ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅವರು ಹೇಳಿದ ಆ ಮಹಾನ್ ನಾಯಕ ಯಾರು ಎಂದು ಗೊತ್ತಿಲ್ಲಯ್ಯ. ನನ್ನ ಮೇಲೆ ಹೇಳಲಿ ಬಿಡಿ, ಇದು ರಾಜಕೀಯ ಚೆಸ್ ಗೇಮ್. ಸಂತೋಷ, ಯಾರದ್ದು ಏನೇನು ಕಥೆನೋ ಗೊತ್ತಿಲ್ಲ. ಅವರೆಲ್ಲ ದೇವರ ಮಕ್ಕಳು ಎಂದು ತಮ್ಮದೇ ದಾಟಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ.
ನಮ್ಮ ಮನೆಯವರೇ, ಸುತ್ತಮುತ್ತಲಿನವರೇ ಇದನ್ನು ಮಾಡಿದ್ದಾರೆ ಎಂಬ ರಮೇಶ್ ಹೇಳಿಕೆಗೆ ಪ್ರತ್ಯುತ್ತರಿಸಿ, ಒಂದು ಕಾಲದಲ್ಲಿ ರಮೇಶ್ಗೆ ಒಳ್ಳೇದಾಗಲಿ ಎಂದು ಬಯಸಿದವನು ನಾನು. ಏನೇನೋ ಹುಚ್ಚು ಹುಚ್ಚಾಗಿ ಮಾತನಾಡಿದ ಮೇಲೆ ಸುಮ್ಮನಾದೆ. ಪಕ್ಷ ಬಿಟ್ಟ ಮೇಲೆ ನಾನು ರಮೇಶ್ಗೆ ಕಾಲ್ ಮಾಡಿಲ್ಲ. ಅವನು ನಮ್ಮ ಜೊತೆಯೇ ಇದ್ದವನು. ಆ ಸಿಡಿ ಫೇಕ್ ಆದರೆ ತನಿಖೆ ಯಾಕೆ ಬೇಕು? ಅವನು ಏನೋ ಡಿಪ್ರೆಶನಲ್ಲಿ ಇದಾನೆ ಹಾಗಾಗಿ ನಾನೇನು ಹೇಳೋಲ್ಲ. I feel Sorry for him ಎಂದಿದ್ದಾರೆ.
ಸಿಡಿ ಮಾಡಿದ್ದು ಕಾಂಗ್ರೆಸ್ನವರೇ ಎಂಬ ಎಸ್.ಟಿ ಸೋಮಶೇಖರ್ ಆರೋಪದ ಬಗ್ಗೆ ಮಾತನಾಡಿ, ನನ್ನ ಮಿತ್ರನಾದ ಸೋಮಶೇಖರ್ನನ್ನು ಬಿಜೆಪಿಗಿಂತ ಜಾಸ್ತಿ ಹತ್ತಿರದಿಂದ ಬಲ್ಲೆ. ನಮ್ಮ ಪಕ್ಷದ ಅಧ್ಯಕ್ಷರಾಗಿದ್ದರು, ಅಷ್ಟು ದೊಡ್ಡ ಸ್ಥಾನ ಸಿಕ್ಕಿದೆ ಅವರಿಗೆ. 20 ವರ್ಷದಿಂದ ನಾವು ಈ ಕೆಲಸ ಮಾಡಿದ್ದೇವೆಂದು ಹೇಳಿದ್ದಾರಲ್ಲ, ಏನೇನು ಕೆಲಸ ಎಂದು ಇವರದ್ದೂ ಸೇರಿಸಿ ಹೇಳಲಿ. ಇವರೇನು ಮಾಡಿದರು, ಯಾರು ಏನು ಮಾಡಿದ್ರು ಎನ್ನುವುದನ್ನು ಇವರೇ ಹೇಳಲಿ ನಮ್ಮದೇನು ತಕರಾರು ಇಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಸಿಎಂಗೆ ಸಿಡಿ ಗುಮ್ಮ ಎಂದು ಎಚ್.ವಿಶ್ವನಾಥ್ ಹೇಳಿದ್ದಾರೆ. ಬ್ಲ್ಯಾಕ್ಮೇಲ್ ಮಾಡಿದವರನ್ನ ಮಂತ್ರಿ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಲು ಸಾಲ ಎಂದು ಎಂ.ಟಿ.ಬಿ ಹೇಳಿದ್ದರು. ಆದ್ರೆ ಈ ಹಿಂದೆ ಅವರು ತನಿಖೆ ಮಾಡಲಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರಪ್ಟ್ ಎಂದು ಸಿಡಿಯಲ್ಲಿ ಹೇಳಿದ್ದಾರೆ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ ಪಕ್ಷ ಬಿಟ್ಟು ಹೋದವರಿಗೆ ತಿರುಗು ಬಾಣ ಬಿಟ್ಟಿದ್ದಾರೆ.
ಇದನ್ನೂ ಓದಿ:
ಗೃಹ ಇಲಾಖೆ ಕಡೆಯಿಂದ ರಮೇಶ್ ಜಾರಕಿಹೊಳಿ ಸಿಡಿ ತನಿಖೆಗೆ ಆದೇಶ ಬರಲಿದೆ: ಸಿಎಂ ಯಡಿಯೂರಪ್ಪ
‘CD ಪ್ರಕರಣದಲ್ಲಿ 9 ಜನರು ಭಾಗಿಯಾಗಿದ್ದಾರೆ; ರಾಜಕೀಯ ಹೋದ್ರೂ ತೊಂದರೆಯಿಲ್ಲ.. ಇವರಿಗೆ ತಕ್ಕ ಶಾಸ್ತಿ ಮಾಡ್ತೇವೆ’