ಸಿದ್ದರಾಮಯ್ಯ ತವರಲ್ಲೇ ವಿಜಯೇಂದ್ರ ಕಾರ್ಯಾಚರಣೆ ಶುರು: ಪಕ್ಷ ಬಿಡುತ್ತಿದ್ದ ಮುಖಂಡನ ಮನವೊಲಿಸುವಲ್ಲಿ ಯಶಸ್ವಿ

| Updated By: Ganapathi Sharma

Updated on: Mar 27, 2024 | 7:16 AM

ಒಂದೆಡೆ ಮೈಸೂರಿನ ರೆಸಾರ್ಟ್​ನಲ್ಲಿ ಕುಳಿತುಕೊಂಡು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಗಾಳ ಹಾಕುತ್ತಿದ್ದರೆ, ಅತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮೈಸೂರಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಿದ್ದರಾಮಯ್ಯ ತಂತ್ರಕ್ಕೆ ಪ್ರತಿ ತಂತ್ರ ಹೂಡಲು ಇಂದಿಡೀ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದಾರೆ.

ಸಿದ್ದರಾಮಯ್ಯ ತವರಲ್ಲೇ ವಿಜಯೇಂದ್ರ ಕಾರ್ಯಾಚರಣೆ ಶುರು: ಪಕ್ಷ ಬಿಡುತ್ತಿದ್ದ ಮುಖಂಡನ ಮನವೊಲಿಸುವಲ್ಲಿ ಯಶಸ್ವಿ
ವರುಣ ಕ್ಷೇತ್ರದ ಮುಖಂಡ ಸದಾನಂದರನ್ನು ಸಿಹಿ ತಿನಿಸಿ ಪಕ್ಷದಲ್ಲೇ ಉಳಿಸಿಕೊಂಡ ವಿಜಯೇಂದ್ರ
Follow us on

ಮೈಸೂರು, ಮಾರ್ಚ್ 27: ಲೋಕಸಭೆ ಚುನಾವಣೆ (Lok Sabha Elections) ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ಹೆಚ್​​ವಿ ರಾಜೀವ್ ನಂತರ ಮತ್ತೊಬ್ಬ ಆಪ್ತನಿಗೆ ಮೈಸೂರಿನ ರೆಸಾರ್ಟ್​ನಲ್ಲೇ ಕುಳಿತುಕೊಂಡು ಗಾಳ ಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಟಕ್ಕರ್ ನೀಡಿದ್ದಾರೆ. ಸಿಎಂ ತವರು ಜಿಲ್ಲೆಗೆ ತಲುಪಿರುವ ವಿಜಯೇಂದ್ರ ಕಾರ್ಯಾಚರಣೆ ಶುರು ಮಾಡಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ತಂತ್ರಕ್ಕೆ ಪ್ರತಿ ತಂತ್ರ ಹೂಡಿದ್ದಾರೆ. ಸಿದ್ದರಾಮಯ್ಯ ಮನವೊಲಿಸಿದ್ದರಿಂದ ಪಕ್ಷ ಬಿಟ್ಟು ಕಾಂಗ್ರೆಸ್​​ ಸೇರಲು ಮುಂದಾಗಿದ್ದ ಮುಖಂಡನನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವರುಣ ಕ್ಷೇತ್ರದ ಮುಖಂಡ ಸದಾನಂದರನ್ನು ಭೇಟಿಯಾದ ವಿಜಯೇಂದ್ರ ಅವರ ಮನವೊಲಿಸಿದ್ದಾರೆ. ಸದಾನಂದ ಇಂದು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಮುಂದಾಗಿದ್ದರು. ಹೀಗಾಗಿ ಮಂಗಳವಾರ ರಾತ್ರಿ ಅವರನ್ನು ಭೇಟಿಯಾಗಿ ಮಾತನಾಡಿದ್ದ ವಿಜಯೇಂದ್ರ ಸಿಹಿ ತಿನಿಸಿ ಪಕ್ಷದಲ್ಲೇ ಉಳಿಸಿಕೊಂಡಿದ್ದಾರೆ. ಈ ಮೂಲಕ ‘ಕೈ’ ನಾಯಕರಿಗೆ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಮಾಜಿ ಶಾಸಕ ವಾಸು ನಿವಾಸಕ್ಕೆ ಭೇಟಿ

ಇತ್ತೀಚಿಗೆ ನಿಧನರಾಗಿದ್ದ ಕಾಂಗ್ರೆಸ್ ಮುಖಂಡ ವಾಸು ನಿವಾಸಕ್ಕೆ ವಿಜಯೇಂದ್ರ ಭೇಟಿ ನೀಡಿದ್ದಾರೆ. ಮೈಸೂರಿನ ಜಯಲಕ್ಷ್ಮಿಪುರಂ ನಿವಾಸದಲ್ಲಿರುವ ವಾಸು ನಿವಾಸಕ್ಕೆ ಭೇಟಿ ನೀಡಿದ ವಿಜಯೇಂದ್ರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಬಿಜೆಪಿ ಮುಖಂಡ ಕವೀಶ್ ಗೌಡ ಜೊತೆ ಮಾತುಕತೆ ನಡೆಸಿದ್ದಾರೆ. ವಿಜಯೇಂದ್ರಗೆ ಸ್ಥಳೀಯ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ.

ಇಂದು ಸಂಜೆಯವರೆಗೂ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾರ್ಯಕ್ರಮದಲ್ಲಿ‌ ವಿಜಯೇಂದ್ರ ಭಾಗಿಯಾಗಲಿದ್ದಾರೆ. ಬೆಳಗ್ಗೆ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಜೊತೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಲಿದ್ದು, ನಂತರ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ರೆಸಾರ್ಟ್‌ನಿಂದ ವಾಪಸಾಗಲಿರುವ ಸಿದ್ದರಾಮಯ್ಯ

ಮೂರು ದಿನಗಳಿಂದ ರೆಸಾರ್ಟ್​ ವಾಸ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಇಂದು ಹೊರ ಬರಲಿದ್ದು, 11 ಗಂಟೆಗೆ ಬಿಜೆಪಿ, ಜೆಡಿಎಸ್ ಮುಖಂಡರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವರುಣ ಕ್ಷೇತ್ರದ ಬಿಜೆಪಿ ಮುಖಂಡರಾದ ಸದಾನಂದ ಓಂಕಾರ್ ಸೇರಿ ಹಲವರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ.

ಇದನ್ನೂ ಓದಿ: ಮೈಸೂರು ರೆಸಾರ್ಟ್​​ನಲ್ಲಿ ಕುಳಿತು ಸಿಎಂ ಸಿದ್ದರಾಮಯ್ಯ ಆಪರೇಷನ್ ಹಸ್ತ: ಯಡಿಯೂರಪ್ಪ ಆಪ್ತರಿಗೆ ಗಾಳ

ಬಳಿಕ ನಾಲ್ಕು ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಚಾಮುಂಡೇಶ್ವರಿ, ನರಸಿಂಹರಾಜ, ಕೃಷ್ಣರಾಜ, ಚಾಮರಾಜ ಕ್ಷೇತ್ರಗಳ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಇದರಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಸಹ ಭಾಗವಹಿಸಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ