ಬಿಗ್ ಬಾಸ್ ಮನೆ ಪ್ರವೇಶ ಮಾಡಿರುವ ಸ್ಪರ್ಧಿಗಳ ಅಸಲಿ ಮುಖ ಏನು ಎಂಬುದನ್ನು ತಿಳಿದುಕೊಳ್ಳಲು ಪ್ರೇಕ್ಷಕರು ಕಾದಿದ್ದಾರೆ. ಈಗ ತಾನೇ ಈ ಜನಪ್ರಿಯ ರಿಯಾಲಿಟಿ ಶೋ ಆರಂಭವಾಗಿದ್ದು, ಮನೆಯ ಎಲ್ಲ ಸದಸ್ಯರ ಮೇಲೂ ವೀಕ್ಷಕರು ಕಣ್ಣಿಟ್ಟಿದ್ದಾರೆ. ಅಚ್ಚರಿ ಎಂದರೆ, ಮೊದಲ ದಿನವೇ ಮನೆಯೊಳಗೆ ಹಲವು ಬೆಳವಣಿಗೆ ನಡೆದಿದೆ. ಒಬ್ಬರು ಲವ್ನಲ್ಲಿ ಬಿದ್ದಿದ್ದಾರೆ. ನಾಲ್ಕು ಮಂದಿ ನಾಮಿನೇಟ್ ಆಗಿದ್ದಾರೆ, ಕೆಲವರು ಡ್ರಾಮಾ ಮಾಡಿದ್ದಾರೆ. ಮತ್ತೆ ಕೆಲವರು ಕಣ್ಣೀರು ಸುರಿಸಿದ್ದಾರೆ. ಹೀಗೆ ಮೊದಲ ದಿನ ಆದ ಬೆಳವಣಿಗೆ ಒಂದೆರಡಲ್ಲ!
ಶಮಂತ್ಗೆ ಯಾರ ಮೇಲೆ ಲವ್?
ಬಿಗ್ ಬಾಸ್ ಮನೆ ಪ್ರವೇಶಿಸಿದವರ ನಡುವೆ ಪ್ರೀತಿ ಪ್ರೇಮದ ಗುಸುಗುಸು ಕೇಳಿಬರುವುದು ಹೊಸದೇನೂ ಅಲ್ಲ. ಅದು ಈ ಸೀಸನ್ನಲ್ಲೂ ಮುಂದುವರಿಯುತ್ತಿದೆ. ಮೊದಲ ವಾರದ ಕ್ಯಾಪ್ಟನ್ ಆಗಿರುವ ಶಮಂತ್ ಅಲಿಯಾಸ್ ಬ್ರೋ ಗೌಡ ಅವರ ಹೊಸ ಲವ್ ಸ್ಟೋರಿ ಶುರು ಆಗಿದೆ. ತಾವು ಪ್ರೀತಿಯಲ್ಲಿ ಬಿದ್ದಿರುವ ವಿಚಾರವನ್ನು ಮನೆಯ ಇತರ ಸದಸ್ಯರ ಜೊತೆ ಸ್ವತಃ ಶಮಂತ್ ಹೇಳಿಕೊಂಡಿದ್ದಾರೆ. ಆದರೆ ಅವರಿಗೆ ಇಷ್ಟ ಆಗಿರುವ ಹುಡುಗಿ ಯಾರು ಎಂಬುದನ್ನು ಅವರು ಬಾಯಿಬಿಟ್ಟಿಲ್ಲ. ನಾಳೆವರೆಗೂ ಕಾಯಿರಿ ಎಂದು ಹೇಳುವ ಮೂಲಕ ಸಸ್ಪೆನ್ಸ್ ಕಾಪಾಡಿಕೊಂಡಿದ್ದಾರೆ. ಆದರೆ ಈ ಪ್ರೀತಿ ನಿಜವೋ ಅಥವಾ ಬರೀ ಆಟದ ತಂತ್ರವೋ ಎಂದು ವೀಕ್ಷಕರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಸಂಬರಗಿ ಮತ್ತು ದಿವ್ಯಾ ನಡುವೆ ಹೆಚ್ಚಿದ ಒಡನಾಟ!
ಬಿಗ್ ಬಾಸ್ಗೆ ಬಂದು ಹಲವು ದಿನ ಕಳೆದ ಬಳಿಕ ಕೆಲವು ಸದಸ್ಯರ ನಡುವೆ ಅತಿಯಾದ ಆತ್ಮೀಯತೆ ಬೆಳೆಯುತ್ತದೆ. ಆದರೆ ಪ್ರಶಾಂತ್ ಸಂಬರಗಿ ಅವರು ಆರಂಭದಲ್ಲಿಯೇ ನಟಿ ದಿವ್ಯಾ ಉರುಡುಗ ಜೊತೆ ಹೆಚ್ಚು ಆತ್ಮೀಯತೆಯಿಂದ ಬೆರೆಯುತ್ತಿದ್ದಾರೆ. ದಿವ್ಯಾ ಬಗ್ಗೆ ಅವರು ವಿಶೇಷವಾಗಿ ಗಮನ ಹರಿಸುತ್ತಿರುವುದು ಮೇಲ್ನೋಟಕ್ಕೇ ಗೊತ್ತಾಗುತ್ತಿದೆ. ಪ್ರೇಕ್ಷಕರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳಲು ಸಂಬರಗಿ ಈ ರೀತಿ ಮಾಡುತ್ತಿದ್ದಾರೆ ಎಂಬುದನ್ನು ಸುಲಭವಾಗಿ ಊಹಿಸಬಲ್ಲರು ಬಿಗ್ ಬಾಸ್ ಆಟದ ಅಸಲಿಯತ್ತು ಬಲ್ಲವರು.
ಐವರ ಮೇಲೆ ಎಲಿಮಿನೇಷನ್ ತೂಗುಗತ್ತಿ!
ಎಲಿಮಿನೇಷನ್ ಎಂಬ ಪದ ಕೇಳುತ್ತಿದ್ದಂತೆಯೇ ಬಿಗ್ ಬಾಸ್ ಸ್ಪರ್ಧಿಗಳಿಗೆ ನಡುಕು ಶುರು ಆಗುತ್ತದೆ. ಹಾಗಂತ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮೊದಲ ವಾರದಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕದ ಪ್ರಶ್ನೆ ಈಗಾಗಲೇ ವೀಕ್ಷಕರ ಮನದಲ್ಲಿ ಮೂಡಿದೆ. ಮೊದಲ ದಿನವೇ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಪ್ರಶಾಂತ್ ಸಂಬರಗಿ, ನಿರ್ಮಲಾ ಚೆನ್ನಪ್ಪ, ಧನುಶ್ರೀ, ನಿಧಿ ಸುಬ್ಬಯ್ಯ ಮತ್ತು ಮಂಜು ಪಾವಗಡ ನಾಮಿನೇಟ್ ಅಗಿದ್ದಾರೆ. ಎಲಿಮಿನೇಟ್ ಆಗದೇ ಮನೆಯಲ್ಲೇ ಉಳಿದುಕೊಳ್ಳಲು ಅವರು ಕಷ್ಟಪಡಬೇಕಿದೆ.
ಶುರುವಾಯಿತು ಕಣ್ಣೀರಿನ ಕಥೆ
ಮನೆಯೊಳಗೆ ಕಾಲಿಟ್ಟಿರುವ 18 ಸ್ಪರ್ಧಿಗಳು ಕೂಡ ಬೇರೆ ಬೇರೆ ಹಿನ್ನೆಲೆಯಿಂದ ಬಂದಿದ್ದಾರೆ. ಎಲ್ಲರಿಗೂ ಅವರದ್ದೇ ಆದ ನೋವಿನ ಕಥೆ ಇದೆ. ಮೊದಲ ದಿನವೇ ಗೇಮ್ನಲ್ಲಿ ತಮ್ಮ ಟೀಮ್ ಸೋತಿದ್ದಕ್ಕೆ ಶುಭಾ ಪೂಂಜಾ ಸೋಲಿನ ಹೊಣೆ ಹೊತ್ತುಕೊಂಡರು. ಅದೇ ವೇಳೆ ಅವರು ಗಳಗಳನೆ ಅತ್ತರು! ನಾಮಿನೇಟ್ ಆಗಿ ನಂತರ ಬಚಾವ್ ಆದ ಶಂಕರ್ ಅಶ್ವತ್ ಅವರು ತಮ್ಮ ತಂದೆಯನ್ನು ನೆನೆದು ಕಣ್ಣೀರು ಹಾಕಿದರು. ಅವರನ್ನು ನಾಮಿನೇಟ್ ಮಾಡಿದ್ದಕ್ಕೆ ಕ್ಷಮೆ ಹೇಳಿ, ಗೀತಾ ಭಾರತಿ ಭಟ್ ಕೂಡ ಭಾವುಕರಾದರು.
Published On - 1:52 pm, Tue, 2 March 21