ಸಿಎಂ ಸವಾಲ್: ಬಿಜೆಪಿ 135 ಸೀಟು ಗೆದ್ದು, ಕಾಂಗ್ರೆಸ್ಸನ್ನು ವಿರೋಧ ಪಕ್ಷದಲ್ಲಿ ಕೂಡಿಸಲಿಲ್ಲ ಎಂದರೆ ನಾನು ಯಡಿಯೂರಪ್ಪನೇ ಅಲ್ಲ
ಬಹಳ ದಿನಗಳ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗರ್ಜಿಸಿದ್ದಾರೆ. ತಾವು ಮಂಡಿಸಿದ ಬಜೆಟ್ನ್ನು ಸಭಾತ್ಯಾಗದ ಮೂಲಕ ತಿರಸ್ಕರಿಸಿದ ವಿರೋಧ ಪಕ್ಷದ ತೀರ್ಮಾನವನ್ನು ಕಟುವಾಗಿ ಖಂಡಿಸಿದ್ದಾರೆ. ಅವರನ್ನು ಮತ್ತೆ ವಿರೋಧ ಪಕ್ಷದಲ್ಲಿ ಕೂಡ್ರಿಸದಿದ್ದರೆ ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ ಎಂದು ಪತ್ರಕರ್ತರಿಗೆ ಚಾಲೆಂಜ್ ಮಾಡಿದ್ದಾರೆ.
‘ವಿರೋಧ ಪಕ್ಷಗಳ ನೈತಿಕತೆಯನ್ನು ಬಿಚ್ಚಿ ಇಡುತ್ತೇವೆ. ಅಷ್ಟೇ ಅಲ್ಲ ಅವರ ಜಾತಕ ಹೊರಹಾಕಿ ಮುಂದಿನ ಚುನಾವಣೆಯಲ್ಲಿ ಮತ್ತೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತೆ ಮಾಡಿಲ್ಲ ಎಂದರೆ ನನ್ನ ಹೆಸರು ಬಿ.ಎಸ್.ಯಡಿಯೂರಪ್ಪ ಅಲ್ಲ’ ಎಂದು ಇಂದು ಮಧ್ಯಾಹ್ನ ಮುಂಗಡಪತ್ರ ಮಂಡಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ವಿರೋಧ ಪಕ್ಷ ಕಾಂಗ್ರೆಸ್ ಇಂದು ಬಜೆಟ್ ಮಂಡನೆಯನ್ನು ಬಹಿಷ್ಕರಿಸಿತ್ತು. ಈ ಕುರಿತು ಕೇಳಲಾದ ಪ್ರಶ್ನೆಗೆ ಭಾವೋದ್ವೇಗದಿಂದ ಉತ್ತರಿಸಿದ ಯಡಿಯೂರಪ್ಪ ವಿರೋಧ ಪಕ್ಷ ಈ ರೀತಿ ಮಾಡಬಾರದಿತ್ತು ಎಂದು ತಮ್ಮ ಪ್ರತಿಕ್ರಿಯೆಯನ್ನು ನೀಡಿದರು
ಭಾರತದ ಇತಿಹಾಸದಲ್ಲಿ ಈ ರೀತಿ ಆಗಿರಲಿಲ್ಲ. ಯಾವ ವಿರೋಧ ಪಕ್ಷಗಳು ಈ ರೀತಿ ಮುಂಗಡಪತ್ರವನ್ನು ಬಹಿಷ್ಕರಿಸಿ ಹೊರಹೋದ ಉದಾಹರಣೆ ಇಲ್ಲ. ಇದು ಒಂದು ವಿರೋಧ ಪಕ್ಷ ನಡೆದುಕೊಳ್ಳುವ ರೀತಿಯೂ ಅಲ್ಲ ಎಂದು ಯಡಿಯೂರಪ್ಪ ಹೇಳಿದರು. ಅವರ ನೈತಿಕತೆ ಏನು ಅಂತ ಹೇಳುತ್ತೇವೆ. ಅವರಿಗೆ ಸಭೆ ಎದುರಿಸಲು ಧೈರ್ಯ ಇಲ್ಲ, ಹಾಗಾಗಿ ಬೇಕಾದಂತೆ ಮಾತನಾಡಿ ಸಭಾತ್ಯಾಗ ಮಾಡಿದ್ದಾರೆ ಎಂದು ಯಡಿಯೂರಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ವರದಿಗಾರರೊಬ್ಬರು ಮಧ್ಯಪ್ರವೇಶಿಸಿ, ‘ಅವರು (ಕಾಂಗ್ರೆಸ್ನವರು) ನೈತಿಕತೆ ಪ್ರಶ್ನಿಸಿ ಈ ರೀತಿ ವಾಕ್ ಔಟ್ ಮಾಡಿದ್ದಾರೆ’ ಎಂದು ಹೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಯಾವ ನೈತಿಕತೆ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದನ್ನು ಸದನದಲ್ಲಿಯೂ ನಾನು ಕೇಳುತ್ತೇನೆ. ಇಲ್ಲಿಯೂ ಅದನ್ನೇ ಹೇಳುತ್ತಿದ್ದೇನೆ ಎಂದು ಹೇಳಿದರು.
ಅವರ ಮಾತು ಇಷ್ಟಕ್ಕೆ ನಿಲ್ಲಲಿಲ್ಲ. ಇದೇ ರೀತಿ ಮಾಡಲಿ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಕುವಂತೆ ಮಾಡಲು ಏನು ಮಾಡಬೇಕೋ ಅದನ್ನು ಮಾಡಿಯೇ ಮಾಡುತ್ತೇವೆ. 130-135 ಸೀಟು ಗೆದ್ದು ಅವರನ್ನು ಅಲ್ಲಿ ಕೂಡ್ರಿಸಲಿಲ್ಲ ಎಂದರೆ, ನೀವು ನನಗೆ ಯಡಿಯೂರಪ್ಪ ಎಂದು ಕರೆಯಬೇಡಿ ಎಂದು ಪತ್ರಕರ್ತರಿಗೆ ಚಾಲೆಂಜ್ ಮಾಡಿದರು.
ಮಂತ್ರಿಗಳು ಕೇವಿಯಟ್ ಹಾಕಿಕೊಂಡು ಹೊಸ ದಾಖಲೆ ಬರೆದಿದ್ದಾರೆ ಎಂಬ ಪ್ರಶ್ನಗೆ ಉತ್ತರಿಸಿದ, ನೈತಿಕತೆಯಂತೆ ನೈತಿಕತೆ. ಇವರು ಚರ್ಚೆಗೆ ಬರಲಿ ಎಲ್ಲಾ ಬಿಚ್ಚಿಡುತ್ತೇವೆ ಎಂದರು. ಆಗ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಈ ಹಿಂದೆ ಏನು ನಡೆದಿತ್ತು ಅಂತ ನಮಗೂ ಗೊತ್ತಿದೆ. ಅವರ ಕಾಲದಲ್ಲಿ ಎಷ್ಟು ಜನ ಇದೇ ರೀತಿ ಕೇವಿಯಟ್ ಹಾಕಿಕೊಂಡಿದ್ದರು. ಅವರು ಚರ್ಚೆಗೆ ಬಂದಾಗ ಎಲ್ಲಾ ಬಿಚ್ಚಿಡುತ್ತೇವೆ ಎಂದು ನುಡಿದರು.
ಇದನ್ನೂ ಓದಿ: ಕರ್ನಾಟಕ ಬಜೆಟ್ 2021-22; ಇದೊಂದು ಟೊಳ್ಳು ಬಜೆಟ್ - ಸಿದ್ದರಾಮಯ್ಯ ಕಟು ಟೀಕೆ
ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಪೆಟ್ರೋಲ್ ದರದಲ್ಲಿ ಯಾವ ಇಳಿಕೆಯೂ ಆಗಲಿಲ್ಲ; ಇಂದು ರಾಜ್ಯದಲ್ಲಿ ರೂ. 96ರ ಗಡಿಯಲ್ಲಿ ಪೆಟ್ರೋಲ್ ಬೆಲೆ