Budget 2021 | ಕೆಂಬಣ್ಣದ ಸೀರೆ, ಮೇಡ್ ಇನ್ ಇಂಡಿಯಾ ಟ್ಯಾಬ್
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೇಡ್ ಇನ್ ಇಂಡಿಯಾ ಜಪವನ್ನು ಬಜೆಟ್ನಲ್ಲೂ ಜಪಿಸಿದ್ದಾರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
ದೆಹಲಿ: ಬಜೆಟ್ ಮಂಡಿಸಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮುಂಜಾನೆ ಕೆಂಪು ಹೊದಿಕೆಯಲ್ಲಿ ಮುಚ್ಚಿದ್ದ ಮೇಡ್ ಇನ್ ಇಂಡಿಯಾ ಟ್ಯಾಬ್ ಹಿಡಿದು ಪ್ರತ್ಯಕ್ಷರಾದರು. ಚಿನ್ನದ ಅಂಚಿನ ಕೆಂಪು ರೇಷ್ಮೆ ಸೀರೆ ಧರಿಸಿದ್ದ ಅವರ ಮುಖದಲ್ಲಿ ಆತ್ಮವಿಶ್ವಾಸ ಎದ್ದುಕಾಣುತ್ತಿತ್ತು.
ಕೆಂಪು ಬಣ್ಣದ ಸೆರಗು , ಚಿನ್ನದ ಬಣ್ಣದ ಅಂಚು ಇರುವ ಕ್ರೀಮ್ ಬಣ್ಣ ಸೀರೆ ಉಟ್ಟುಕೊಂಡು ಬಂದಿದ್ದಾರೆ ನಿರ್ಮಲಾ ಸೀತಾರಾಮನ್. ಕೆಂಪುಬಣ್ಣ ಮಂಗಳಕರ ಬಣ್ಣವೆಂದು ವಿಶ್ಲೇಷಣೆ ಕೇಳಿಬಂದಿದೆ. ಪ್ರೀತಿ, ಶಕ್ತಿ, ಅಧಿಕಾರಗಳ ಸಂಕೇತವೂ ಕೆಂಪು ಬಣ್ಣ. ಹಿಂದಿನ ವರ್ಷ ಹಣಕಾಸು ಸಚಿವೆ ಚಿನ್ನದ ಬಣ್ಣದ ಸೀರೆ ಉಟ್ಟಿದ್ದರು ಎಂಬುದನ್ನು ಇಲ್ಲಿ ಸ್ಮರಿಸಲೇಬೇಕು.
ಸ್ವದೇಶಿ ಮಂತ್ರ ಜಪ
ಈ ವರ್ಷದ ಬಜೆಟ್ ಸಂಪೂರ್ಣ ಕಾಗದ ರಹಿತವಾಗಿರಲಿರುವ ಕಾರಣ, ಅವರು ರೂಪಿಸಿದ ಬಜೆಟ್ ಸಂಪೂರ್ಣ ಟ್ಯಾಬ್ನಲ್ಲಿರಲಿದೆ. ಜತೆಗೆ, ಟ್ಯಾಬ್ ಹಿಡಿದೇ ಬಜೆಟ್ ಭಾಷಣ ಮಾಡಲಿದ್ದಾರೆ. ಭಾರತದಲ್ಲೇ ತಯಾರಿಸಿದ ಟ್ಯಾಬ್ ಎಂಬುದು ವಿಶೇಷ.ಟ್ಯಾಬ್ನ್ನು ಕೆಂಪು ಬಣ್ಣದ ಕವರ್ನಲ್ಲಿ ತಂದಿದ್ದು, ಆ ಕವರ್ ಮೇಲೆ ರಾಷ್ಟ್ರೀಯ ಚಿಹ್ನೆ ಇದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೇಡ್ ಇನ್ ಇಂಡಿಯಾ ಜಪವನ್ನು ಬಜೆಟ್ನಲ್ಲೂ ಜಪಿಸಿದ್ದಾರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
‘ಬಹಿ ಖಾತಾ’ದಿಂದ ಟ್ಯಾಬ್ಗೆ ಬಜೆಟ್ ದಾಖಲೆ
ಹಣಕಾಸು ಸಚಿವರು ಹಲವು ವರ್ಷಗಳಿಂದ ಬಜೆಟ್ ದಾಖಲೆಗಳನ್ನು ಬ್ರೀಫ್ಕೇಸ್ನಲ್ಲಿ ಸಂಸತ್ ಭವನಕ್ಕೆ ತರುತ್ತಿದ್ದರು. 2019ರಲ್ಲಿ ಈ ಸಂಪ್ರದಾಯವನ್ನು ನಿರ್ಮಲಾ ಬದಲಿಸಿ, ಭಾರತೀಯ ಪದ್ಧತಿಯಂತೆ ಬಹಿ ಖಾತಾದಲ್ಲಿ (ದಾಖಲೆಗಳ ಸಂಚಿ) ಬಜೆಟ್ ದಾಖಲೆಗಳನ್ನು ತಂದಿದ್ದರು. ಈ ವರ್ಷ ಪೇಪರ್ಲೆಸ್ ಬಜೆಟ್ ಮಂಡನೆಗೆ ಸಚಿವರು ನಿರ್ಧರಿಸಿದ್ದಾರೆ. ಹೀಗಾಗಿ ಭಾರತದಲ್ಲಿಯೇ ತಯಾರಾಗಿರುವ ಟ್ಯಾಬ್ನಲ್ಲಿ ಬಜೆಟ್ ದಾಖಲೆಗಳನ್ನು ತಂದಿದ್ದಾರೆ. ಈ ಮೂಲಕ ‘ಆತ್ಮನಿರ್ಭರ್ ಭಾರತ್‘ ಮತ್ತು ‘ಡಿಜಿಟಲ್ ಇಂಡಿಯಾ’ ಪರಿಕಲ್ಪನೆಗಳಿಗೆ ಸರ್ಕಾರ ಆದ್ಯತೆ ನೀಡಿರುವುದನ್ನು ಸೂಚಿಸುತ್ತಿದ್ದಾರೆ.
Budget 2021 LIVE: ಇಂದು ಕೇಂದ್ರ ಬಜೆಟ್.. ಸೊರಗಿರುವ ಆರ್ಥಿಕತೆಗೆ ನಿರ್ಮಲಾ ನೀಡಲಿದ್ದಾರಾ ಮದ್ದು?