ರೈತರೊಟ್ಟಿಗೆ ವರುಣನ ಕಣ್ಣಾಮುಚ್ಚಾಲೆ ಆಟ: ಒಂದೆಡೆ ಭಾರಿ ಮಳೆ, ಮತ್ತೊಂದೆಡೆ ಬೆಲೆ ಕುಸಿತ
ಕೋಲಾರ: ಮಳೆರಾಯನ ಅವಾಂತರದಿಂದ ಉತ್ತರ ಕರ್ನಾಟಕದಲ್ಲಿ ರೈತರ ಬದುಕು ಮೂರಾಬಟ್ಟೆಯಾದ್ರೆ, ಇತ್ತ ಬಯಲುಸೀಮೆಯಲ್ಲಿ ಮಳೆ ಇಲ್ಲದಿದ್ರು ಬೆಳೆದ ಬೆಳೆ ಬೆಲೆ ಕಳೆದುಕೊಂಡಿದೆ. ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಎಪಿಎಂಸಿ ಮಾರುಕಟ್ಟೆ ಕೋಲಾರದಲ್ಲಿದೆ. ಇಲ್ಲಿ ಕಳೆದ ಕೆಲವು ತಿಂಗಳಿಂದ ಕೊರೊನಾ ಸಂಕಷ್ಟದ ನಂತರ ತರಕಾರಿ ಹಾಗೂ ಟೊಮ್ಯಾಟೋಗೆ ಒಳ್ಳೆಯ ಬೆಲೆ ಬಂದಿತ್ತು. ಒಂದು ಬಾಕ್ಸ್ ಟೊಮ್ಯಾಟೋ 600-700 ರೂಪಾಯಿ ಇತ್ತು. ಆದ್ರೆ ಕಳೆದೊಂದು ವಾರದಿಂದ ಉತ್ತರ ಭಾರತದಲ್ಲಿ ಅದರಲ್ಲೂ ಮಹಾರಾಷ್ಟ್ರದಲ್ಲಿ ಹಾಗೂ ಉತ್ತರ ಕರ್ನಾಟಕದಲ್ಲಿ ಬೆಂಬಿಡದೆ ವರುಣ ಅಬ್ಬರಿಸುತ್ತಿದ್ದಾನೆ. […]
ಕೋಲಾರ: ಮಳೆರಾಯನ ಅವಾಂತರದಿಂದ ಉತ್ತರ ಕರ್ನಾಟಕದಲ್ಲಿ ರೈತರ ಬದುಕು ಮೂರಾಬಟ್ಟೆಯಾದ್ರೆ, ಇತ್ತ ಬಯಲುಸೀಮೆಯಲ್ಲಿ ಮಳೆ ಇಲ್ಲದಿದ್ರು ಬೆಳೆದ ಬೆಳೆ ಬೆಲೆ ಕಳೆದುಕೊಂಡಿದೆ.
ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಎಪಿಎಂಸಿ ಮಾರುಕಟ್ಟೆ ಕೋಲಾರದಲ್ಲಿದೆ. ಇಲ್ಲಿ ಕಳೆದ ಕೆಲವು ತಿಂಗಳಿಂದ ಕೊರೊನಾ ಸಂಕಷ್ಟದ ನಂತರ ತರಕಾರಿ ಹಾಗೂ ಟೊಮ್ಯಾಟೋಗೆ ಒಳ್ಳೆಯ ಬೆಲೆ ಬಂದಿತ್ತು. ಒಂದು ಬಾಕ್ಸ್ ಟೊಮ್ಯಾಟೋ 600-700 ರೂಪಾಯಿ ಇತ್ತು. ಆದ್ರೆ ಕಳೆದೊಂದು ವಾರದಿಂದ ಉತ್ತರ ಭಾರತದಲ್ಲಿ ಅದರಲ್ಲೂ ಮಹಾರಾಷ್ಟ್ರದಲ್ಲಿ ಹಾಗೂ ಉತ್ತರ ಕರ್ನಾಟಕದಲ್ಲಿ ಬೆಂಬಿಡದೆ ವರುಣ ಅಬ್ಬರಿಸುತ್ತಿದ್ದಾನೆ. ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಮಹಾರಾಷ್ಟ್ರಸೇರಿದಂತೆ ಇತರೆ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮತ್ತು ಸೇತುವೆಗಳು ಮುಳುಗಿ ಹೋಗಿವೆ. ಇದರ ಪರಿಣಾಮ ಜಿಲ್ಲೆಯಲ್ಲಿ ಬೆಳೆದ ಟೊಮ್ಯಾಟೋ ಸೇರಿದಂತೆ ಇತರೆ ತರಕಾರಿ ಬೆಳೆಗಳನ್ನು ಬೇರೆ ರಾಜ್ಯಗಳಿಗೆ ರಫ್ತು ಮಾಡಲು ಅನ್ಯ ಮಾರ್ಗವಿಲ್ಲದೆ ತರಕಾರಿಯ ಬೆಲೆ ಸುಮಾರು ಅರ್ಧದಷ್ಟು ಬೆಲೆ ಕುಸಿತ ಕಂಡಿದೆ. ಅಂದ್ರೆ 600-700 ರೂಪಾಯಿ ಇದ್ದ ಟೊಮ್ಯಾಟೋ ಏಕಾಏಕಿ ಈಗ 150-250 ರೂಪಾಯಿಗೆ ಕುಸಿದಿದೆ.
ಜೂನ್, ಜುಲೈ ಟೊಮ್ಯಾಟೋಗೆ ಸುಗ್ಗಿಕಾಲ ಪ್ರತಿವರ್ಷ ಬಹುತೇಕ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಟೊಮ್ಯಾಟೋ ಬೆಳೆದ ರೈತರಿಗೆ ಸುಗ್ಗಿ ಕಾಲದಂತೆ ಇರುತ್ತಿತ್ತು. ಆದ್ರೆ ಈ ಬಾರಿ ಕೊರೊನಾ ಮಹಾಮಾರಿಯಿಂದ ಬೆಳೆದ ಬೆಳೆಗಳಿಗೆ ಬೇಡಿಕೆ ಇಲ್ಲದೆ, ಹೊರ ರಾಜ್ಯಗಳಿಗೆ ರಫ್ತು ಮಾಡಲಾಗದೆ ಕಂಗಾಲಾಗಿದ್ರು. ಆದ್ರೆ ಲಾಕ್ಡೌನ್ ನಂತರ ಈಗಷ್ಟೆ ತರಕಾರಿ ಬೆಲೆಗಳು ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿತ್ತು. ಅಷ್ಟರಲ್ಲಿ ಮಳೆ ಅಬ್ಬರ ಹೆಚ್ಚಾಗಿ ಮತ್ತೆ ಟೊಮ್ಯಾಟೋ ಬೆಲೆ ತೀವ್ರ ಕುಸಿತ ಕಂಡಿದೆ.
ಹೊರ ರಾಜ್ಯದಲ್ಲಿ ಟೊಮ್ಯಾಟೋ ಬೆಳೆಯೋದಿಲ್ಲ? ಈ ಸಮಯದಲ್ಲಿ ದೇಶದ ಯಾವುದೇ ಭಾಗದಲ್ಲಿ ಟೊಮ್ಯಾಟೋ ಬೆಳೆ ಬೆಳೆಯೋದಿಲ್ಲ.ಇದಕ್ಕೆ ಕಾರಣ ಹವಾಮಾನ ವೈಪರೀತ್ಯ ಹಾಗೂ ಮಳೆ. ಹಾಗಾಗಿ ಕೋಲಾರದಲ್ಲಿ ಯತೇಚ್ಚವಾಗಿ ಟೊಮ್ಯಾಟೋ ಬೆಳೆದು ರಫ್ತು ಮಾಡಲಾಗುತ್ತದೆ. ಜೊತೆಗೆ, ರೈತರಿಗೂ ಒಳ್ಳೇ ಬೆಲೆ ಸಿಗುತ್ತದೆ. ಆದ್ರೆ ಕಳೆದೊಂದು ವಾರದಿಂದ ಟೊಮ್ಯಾಟೋ ಬೆಳೆದ ರೈತರಿಗೆ ನಿರೀಕ್ಷಿಸಿದಷ್ಟು ಬೆಲೆ ಸಿಗದಂತಾಗಿದೆ. ಮಳೆ ಕಡಿಮೆಯಾದ್ರೆ ಮತ್ತೆ ಒಳ್ಳೆಯ ಬೆಲೆ ಸಿಗುತ್ತೆ ಅನ್ನೋದು ರೈತರ ನಿರೀಕ್ಷೆ.
ಒಟ್ಟಾರೆ, ವರುಣ ದೇಶದ ಹಲವೆಡೆ ಜನರ ಬದುಕನ್ನೇ ನೀರಿನಲ್ಲಿ ಕೊಚ್ಚಿಕೊಂಡು ಹೋಗುವಂತೆ ಮಾಡಿದ್ರೆ ಇತ್ತ ಮಳೆ ಇಲ್ಲದೆ ಬರದಲ್ಲೂ ಬೆಳೆ ಬೆಳೆದಿದ್ದ ರೈತರ ಬದುಕನ್ನು ಬೆಲೆ ಇಲ್ಲದೆ ಸಂಕಷ್ಟಕ್ಕೆ ದೂಡಿದ್ದಾನೆ. ರೈತರೊಟ್ಟಿಗೆ ಕಣ್ಣಾಮುಚ್ಚಾಲೆ ಆಡುವ ಮೂಲಕ ಅವರನ್ನ ಸಂಕಷ್ಟಕ್ಕೆ ದೂಡುತ್ತಿದ್ದಾನೆ. -ರಾಜೇಂದ್ರ ಸಿಂಹ