ಕಾರಂಜಾ ಡ್ಯಾಂ ಭರ್ತಿ; ಕಟಾವಿಗೆ ಬಂದ ಕಬ್ಬು ಸಾಗಿಸಲಾಗದೆ ಪರದಾಟ: ರೈತರ ಗೋಳು ಕೇಳೋರು ಯಾರು?

ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಇದುವರೆಗೆ ಯಾರೂ ಇತ್ತ ಗಮನ ಹರಿಸಿಲ್ಲ ಎಂಬುದು ರೈತರ ಅಳಲು. ಇನ್ನೊಂದೆಡೆ ಜಲಾಶಯ ಭರ್ತಿಯಾಗಿರುವುದರಿಂದ ನೀರಿನಲ್ಲಿ ಮೊಸಳೆಗಳು ಇರುವ ಸಾಧ್ಯತೆ ಇದ್ದು ರೈತರು ಜಾನುವಾರುಗಳನ್ನು ಸಾಗಿಸಲು ಸಹ ಭಯಗೊಂಡಿದ್ದಾರೆ.

ಕಾರಂಜಾ ಡ್ಯಾಂ ಭರ್ತಿ; ಕಟಾವಿಗೆ ಬಂದ ಕಬ್ಬು ಸಾಗಿಸಲಾಗದೆ ಪರದಾಟ: ರೈತರ ಗೋಳು ಕೇಳೋರು ಯಾರು?
ಜಲಾವೃತಗೊಂಡ ಜಮೀನು, ರಸ್ತೆ ದಾಟಲು ಪರದಾಡುತ್ತಿರುವ ಜನ, ಜಾನುವಾರು
Skanda

| Edited By: sadhu srinath

Dec 14, 2020 | 4:13 PM

ಬೀದರ್​: ನಾಲ್ಕು ವರ್ಷಗಳಿಂದ ಸರಿಯಾದ ಮಳೆಯಿಲ್ಲದೆ ಕಂಗಾಲಾಗಿದ್ದ ಬೀದರ್​ ಜನತೆ ಈ ಸಲ ಭಾರೀ ಮಳೆಗೆ ಸಾಕ್ಷಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಸುರಿದ ಭರ್ಜರಿ ಮಳೆಯಿಂದ ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯ ಭರ್ತಿಯಾಗಿದೆ. ಆದರೆ, ಜಲಾಶಯ ತುಂಬಿದ್ದಕ್ಕೆ ಅಂದು ಖುಷಿಪಟ್ಟಿದ್ದ ಜನ ಇಂದು ದಿಕ್ಕು ತೋಚದಂತಾಗಿ ಹೋಗಿದ್ದಾರೆ.

ಪ್ರಸ್ತುತ ಜಲಾಶಯದ ನೀರಿನ ಸಂಗ್ರಹ 7.691 ಟಿಎಂಸಿ ಮಟ್ಟಕ್ಕೇರಿದೆ. ನೀರನ್ನು ಹೊರ ಬಿಡುತ್ತಿದ್ದರೂ ಒಳಹರಿವು ಜಾಸ್ತಿಯಾಗಿರುವುದರಿಂದ ಜಲಾಶಯದ ಗರಿಷ್ಠ ಮಟ್ಟ ಮೀರಿ ನೀರು ಸಂಗ್ರಹವಾಗುತ್ತಿದೆ. ಇದರಿಂದಾಗಿ ನೂರಾರು ರೈತರ ಜಮೀನಿಗೆ ನೀರು ನುಗ್ಗಿ ಸಾಕಷ್ಟು ಬೆಳೆಹಾನಿಯಾಗಿದೆ. ಜಿಲ್ಲೆಯ ಅತಿವಾಳ, ಭೋತಗಿ ಸೇರಿದಂತೆ ಸುಮಾರು 12 ಗ್ರಾಮಗಳ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಅವಧಿಯಲ್ಲಿ ಜಮೀನಿಗೆ ನೀರು ನುಗುತ್ತಿರುವುದು ಕಬ್ಬು ಬೆಳೆಗಾರರ ನಿದ್ದೆಗೆಡಿಸಿದೆ. ಜಮೀನುಗಳಿಗೆ ಹೋಗುವ ದಾರಿಯೇ ಜಲಾಶಯದ ಹಿನ್ನೀರಿನಿಂದಾಗಿ ಬಂದ್ ಆಗಿದ್ದು, ಅತಿವಾಳ ಗ್ರಾಮದ ರೈತರು ಕಟಾವಿಗೆ ಬಂದ ಕಬ್ಬನ್ನು ಕಾರ್ಖಾನೆಗೆ ಸಾಗಿಸಲಾಗದೆ ಪರದಾಡುತ್ತಿದ್ದಾರೆ.

ಈ ಗಂಭೀರ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಇದುವರೆಗೆ ಯಾರೂ ಇತ್ತ ಗಮನ ಹರಿಸಿಲ್ಲ ಎಂಬುದು ರೈತರ ಅಳಲು. ಇನ್ನೊಂದೆಡೆ ಜಲಾಶಯ ಭರ್ತಿಯಾಗಿರುವುದರಿಂದ ನೀರಿನಲ್ಲಿ ಮೊಸಳೆಗಳು ಇರುವ ಸಾಧ್ಯತೆ ಇದ್ದು ರೈತರು ಜಾನುವಾರುಗಳನ್ನು ಸಾಗಿಸಲು ಸಹ ಭಯಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈ ವರ್ಷ ಸುರಿದ ಭಾರೀ ಮಳೆಯಿಂದಾಗಿ ಅತಿಹೆಚ್ಚು ಬೆಳೆಹಾನಿಯಾಗಿ ರೈತರ ಪರಿಸ್ಥಿತಿ ಯಾತನಾಮಯವಾಗಿದೆ. ಒಂದು ಕಡೆ ಜಲಾಶಯ ತುಂಬಿದ್ದಕ್ಕೆ ಖುಷಿ ಪಡಬೇಕೋ? ಅದೇ ಜಲಾಶಯದ ಹಿನ್ನೀರು ಜಮೀನಿನಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಿರುವುದರಿಂದ ದುಃಖಿಸಬೇಕೋ ಎಂದು ತಿಳಿಯದಂತಾಗಿದೆ.

ಒಟ್ಟಿನಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಕಂಗಾಲಾಗಿರುವ ರೈತರಿಗೆ ಇದೀಗ ಬೆಳೆದ ಕಬ್ಬು ಒಣಗಿ ಹೋಗುವ ಮುನ್ನ ಕಾರ್ಖಾನೆಗೆ ಸೇರಿಸಬೇಕಾದ ಅನಿವಾರ್ಯತೆ ಇದೆ. ರೈತರ ಅಳಲಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶೀಘ್ರದಲ್ಲೇ ಸ್ಪಂದಿಸಿ ಪರಿಹಾರ ಒದಗಿಸಿಕೊಡಬೇಕಿದೆ. -ಸುರೇಶ್ ನಾಯಕ್

ಮಾರ್ಕಂಡೇಯ ನದಿ ಪ್ರವಾಹಕ್ಕೆ 5 ಸಾವಿರ ಹೆಕ್ಟೇರ್ ಜಲಾವೃತ, ಕಬ್ಬು ಮತ್ತು ಭತ್ತ ಹಾನಿ

Follow us on

Related Stories

Most Read Stories

Click on your DTH Provider to Add TV9 Kannada