ಬೆಂಗಳೂರು: ಗ್ರಂಥಿಗೆ ಅಂಗಡಿಯಲ್ಲಿ ಜರುಗಿದ ಅಗ್ನಿ ಅವಘಡದಿಂದ ವ್ಯಕ್ತಿಯೊಬ್ಬ ಸುಟ್ಟು ಕರಕಲಾಗಿರುವ ಘಟನೆ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ನಡೆದಿದೆ.
ಅವೆನ್ಯೂ ರಸ್ತೆಯಲ್ಲಿರುವ ಗ್ರಂಥಿಗೆ ಅಂಗಡಿಯಲ್ಲಿ ಇಂದು ಮಧ್ಯಾಹ್ನ 1.20 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಕೂಡಲೇ ಅಗ್ನಿಶಾಮಕ ಇಲಾಖೆಗೆ ಸುದ್ಧಿ ಮುಟ್ಟಿಸಿದ್ದಾರೆ. ವಿಷಯ ತಿಳಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸುಮಾರು 40 ನಿಮಿಷಗಳ ಕಾಲ ಕಾರ್ಯಚರಣೆ ನಡೆಸಿ, ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಬೆಂಕಿಯನ್ನು ನಂದಿಸಿ ಗ್ರಂಥಿಗೆ ಅಂಗಡಿಯಲ್ಲಿ ಅವಶೇಷಗಳನ್ನು ಪರಿಶೀಲಿಸುವ ವೇಳೆ ಅಂಗಡಿಯ ಒಳಗೆ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಮೃತದೇಹ 40 ವರ್ಷ ವಯೋಮಾನದ ವ್ಯಕ್ತಿಯದಿರಬಹುದೆಂದು ಊಹಿಸಲಾಗಿದೆ.
ಮೃತದೇಹ ಅಂಗಡಿಯ ಮಾಲೀಕನದೇ ಇರಬಹುದೆಂದು ಶಂಕಿಸಲಾಗಿದ್ದು, ಸದ್ಯ ಕೆಆರ್ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಅಗ್ನಿ ಅವಘಡಕ್ಕೆ ಕಾರಣವೇನೆಂಬುದನ್ನು ಪರಿಶೀಲಿಸುತ್ತಿದ್ದಾರೆ.