ಲೋಕಸಭಾ ಚುನಾವಣೆವರೆಗೆ ಕೆಎಸ್ ಈಶ್ವರಪ್ಪ ಕಾಂಗ್ರೆಸ್ ಸೇರಿದರೂ ಅಚ್ಚರಿ ಇಲ್ಲ: ಎಂಬಿ ಪಾಟೀಲ್
ಗುತ್ತಿಗೆದಾರರ ನಿವಾಸದ ಮೇಲೆ ಐಟಿ ದಾಳಿ ಯಾವಾಗಲೂ ನಡೆಯುತ್ತೆ. ಬಿಜೆಪಿ ಅವಧಿಯಲ್ಲೂ ದಾಳಿಯಾಗಿತ್ತು, ಈಗಲೂ ಐಟಿ ದಾಳಿ ನಡೆಯುತ್ತಿದೆ. ಗುತ್ತಿಗೆದಾರರ ಮನೆ ಮೇಲಿನ ದಾಳಿಗೂ ಕಾಂಗ್ರೆಸ್ಗೂ ಸಂಬಂಧವಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ಟೆಂಡರ್‌ಗಳನ್ನು ಕರೆದಿಲ್ಲ ಎಂದು ಎಂಬಿ ಪಾಟೀಲ್ ಹೇಳಿದರು.

ರಾಯಚೂರು ಅ.21: ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಜೋರಾಗಿದೆ. ಬಿಜೆಪಿಯ (BJP) ಹಲವು ನಾಯಕರು ಮತ್ತು ಕಾರ್ಯಕರ್ತರು ಕಾಂಗ್ರೆಸ್ (Congress) ಸೇರ್ಪಡೆಯಾಗಲಿದ್ದಾರೆ ಎಂಬ ವಂದತಿಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಶುಕ್ರವಾರ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಈ ವಿಚಾರವಾಗಿ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಮಾತನಾಡಿ ಲೋಕಸಭೆ ಚುನಾವಣೆವರೆಗೆ (Lokasabha Election) ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕೂಡ ನಮ್ಮ ಪಕ್ಷಕ್ಕೆ ಬಂದರೂ ಅಚ್ಚರಿಯಿಲ್ಲ. ಅವರು ಆದರೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬೇಕಾದರೆ ವಿಚಾರ ಮಾಡುತ್ತೇವೆ. ಈಶ್ವರಪ್ಪ ಬಹಳ ಮೇಧಾವಿಗಳು. ಅವರ ಹೇಳಿಕೆಗೆ ನಾನು ಉತ್ತರ ಕೊಡಲು ಬಯಸಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದರು.
ಲಿಂಗಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಗುತ್ತಿಗೆದಾರರ ನಿವಾಸದ ಮೇಲೆ ಐಟಿ ದಾಳಿ ಯಾವಾಗಲೂ ನಡೆಯುತ್ತೆ. ಬಿಜೆಪಿ ಅವಧಿಯಲ್ಲೂ ದಾಳಿಯಾಗಿತ್ತು, ಈಗಲೂ ಐಟಿ ದಾಳಿ ನಡೆಯುತ್ತಿದೆ. ಗುತ್ತಿಗೆದಾರರ ಮನೆ ಮೇಲಿನ ದಾಳಿಗೂ ಕಾಂಗ್ರೆಸ್ಗೂ ಸಂಬಂಧವಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಯಾವುದೇ ಟೆಂಡರ್‌ಗಳನ್ನು ಕರೆದಿಲ್ಲ. ಬಿಜೆಪಿಯವರ 40% ಕಮಿಷನ್ ಹಣ ಚುನಾವಣೆ ವೇಳೆ ಹೊರಬರುತ್ತಿದೆ. ಗುತ್ತಿಗೆದಾರರು ಎಲ್ಲಾ ಪಕ್ಷದವರು ಇರುತ್ತಾರೆ. ಯಾವ ಪಕ್ಷದ ಸರ್ಕಾರ ಇರುತ್ತೆ, ಆ ಕಡೆ ಗುತ್ತಿಗೆದಾರರು ಇರುತ್ತಾರೆ ಎಂದರು.
ಸಚಿವ ಶರಣಪ್ರಕಾಶ್ ಪಾಟೀಲ್ ಹೆಸರು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣಪ್ರಕಾಶ ಪಾಟೀಲ್ ರಾಜಕೀಯದಲ್ಲಿ ಬದ್ದತೆ ಹಾಗೂ ಪರಿಶುದ್ಧತೆ ಹೊಂದಿದಂತಹ ನಾಯಕ. ಈ ಪ್ರಕರಣಕ್ಕೆ ಸಿಐಡಿ ತನಿಖೆಯೂ ಅಗತ್ಯವಿಲ್ಲ. ಕೆಎಸ್ ಈಶ್ವರಪ್ಪ ಅವರ ಕೇಸ್ ಬೇರೆ ಶರಣಪ್ರಕಾಶದು ಬೇರೆ. ಶರಣಪ್ರಕಾಶ ಪಾಟೀಲ್ ಅತ್ಯಂತ ದಕ್ಷವಾದ, ಪ್ರಾಮಾಣಿಕವಾದ, ಪರಿಶುದ್ಧವಾದ ನಾಯಕ. ಸುಮ್ನೆ ಎಲ್ಲಾ ಬೋಗಸ್ ಯಾರೋ ಬರಕೊಟ್ಟಿರೋದು ಅದು ಎಂದರು.
ಇದನ್ನೂ ಓದಿ: ಬಿಜೆಪಿಗೆ ಮತ್ತೊಂದು ಶಾಕ್; ಕಮಲಕ್ಕೆ ಗುಡ್ಬೈ ಹೇಳಿ ಕಾಂಗ್ರೆಸ್ಗೆ ಸೇರಲು ಮುಂದಾದ ಮಾಜಿ ಶಾಸಕ
ಬೆಳಗಾವಿ ರಾಜಕಾರಣ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು ಈಗಾಗಲೇ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ, ತುಂಬಾ ತರಾತುರಿಯಲ್ಲಿ ಬೆಳಗಾವಿ ಹೋಗಿದ್ದೆ, ಯಾರಿಗೂ ಹೇಳಲು ಆಗಿಲ್ಲ ಅಂತ. ಸಚಿವ ಸತೀಶ್ ಜಾರಕಿಹೊಳಿಯವರು ನಮ್ಮಲ್ಲಿ ಯಾವ ವ್ಯತ್ಯಾಸ ಇಲ್ಲಾ ಅಂತ ಹೇಳಿದ್ದಾರೆ. ಇದನ್ನ ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಿಗಮಗಳಿಂದ ಹಣ ಕಲೆಕ್ಷನ್ ಬಗ್ಗೆ ಬಿಜೆಪಿ ಪೋಸ್ಟ್ ವಾರ್ ವಿಚಾರವಾಗಿ ಮಾತನಾಡಿದ ಅವರು ಹಿಂದಿನ ಸರ್ಕಾರ ಬಜೆಟ್‌ನ್ನು ನಾವು ಮುಂದುವರಸಿಕೊಂಡು ಹೋಗಿದ್ದೇವೆ. ಅದರಲ್ಲೆ ಗ್ಯಾರೆಂಟಿ ಯೋಜನೆಗಳಿಗೆ ಹಣ ಕೊಟ್ಟಿದ್ದೇವೆ. ನಿಗಮಗಳನ್ನು ನಾವು ಮಾಡಿಲ್ಲ, ಹಿಂದಿನ ಸರ್ಕಾರದ ಬಜೆಟ್ ಮುಂದುವರೆಸುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ