ಬೆಂಕಿಯ ಅವಘಡಕ್ಕೆ ರೈತನ ಬದುಕಿನಲ್ಲಿ ಆವರಿಸಿದ ಕತ್ತಲು..
ಹಾವೇರಿ: ದನದ ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡು ಕೊಟ್ಟಿಗೆಯಲ್ಲಿದ್ದ ಒಂದು ಆಕಳು ಸಜೀವ ದಹನ ಆಗಿದ್ದು, ಮತ್ತೊಂದು ಆಕಳು ಹಾಗೂ ಒಂದು ಎತ್ತು ಗಂಭೀರವಾಗಿ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಗುಡ್ಡದಮಾದಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಕುಮಾರ್ ಮನೆಯ ಪಕ್ಕದ ದನದ ಕೊಟ್ಟಿಗೆಯಲ್ಲಿ ಒಂದು ಎತ್ತು ಮತ್ತು ಎರಡು ಆಕಳುಗಳನ್ನು ಕಟ್ಟಿದ್ದ. ಎಂದಿನಂತೆ ಮನೆಯವರೆಲ್ಲರೂ ಮನೆಯ ಒಳಗೆ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದರು. ಆದರೆ ಏಕಾಏಕಿ ದನದ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡ […]

ಹಾವೇರಿ: ದನದ ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡು ಕೊಟ್ಟಿಗೆಯಲ್ಲಿದ್ದ ಒಂದು ಆಕಳು ಸಜೀವ ದಹನ ಆಗಿದ್ದು, ಮತ್ತೊಂದು ಆಕಳು ಹಾಗೂ ಒಂದು ಎತ್ತು ಗಂಭೀರವಾಗಿ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಗುಡ್ಡದಮಾದಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಕುಮಾರ್ ಮನೆಯ ಪಕ್ಕದ ದನದ ಕೊಟ್ಟಿಗೆಯಲ್ಲಿ ಒಂದು ಎತ್ತು ಮತ್ತು ಎರಡು ಆಕಳುಗಳನ್ನು ಕಟ್ಟಿದ್ದ. ಎಂದಿನಂತೆ ಮನೆಯವರೆಲ್ಲರೂ ಮನೆಯ ಒಳಗೆ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದರು. ಆದರೆ ಏಕಾಏಕಿ ದನದ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ದನದ ಕೊಟ್ಟಿಗೆ ಧಗಧಗನೆ ಹೊತ್ತಿ ಉರಿದಿದೆ.
ಬೆಂಕಿ ತಗುಲಿ ಆಕಳು ಮತ್ತು ಎತ್ತು ನರಳಾಟ: ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಕಂಡ ಗ್ರಾಮದ ಜನರು ಕುಮಾರನ ಮನೆಯ ಬಳಿ ಧಾವಿಸಿ ಹರಸಾಹಸದಿಂದ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಒಂದು ಆಕಳು ಬೆಂಕಿಯಲ್ಲಿ ಬೆಂದು ಸಜೀವ ದಹನ ಆಗಿದೆ. ಮತ್ತೊಂದು ಆಕಳು ಹಾಗೂ ಒಂದು ಎತ್ತು ಅರೆಬರೆ ಬೆಂದ ಸ್ಥಿತಿಯಲ್ಲಿ ನರಳಾಡುತ್ತಿರುವುದು ನೆರೆದಿದ್ದವರ ಕರುಳು ಕಿತ್ತು ಬರುವಂತಿತ್ತು. ಐವತ್ತರಿಂದ ಎಪ್ಪತ್ತು ಸಾವಿರ ರೂಪಾಯಿ ಬೆಲೆ ಬಾಳುವ ಆಕಳು ಮತ್ತು ಎತ್ತು ಬೆಂಕಿಯ ಕೆನ್ನಾಲಿಗೆಗೆ ಬೆಂದು ಹೋಗಿರುವುದು ರೈತನ ಕುಟುಂಬ ಹಾಗೂ ಸ್ಥಳೀಯರ ಕಣ್ಣಾಲಿಗಳು ತೇವಗೊಳ್ಳುವಂತಾಗಿತ್ತು.
ದನದಕೊಟ್ಟಿಗೆಯಲ್ಲಿ ದೀಪವೂ ಇರಲಿಲ್ಲ, ವಿದ್ಯುತ್ ಅವಘಡ ಸಂಭವಿಸುವ ಪರಿಸ್ಥಿತಿಯೂ ಇರಲಿಲ್ಲವಂತೆ. ಆದರೆ ಏಕಾಏಕಿ ಬೆಂಕಿ ಹೇಗೆ ಹೊತ್ತಿಕೊಂಡಿದೆ ಎಂಬುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಅವಘಡಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಒಟ್ಟಿನಲ್ಲಿ ಒಂದು ಆಕಳು ಸಜೀವ ದಹನ ಆಗಿರುವುದು, ಮತ್ತೊಂದು ಆಕಳು ಹಾಗೂ ಒಂದು ಎತ್ತು ಅರೆಬರೆ ಬೆಂದ ಸ್ಥಿತಿಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವುದು ರೈತನ ಕುಟುಂಬಕ್ಕೆ ಕತ್ತಲು ಆವರಿಸುವಂತೆ ಮಾಡಿದೆ.
Published On - 10:27 am, Mon, 16 November 20