ಒಂದು ಬಿಟ್​ ಕಾಯಿನ್​ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ!

ವಿಶ್ವದಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಹೊಂದಿರುವ ಡಿಜಿಟಲ್​ ಕರೆನ್ಸಿಗಳಲ್ಲಿ ಬಿಟ್​ ಕಾಯಿನ್​ ಮೊದಲ ಸ್ಥಾನದಲ್ಲಿದೆ. ಬಿಟ್​ ಕಾಯಿನ್​ ಬೆಲೆ ಸದ್ಯ 60,497 ಡಾಲರ್​ ಇದೆ.

ಒಂದು ಬಿಟ್​ ಕಾಯಿನ್​ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ!
ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
|

Updated on: Mar 14, 2021 | 7:15 PM

ಮುಂಬೈ: ಬಿಟ್​ ಕಾಯಿನ್​ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮೂರು ತಿಂಗಳ ಹಿಂದೆ 29 ಸಾವಿರ ಡಾಲರ್​ (ಭಾರತೀಯ ಕರೆನ್ಸಿಯಲ್ಲಿ 21.26 ಲಕ್ಷ ರೂಪಾಯಿ) ಇದ್ದ ಬಿಟ್​ ಕಾಯಿನ್​ ಬೆಲೆ ಈಗ ದ್ವಿಗುಣಗೊಂಡಿದೆ. ಇದೇ ಮೊದಲ ಬಾರಿಗೆ ಬಿಟ್​ ಕಾಯಿನ್​ ಬೆಲೆ 60 ಸಾವಿರ ಡಾಲರ್ (43.97 ಲಕ್ಷ ಡಾಲರ್​) ದಾಟಿದೆ. ಕೊರೊನಾ ವೈರಸ್​ ಮಧ್ಯೆಯೂ ಬಿಟ್​ ಕಾಯಿನ್​ ಬೆಲೆ ಮಿತಿ ಮೀರಿ ಏರಿಕೆ ಕಾಣುತ್ತಿರುವುದು ಸಾಕಷ್ಟು ಅಚ್ಚರಿ ಮೂಡಿಸಿದೆ. ಅಂದಹಾಗೆ, ಇತಿಹಾಸದಲ್ಲಿ ಬಿಟ್​ ಕಾಯಿನ್​ ಬೆಲೆ ಇಷ್ಟು ದೊಡ್ಡ ಮಟ್ಟಕ್ಕೆ ಏರಿಕೆ ಆಗಿದ್ದು ಇದೇ ಮೊದಲು. ವಿಶ್ವದಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಹೊಂದಿರುವ ಡಿಜಿಟಲ್​ ಕರೆನ್ಸಿಗಳಲ್ಲಿ ಬಿಟ್​ ಕಾಯಿನ್​ ಮೊದಲ ಸ್ಥಾನದಲ್ಲಿದೆ. ಬಿಟ್​ ಕಾಯಿನ್​ ಬೆಲೆ ಸದ್ಯ $ 60,497 ಇದೆ. ಡಿಸೆಂಬರ್​ 16ರಂದು 19 ಸಾವಿರ ಡಾಲರ್​ ಆಸುಪಾಸಿನಲ್ಲಿದ್ದ ಬಿಟ್​ ಕಾಯಿನ್​ ಬೆಲೆ ಏಕಾಏಕಿ ಏರಿಕೆ ಕಾಣಲು ಆರಂಭವಾಗಿತ್ತು. ಬಿಟ್​ ಕಾಯಿನ್​ನಲ್ಲಿ ಸಾಂಸ್ಥಿಕ ದತ್ತು ಪ್ರಕ್ರಿಯೆ (institutional adoption) ನಡೆಯುತ್ತಿದೆ. ಈ ಕಾರಣಕ್ಕೆ ಈ ಡಿಜಿಟಲ್​ ಕರೆನ್ಸಿಯಲ್ಲಿ ನಾಗಾಲೋಟ ಆರಂಭವಾಗಿದೆ ಎನ್ನಲಾಗುತ್ತಿದೆ. ಬಿಟ್​ ಕಾಯಿನ್​ ಬೆಲೆ ಮತ್ತೂ ಏರಿಕೆ ಕಾಣಬಹುದು ಎಂದು ಮಾರುಕಟ್ಟೆ ತಜ್ಞರ ಭವಿಷ್ಯ ನುಡಿದಿದ್ದಾರೆ.

ಮುಂದಿನ ದಿನಗಳಲ್ಲಿ ಜನರು ಹೂಡಿಕೆ ಮಾಡಲು ಚಿನ್ನದ ಬದಲಿಗೆ ಬಿಟ್​ ಕಾಯಿನ್​ನತ್ತ ಹೆಚ್ಚು ಒಲವು ತೋರುವ ಸಾಧ್ಯತೆ ಇದೆ. ಸಂಸ್ಥೆಗಳು ಬಿಟ್​ ಕಾಯಿನ್​ ಮೇಲೆ ಹೂಡಿಕೆ ಮಾಡಲು ಮುಂದೆ ಬಂದರೆ ಇದರ ಬೆಲೆ ಹೆಚ್ಚಲಿದೆ ಎನ್ನುತ್ತಾರೆ ಮಾರುಕಟ್ಟೆ ಪಂಡಿತರು.

ಏನಿದು ಬಿಟ್​ ಕಾಯಿನ್​? ಬಿಟ್​ ಕಾಯಿನ್​ ಸಂಪೂರ್ಣವಾಗಿ ವರ್ಚುವಲ್​ ಕರೆನ್ಸಿ. ಇದು ಮೊದಲಿಗೆ ಆರಂಭವಾಗಿದ್ದು 2009ರಲ್ಲಿ. ಸತೋಷೋ ನಾಕಮೋಟಿ ಎಂಬುವವರು ಬಿಟ್ ಕಾಯಿನ್​ ಜನಕ. ಇದನ್ನು​ ನೀವು ನೇರವಾಗಿ ಅಂಗಡಿಗಳಲ್ಲಿ ಚಲಾವಣೆ ಮಾಡಲು ಸಾಧ್ಯವಿಲ್ಲ. ಇದನ್ನು ಆನ್​ಲೈನ್​ ಪ್ಲಾಟ್​ಫಾರ್ಮ್​ಗಳ ಮೂಲಕವೇ ಚಲಾವಣೆ ಮಾಡಬೇಕು. ಈ ಹಣ ಚಲಾವಣೆಗೆ ಯಾವುದೇ ನಿರ್ಬಂಧ ಇಲ್ಲ. ಈ ರೀತಿಯ ಸುಮಾರು 800 ಡಿಜಿಟಲ್​ ಕರೆನ್ಸಿ ಲಭ್ಯವಿದೆ. ಇದು ಆನ್​ಲೈನ್​ನಲ್ಲೇ ಇರುವುದರಿಂದ ವೈರಸ್​ ದಾಳಿಗೆ ತುತ್ತಾಗಿ, ಸುಲಭವಾಗಿ ಹ್ಯಾಕ್​ ಆಗಬಹುದು. ಬಿಟ್​ ಕಾಯಿನ್​ಗಳಿಗೆ ಭಾರತದಲ್ಲಿ ಮಾನ್ಯತೆ ಇಲ್ಲ.

ಇದನ್ನೂ ಓದಿ: Tv9 Digital Live | ಬಿಟ್​ ಕಾಯಿನ್​ Bitcoin ಎಂದರೇನು? ಭಾರತಕ್ಕೆ ಬರುತ್ತಾ ಡಿಜಿಟಲ್​ ಕರೆನ್ಸಿ?