ಪಿ ಎಸ್ ಐ ನೇಮಕಾತಿ ಹಗರಣ: ಸಚಿವ ಅಶ್ವಥ್ ನಾರಾಯಣ ರಾಜೀನಾಮೆ ಅಗ್ರಹಿಸಿ ತೀವ್ರಗೊಂಡ ಕಾಂಗ್ರೆಸ್ ಹೋರಾಟ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ವಿರುದ್ಧ ಮಾಡಿದಂತೆ ಸಚಿವ ಅಶ್ವಥ್ ನಾರಾಯಣ ವಿರುದ್ಧ ನೇರವಾಗಿ ಅರೋಪ ಹೊರಿಸುತ್ತಿಲ್ಲ. ಶಿವಕುಮಾರ ಅವರು ಸಚಿವರ ಸಂಬಂಧಿಯೊಬ್ಬ ಅಂತ ಹೇಳುತ್ತಾರೆ.
ಬೆಂಗಳೂರು: ಪಿ ಎಸ್ ಐ ನೇಮಕಾತಿ ಹಗರಣದಲ್ಲಿ ಹೆಸರು ಕೇಳಿಬರುತ್ತಿರುವ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ (CN Ashwath Narayan Gowda) ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಪುಟದ ಎಲ್ಲ ಸಚಿವರು ವಹಿಸಿಕೊಂಡು ಮಾತಾಡಿದರೂ ಉನ್ನತ ಶಿಕ್ಷಣ ಸಚಿವರ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಮಾರಾಯ್ರೇ. ಬುಧವಾರದಂದು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್ ಎಸ್ ಯು ಐ) (NSUI) ಸದಸ್ಯರು, ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ (Ramalinga Reddy) ಹಾಗೂ ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ (BK Hariprasad) ಅವರ ನೇತೃತ್ವದಲ್ಲಿ ಸಚಿವರ ಮನೆ ಮತ್ತು ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪ್ಲೆಕಾರ್ಡ್ ಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿರುವ ಕೆಲವು ಪೊಲೀಸರನ್ನು ಕಂಡು ದಿಗಿಲು ಬೀಳಬೇಡಿ. ಅಸಲಿಗೆ ಅವರು ಅಸಲಿ ಪೊಲೀಸರಲ್ಲ, ಪೊಲೀಸರ ವೇಷದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು! ಆದರೆ ಅಸಲಿ ಪೊಲೀಸರು ಅಲ್ಲಿಗೆ ಬಂದಾಗ ಅಸಲಿ ಯಾರು ನಕಲಿ ಯಾರು ಅಂತ ಗೊಂದಲವಾಗೋದು ಮಾತ್ರ ಸತ್ಯ.
ಪ್ರತಿಭಟನೆಕಾರರು ನೇರವಾಗಿ ಅಶ್ವಥ್ ನಾರಾಯಣ ಅವರ ವಿರುದ್ಧವೇ ಘೋಷಣೆ ಕೂಗುತ್ತಿದ್ದಾರೆ. ಭ್ರಷ್ಟಾಚಾರಿ ನಾರಾಯಣಗೆ ಧಿಕ್ಕಾರ, ಭ್ರಷ್ಟಾಚಾರಿ ನಾರಾಯಣರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿ, ಶೇಮ್ ಶೇಮ್ ನಾರಾಯಣ, 40 ಪರ್ಸೆಂಟ್ ಸರ್ಕಾರಕ್ಕೆ ಧಿಕ್ಕಾರ, ನಮಗೆ ನ್ಯಾಯ ಬೇಕು ಎಂಬ ಘೋಷಣೆಗಳು ನಿಮ್ಮ ಕಿವಿಗೆ ಬೀಳುತ್ತವೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರ ವಿರುದ್ಧ ಮಾಡಿದಂತೆ ಸಚಿವ ಅಶ್ವಥ್ ನಾರಾಯಣ ವಿರುದ್ಧ ನೇರವಾಗಿ ಅರೋಪ ಹೊರಿಸುತ್ತಿಲ್ಲ. ಶಿವಕುಮಾರ ಅವರು ಸಚಿವರ ಸಂಬಂಧಿಯೊಬ್ಬ ಅಂತ ಹೇಳುತ್ತಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತಾಡಿದ ಸಿದ್ದರಾಮಯ್ಯನವರು; ಅಶ್ವಥ್ ಗೌಡ ಮತ್ತು ನಾಗೇಶ ಗೌಡ ಹೆಸರಿನ ಸಚಿವರ ಸಂಬಂಧಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆ ಅಂತ ಹೇಳಿದರು.
ಇದನ್ನೂ ಓದಿ: ಅಶ್ವಥ್ ಗೌಡ ಮತ್ತು ನಾಗೇಶ ಗೌಡ ಹೆಸರಿನ ಅರೋಪಿಗಳು ಸಚಿವ ಅಶ್ವಥ್ ನಾರಾಯಣರವರ ಸಂಬಂಧಿಕರು: ಸಿದ್ದರಾಮಯ್ಯ