
ಉತ್ತರ ಕನ್ನಡ: ಪುಣ್ಯಕ್ಷೇತ್ರಗಳಲ್ಲಿ ಒಂದಾದ ಗೋಕರ್ಣದಲ್ಲಿಅಸ್ಥಿ ಬಿಡುವ ಕಾರ್ಯ ಅನಾದಿ ಕಾಲದಿಂದಲೂ ಬಂದಿದೆ. ಸಿದ್ದಿ ಮತ್ತು ಮುಕ್ತಿಯ ಪರಿಕಲ್ಪನೆಯನ್ನು ಹೊತ್ತು ಜನರು ಗೋಕರ್ಣಕ್ಕೆ ಆಗಮಿಸುತ್ತಾರೆ. ಭಕ್ತರು ಇಲ್ಲಿ ಕೇಶಮುಂಡನ ಮಾಡಿಸಿಕೊಂಡು ವಾಪಸಾಗುತ್ತಾರೆ.
ಕೇಶಮುಂಡನಕ್ಕೆಂದು ಗೋಕರ್ಣದ ಕೋಟಿ ತೀರ್ಥ ಕಾಲಭೈರವೇಶ್ವರ ದೇವಾಲಯದ ಎದುರು ಕ್ಷೌರಿಕರ ಅಂಗಡಿಗಳು ಇರುತ್ತದೆ. ಎರಡೂವರೆ ದಶಕಗಳ ಹಿಂದೆ ಕ್ಷೌರದ ಅಂಗಡಿಯನ್ನು ಗ್ರಾಮ ಪಂಚಾಯತ್ ವತಿಯಿಂದ ನಿರ್ಮಿಸಿದ್ದಾರೆ. ಇಲ್ಲಿಯೇ ತಲೆಗೂದಲು ತೆಗೆಯುವುದಕ್ಕೆ ಕ್ಷೌರಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಇದನ್ನು ಹೊಸದಾಗಿ ಕಟ್ಟಿ ಕೊಡುತ್ತೇವೆ ಎಂದು ತಿಳಿಸಿ ಕಳೆದ ಒಂದು ವರ್ಷದ ಹಿಂದೆ ಕ್ಷೌರಿಕರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿ ಹಳೆ ಕಟ್ಟಡ ನೆಲಸಮ ಮಾಡಲಾಗಿದೆ.
‘2-3 ತಿಂಗಳಲ್ಲಿ ಕಟ್ಟಿಕೊಡುತ್ತೇವೆ’ ಗೋಕರ್ಣ ಗ್ರಾಮ ಪಂಚಾಯತಿ:
2-3 ತಿಂಗಳ ಒಳಗೆ ಕಟ್ಟಿಕೊಡುವುದಾಗಿ ಹೇಳಿದ ಗೋಕರ್ಣ ಗ್ರಾಮ ಪಂಚಾಯತಿ ಒಂದೂವರೆ ವರ್ಷವಾದರೂ ಕಟ್ಟಡ ಪೂರ್ಣಗೊಳಿಸಿ ಕೊಟ್ಟಿಲ್ಲ. ಇದರಿಂದ ಕ್ಷೌರಿಕರು ಮತ್ತು ಜನರ ಪರದಾಟಕ್ಕೆ ಕೊನೆ ಇಲ್ಲದಂತಾಗಿದೆ.
2016-2017 ನೇ ಸಾಲಿನ 14ನೇ ಹಣಕಾಸಿನ ಅನುದಾನದಡಿ ಗ್ರಾಮ ಪಂಚಾಯತಿ ಆಸ್ತಿಯಲ್ಲಿ ಹೇರ್ ಕಟಿಂಗ್ ಸೆಲೂನ್ ಕಟ್ಟಡ ನಿರ್ಮಾಣಕ್ಕೆಂದು 2.5 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ಕಾಮಗಾರಿ ಕುಂಟುತ್ತಾ ಸಾಗಿ ಕಳೆದ ಹಲವು ದಿನಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಗ್ರಾಮ ಪಂಚಾಯತಿ ಚುಣಾವಣೆಯ ಆರ್ಭಟವಿರುವುದರಿಂದ ಇದರತ್ತ ತಿರುಗಿಯೂ ನೋಡುವವರು ಯಾರೂ ಇಲ್ಲದಾಗಿದೆ.
ಕೋವಿಡ್ ವಿಷಮ ಸ್ಥಿತಿಯಲ್ಲಿ ಸಂಕಷ್ಟ :
ಮೃತ ವ್ಯಕ್ತಿಗಳ ಕ್ರಿಯಾ ಕಾರ್ಯ ಮಾಡಲು ಬಂದವರು ಇದೇ ಕ್ಷೌರಿಕರ ಹತ್ತಿರ ತಲೆಗೂದಲು ಕತ್ತರಿಸಬೇಕು. ತಾತ್ಕಲಿಕವಾಗಿ ಪ್ಲಾಸ್ಟಿಕ್ ಮತ್ತು ತಗಡಿನ ಶೆಡ್ ಅನ್ನು ತೀರ ಚಿಕ್ಕದ್ದಾಗಿ ನಿರ್ಮಿಸಲಾಗಿದೆ. ಸಾಮಾಜಿಕ ಅಂತರದಲ್ಲಿ ಕುಳಿತು ಕೊಳ್ಳುವುದರಲ್ಲಿ ಸರಿಯಾಗಿ ಎರಡು ಜನ ಇದ್ದರೂ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಸ್ಕ್, ಹ್ಯಾಂಡ್ ಗ್ಲೋಸ್, ಹಾಕಿಕೊಂಡು ವಿಧಿ ಇಲ್ಲದೇ ಇದೇ ತಗಡಿನ ತಟ್ಟಿಯಲ್ಲಿ ಕ್ಷೌರಿಕರು ಕಾರ್ಯನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ.
ಸ್ಥಳೀಯರು ಕೂಡ ಮೊದಲೆಲ್ಲಾ ಇಲ್ಲಿಯೇ ತಲೆಗೂದಲು ಕತ್ತರಿಸಿಕೊಳ್ಳುತ್ತಿದ್ದರು. ಯಾತ್ರಿಗಳು ಮತ್ತು ಸ್ಥಳಿಯರು ಸೇರಿ ಕಾಲಿಡಲೂ ಜಾಗವಿಲ್ಲವಾದ ಕಾರಣ ಬೇರೆ ಕಡೆಗಳಿಗೆ ಹೋಗಿ ಕಟಿಂಗ್ ಮಾಡಿಸಿ ಬರುತ್ತಿದ್ದೇವೆ ಎಂದು ಸ್ಥಳೀಯರು ಹೇಳುತ್ತಾರೆ.
ಹಣಕಾಸಿನ ಕೊರೆತಯಿಂದ ಕಾಮಗಾರಿ ಅಪೂರ್ಣ:
ಈ ಕಾಮಗಾರಿಯನ್ನು ಮೊದಲು ಕುಮಟಾದ ಓರ್ವ ಗುತ್ತಿಗೆದಾರರು ಪಡೆದಿದ್ದರು. ನಂತರ ಇವರು ಮರಣ ಹೊಂದಿದ ಕಾರಣ ಈ ಭಾಗದ ಇನ್ನೊರ್ವವರಿಗೆ ಹಸ್ತಾಂತರ ಮಾಡಲಾಯಿತು. ಆದರೆ ಇವರೂ ಕೂಡ ಕಾಮಗಾರಿ ಮುಗಿಸದೇ ಅರ್ಧದಲ್ಲಿಯೇ ಬಿಟ್ಟು ಹೋಗಿದ್ದಾರೆ. ಈಗ ಮೊತ್ತೊಬ್ಬ ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿದೆ. ಹಣಕಾಸಿನ ಕೊರತೆಯಿಂದ ವಿಳಂಬವಾಯಿತು. ಜನವರಿಯಲ್ಲಿ ಕಾಮಗಾರಿ ಪ್ರಾರಂಭವಾಗಿ ಶೀಘ್ರದಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಗ್ರಾಮ ಪಂಚಾಯತಿ ಪಿಡಿಓ ವಿನಯ್ ಕುಮಾರ್ ಹೇಳಿದ್ದಾರೆ.
-ಜಗದೀಶ್
ಗೋಕರ್ಣ: ಅಸ್ಥಿ ನಿಕ್ಷೇಪಣಾ ಕೆರೆ ಜಾಗ ಒತ್ತುವರಿ ವಿವಾದ ಕೊನೆಗೂ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ
Published On - 12:24 pm, Mon, 14 December 20