಿಬಿಎಂಪಿ ಪುನರ್ ರಚನಾ ಸಮಿತಿ ನವೆಂಬರ್ ಅಂತ್ಯದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲ್ಲಿದ್ದು, ರಾಜ್ಯಸರ್ಕಾರ ಹಸಿರು ನಿಶಾನೆ ನೀಡಿದರೆ ಡಿಸೆಂಬರ್ ಅಂತ್ಯದೊಳಗೆ ಬಿಬಿಎಂಪಿಯ ಚುನಾವಣೆ ನಡೆಯುವ ಸಾಧ್ಯತೆ ಇದೆ. ಬೆಂಗಳೂರು ಪ್ರತ್ಯೇಕ ಕಾಯ್ದೆ ರಚನಾ ಜಂಟಿ ಸಲಹಾ ಸಮಿತಿ, ಬಿಬಿಎಂಪಿ ಪುನರ್ ರಚನಾ ಸಮಿತಿ ನಿಗದಿತ ಅವಧಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿ ಸರ್ಕಾರ ವರದಿಗೆ ಅನುಮೋದನೆ ನೀಡಿದರೆ ಬಿಬಿಎಂಪಿಯ ಹೊಸ 225 ವಾರ್ಡ್ಗಳಿಗೆ ಡಿಸೆಂಬರ್ ವೇಳೆಗೆ ಚುನಾವಣೆ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬಿಬಿಎಂಪಿ ಪುನರ್ ರಚನೆ ಮತ್ತು ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ರಚನೆಗೆ ಸಂಬಂಧಸಿದಂತೆ ಶಾಸಕ ಎಸ್.ರಘು ಅಧ್ಯಕ್ಷತೆಯಲ್ಲಿ ನಗರದ ಬಿಜೆಪಿಯ 11, ಕಾಂಗ್ರೆಸ್ ಆರು ಹಾಗೂ ಜೆಡಿಎಸ್ ಪಕ್ಷದ ಮೂರು ಮಂದಿ ಶಾಸಕರ ನೇತೃತ್ವದಲ್ಲಿ ರಚಿಸಲಾದ ಜಂಟಿ ಸದನ ಸಮಿತಿ ಈಗಾಗಲೇ ಮೂರು ಬಾರಿ ಸಭೆ ನಡೆಸಿದೆ. ಸಮಿತಿ ಸಭೆಯಲ್ಲಿ ಒಟ್ಟು 80 ಅಂಶಗಳನ್ನು ಇಟ್ಟುಕೊಂಡು ಬಿಬಿಎಂಪಿಗೆ ಹೊಸ ಕಾಯ್ದೆ ಹಾಗೂ ಪುನರ್ ರಚನೆ ಪ್ರಕ್ರಿಯೆ ನಡೆಯುತ್ತಿದ್ದು, ಮೇಯರ್ ಹಾಗೂ ಉಪ ಮೇಯರ್ ಅಧಿಕಾರ ಅವಧಿಯನ್ನು 12 ತಿಂಗಳಿನಿಂದ 30 ತಿಂಗಳಿಗೆ (1 ವರ್ಷದಿಂದ ಎರಡೂವರೆ ವರ್ಷಕ್ಕೆ) ಏರಿಕೆ ಮಾಡುವುದು. ಪಾಲಿಕೆ ವಾರ್ಡ್ ಸಂಖ್ಯೆಗಳನ್ನು 198ರಿಂದ 225ಕ್ಕೆ ಏರಿಕೆ ಮಾಡುವುದು ಎಂಬ ಸಮಿತಿ ವರದಿಯನ್ನ ನವೆಂಬರ್ ಒಳಗೆ ನೀಡಲು ಸಮಿತಿ ಸದಸ್ಯರು ತೀರ್ಮಾನಿಸಿದ್ದಾರೆ.
Published On - 9:17 am, Thu, 10 September 20