‘ಕಂಡವರ ಮಕ್ಕಳ ಬಾವಿಗೆ ತಳ್ಳಿ ಆಟ ನೋಡಬೇಡಿ’; ಟ್ರೋಲ್ ಮಾಡಿದವರಿಗೆ ಪ್ರತಾಪ್ ಎಚ್ಚರಿಕೆ
ಬಿಗ್ ಬಾಸ್ನಲ್ಲಿ ಪ್ರತಾಪ್ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರ ಜೀವನದಲ್ಲಿ ಹಲವು ಘಟನೆಗಳು ನಡೆದಿವೆ. ಆ ಬಗ್ಗೆ ಅವರು ಬಿಗ್ ಬಾಸ್ ವೇದಿಕೆ ಮೇಲೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.
ಡ್ರೋನ್ ಪ್ರತಾಪ್ (Drone Prathap) ಅವರು ಬಿಗ್ ಬಾಸ್ಗೆ ತೆರಳಿ ಸಾಕಷ್ಟು ಜನಪ್ರಿಯತೆ ಪಡೆದರು. ಅವರು ಹೊರಜಗತ್ತಿನಲ್ಲಿ ಸಾಕಷ್ಟು ಅವಮಾನ ಅನುಭವಿಸಿದ್ದರು. ಈಗ ಅದಕ್ಕೆಲ್ಲ ಬಿಗ್ ಬಾಸ್ ಮನೆಯಲ್ಲಿ ಉತ್ತರ ನೀಡಿದ್ದಾರೆ. ಅವರು ಈ ಮೊದಲು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆ ಬಗ್ಗೆ ಬಿಗ್ ಬಾಸ್ನಲ್ಲಿ ಮಾತನಾಡಿದ್ದರು. ಈಗ ಅವರು ಮತ್ತೊಮ್ಮೆ ದುಃಖ ತೋಡಿಕೊಂಡಿದ್ದಾರೆ. ‘ಬಿಗ್ ಬಾಸ್’ ಇದಕ್ಕೆ ವೇದಿಕೆ ಕಲ್ಪಿಸಿತ್ತು. ಈ ವೇದಿಕೆಯಲ್ಲಿ ಅವರು ಎಲ್ಲ ವಿಚಾರಗಳನ್ನು ಹೇಳಿಕೊಂಡಿದ್ದಾರೆ.
‘ನನ್ನ ಜೀವನದ ಒಂದು ಭಾಗದ ಕಥೆ ಎಲ್ಲರಿಗೂ ಗೊತ್ತಿದೆ. ನಾನು ಈ ದೇಶ ಬಿಟ್ಟು ಹೋಗಿದ್ದೆ. ಆಗ ನನ್ನ ಬಗ್ಗೆ ಹಲವು ಸ್ಟೋರಿ ಸೃಷ್ಟಿ ಮಾಡಲಾಯಿತು. ನಾನು ಎಲ್ಲರಿಂದ ದುಡ್ಡು ತೆಗೆದುಕೊಂಡಿದ್ದೇನೆ ಎಂದು ಸುದ್ದಿ ಹಬ್ಬಿಸಿದರು. ನಾನು ಒಂದೆರಡು ಮಾತನ್ನು ಬಾಯ್ತಪ್ಪಿ ಹೇಳಿದ್ದೇನೆ. ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಈ ಮಾತಿನಿಂದ ನಾನು ಸಾಕಷ್ಟು ಅನುಭವಿಸಿದ್ದೇನೆ. ಆ ಸಂದರ್ಭದಲ್ಲಿ ನನಗೆ ಪ್ಯಾನಿಕ್ ಅಟ್ಯಾಕ್ ಆಗುವ ಸಮಸ್ಯೆ ಆರಂಭ ಆಯಿತು’ ಎಂದಿದ್ದಾರೆ ಪ್ರತಾಪ್.
‘ನನಗೆ ಕೊವಿಡ್ ಆಯಿತು. ಕ್ವಾರಂಟೈನ್ ಸೀಲ್ ಹಾಕಿದ್ದರು. ಕ್ವಾರಂಟೈನ್ ಅವಧಿ ಮುಗಿಸಿ ಚಿಕ್ಕಮಗಳೂರಿಗೆ ಹೋದೆ. ಆ ಬಳಿಕ ಜನರು ಸುಳ್ಳು ಸುದ್ದಿ ಹಬ್ಬಿಸಿದರು. ನಾನು ಕ್ವಾರಂಟೈನ್ ಆಗಿಲ್ಲ ಎಂದು ಠಾಣೆಗೆ ಕರೆದುಕೊಂಡು ಹೋಗಲಾಯಿತು. ನನ್ನನ್ನು ಜೈಲಿನಲ್ಲಿ ಇರಿಸಿದರು. ಪ್ರತಾಪ್ ವಿರದ್ಧ ಕಂಡಲ್ಲಿ ಗುಂಡು ಆದೇಶ ಬಂದಿದೆ ಎಂದು ಸುದ್ದಿ ಹಬ್ಬಿಸಲಾಯಿತು. ಇವನು ಸುಳ್ಳ, ಕಳ್ಳ ಎಂದೆಲ್ಲ ಊರವರು ಹೇಳೋಕೆ ಶುರು ಮಾಡಿದರು’ ಎಂದು ದುಃಖ ತೋಡಿಕೊಂಡಿದ್ದಾರೆ ಪ್ರತಾಪ್.
ಇದನ್ನೂ ಓದಿ: ಮನೆಯವರ ಎಲ್ಲರ ಆಯ್ಕೆಯೂ ಒಬ್ಬರೇ; ಡ್ರೋನ್ ಪ್ರತಾಪ್ಗೆ ಕಳಪೆ ಪಟ್ಟ
‘ನನಗೆ ಎಲ್ಲರೂ ಕೊಡಬಾರದ ಹಿಂಸೆ ಕೊಟ್ಟರು. ತಂಗಿನ ಯಾರು ಮದುವೆ ಆಗುತ್ತಾರೆ ನೋಡ್ತೀವಿ ಎಂದು ಚಾಲೆಂಜ್ ಮಾಡಿದರು. ನಿಮ್ಮಮ್ಮ ಹುಚ್ಚಿತರ ರೋಡ್ನಲ್ಲಿ ಅಲೆಯುವಂತೆ ಮಾಡುತ್ತೇವೆ ಎಂದರು. ನಾನು ಮಾನಸಿಕ ರೋಗಿ ಎಂದು ಬಿಂಬಿಸುವ ಹುನ್ನಾರ ನಡೆಯಿತು. ಎಲ್ಲಕಡೆ ಪ್ರೀತಿ ಮಾಡುವವರು ಇದ್ದೇ ಇದ್ದಾರೆ. ಈ ವೇದಿಕೆಗೆ ಬರಬಾರದು ಎಂದುಕೊಂಡಿದ್ದೆ. ನಾನು ತೆಗೆದುಕೊಂಡ ನಿರ್ಧಾರದಿಂದ ನನಗೆ ಬೂಸ್ಟ್ ಸಿಕ್ಕಿದೆ. ದಯವಿಟ್ಟು ನಿಮ್ಮ ಮಕ್ಕಳ ಬಾವಿಗೆ ತಳ್ಳಿ, ಕಂಡವರ ಮನೆಯವರ ಮಕ್ಕಳನ್ನು ತಳ್ಳಿ ಆಟ ನೋಡಬೇಡಿ’ ಎಂದು ಪ್ರತಾಪ್ ಮನವಿ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ