
ಬೆಂಗಳೂರು: ಮೆಟ್ರೋ.. ನೂರಾರು ಬೆಂಗಳೂರಿಗರ ದೈನಂದಿನ ಓಡಾಟಕ್ಕೆ ಮೆಟ್ರೋ ಅತಿ ಮುಖ್ಯ. ಟ್ರಾಫಿಕ್ ಜಂಜಾಟದಿಂದ ದೂರವಾಗಿ ಬೇಗ ಕೆಲಸಕ್ಕೆ ಹೋಗಬೇಕಿದ್ದವರಿಗೆ ಮೆಟ್ರೋ ತುಂಬಾನೇ ಸಹಾಯವಾಗಿದೆ. ಆದ್ರೆ ಕೊರೊನಾದಿಂದಾಗಿ ಮಾರ್ಚ್ 22ರಿಂದ ಮೆಟ್ರೋ ಸೇವೆ ಸ್ಥಗಿತಗೊಂಡಿತ್ತು. ಈಗ ಅನ್ಲಾಕ್ 4.0 ಅಡಿಯಲ್ಲಿ ಕೇಂದ್ರ ಸರ್ಕಾರ ಮೆಟ್ರೋ ಸವಾರರಿಗೆ ಗುಡ್ ನ್ಯೂಸ್ ನೀಡಿದೆ. ಸೆಪ್ಟೆಂಬರ್ 7 ರಿಂದ ಮೆಟ್ರೋ ಓಡಾಟಕ್ಕೆ ಗ್ರೀನ್ ಸಿಗ್ನಲ್ ದೊರೆತಿದೆ.
ಕೇಂದ್ರ ಸರ್ಕಾರ ಮೆಟ್ರೋ ಓಡಾಟಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಂಚಾರ ಆರಂಭಿಸಲು BMRCL ಸಂಸ್ಥೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಧಿಕಾರಿಗಳು ಮೆಟ್ರೋ ಟ್ರೈನ್ನ ಟ್ರಯಲ್ ರನ್, ನಿಲ್ದಾಣಗಳ ಸ್ವಚ್ಛತೆ ಹಾಗೂ ಟ್ರೈನ್ ಕ್ಲೀನ್ ಮಾಡುವಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ. ಅಷ್ಟೇ ಅಲ್ಲ, ಪ್ರಯಾಣಿಕರ ಅನುಕೂಲ ಮತ್ತು ಸುರಕ್ಷತೆಯ ಹಿತದೃಷ್ಟೀಯಿಂದ ಕೆಲ ನಿಯಮಗಳನ್ನು ಸಹ ವಿಧಿಸಿದೆ.
ಮೆಟ್ರೋ ಸಂಚಾರಕ್ಕೆ ಷರತ್ತುಗಳು ಅನ್ವಯ:
1. ಮೆಟ್ರೋ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್
2. ಸಾಮಾಜಿಕ ಅಂತರ ಪಾಲಿಸುವುದು ಕಡ್ಡಾಯ
3. ಒಂದು ರೈಲಿನಲ್ಲಿ 340 ಜನರಿಗೆ ಸಂಚರಿಸಲು ಮಾತ್ರ ಅವಕಾಶ
4. ಒಂದು ಬೋಗಿಯಲ್ಲಿ 50 ಜನರ ಸಂಚಾರಕ್ಕೆ ಮಾತ್ರ ಅವಕಾಶ
5. ಮೆಟ್ರೋ ಸಿಬ್ಬಂದಿಗೂ ಮಾಸ್ಕ್, ದೈಹಿಕ ಅಂತರ ಕಡ್ಡಾಯ
6. ಮೆಟ್ರೋ ಟೋಕನ್ಗಳ ಬದಲು ಮೆಟ್ರೋ ಕಾರ್ಡ್‌ಗಳ ಬಳಕೆ
ಆರು ಬೋಗಿ ರೈಲಿನಲ್ಲಿ 350 ಮಂದಿ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಹಿಂದೆ ಆರು ಬೋಗಿಯ ಮೆಟ್ರೋ ಟ್ರೈನ್ನಲ್ಲಿ ಸುಮಾರು 1,800 ಪ್ರಯಾಣಿಕರು ಪ್ರಯಾಣ ಮಾಡ್ತಿದ್ರು. ಮೆಟ್ರೋ ಬೋಗಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೀಟ್ ಮಾರ್ಕ್ ಹಾಕಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಹಲವು ನಿಯಮಗಳನ್ನು ಬದಲಾಯಿಸಲಾಗುತ್ತಿದೆ. ಮೆಟ್ರೋ ಹತ್ತುವ ಮುನ್ನ ಮಾಸ್ಕ್, ದೇಹದ ಉಷ್ಣಾಂಶದ ತಪಾಸಣೆಗೆ ಒಳಗಾಗುವುದು ಕಡ್ಡಾಯ. ಟೋಕನ್ ಬದಲು ಸ್ಮಾರ್ಟ್ ಕಾರ್ಡ್ ಬಳಸಲು ಹೆಚ್ಚು ಒತ್ತು ನೀಡಲು BMRCL ಮುಂದಾಗಿದೆ.