‘ದೇವೇಗೌಡರ ಮಾತು ಕೇಳಿ ಕಾಂಗ್ರೆಸ್ ಸಹವಾಸ ಮಾಡಿದ್ದು ತಪ್ಪಾಯ್ತು.. BJP ಯಲ್ಲಿ ಇದ್ದಿದ್ರೆ ಈಗ ನಾನೇ CM ಆಗಿರ್ತಿದ್ದೆ..’

ನಾನು ಒಂದೇ ತಿಂಗಳಲ್ಲಿ ಅಷ್ಟು ಕಣ್ಣೀರು ಹಾಕಲು ಕಾರಣ ಕಾಂಗ್ರೆಸ್. ಇವರು ಮಾಡುತ್ತಿರುವುದೆಲ್ಲ ಗೊತ್ತಾಗಿ ಕಣ್ಣಲ್ಲಿ ನೀರು ಹಾಕಿದ್ದೆ. ಕಾಂಗ್ರೆಸ್ ಜತೆ ಕೈಜೋಡಿಸಿದ ಕಾರಣ ನಮ್ಮ ಶಕ್ತಿ ಕುಂದಿತು.

‘ದೇವೇಗೌಡರ ಮಾತು ಕೇಳಿ ಕಾಂಗ್ರೆಸ್ ಸಹವಾಸ ಮಾಡಿದ್ದು ತಪ್ಪಾಯ್ತು.. BJP ಯಲ್ಲಿ ಇದ್ದಿದ್ರೆ ಈಗ ನಾನೇ CM ಆಗಿರ್ತಿದ್ದೆ..’
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ
Edited By: ಸಾಧು ಶ್ರೀನಾಥ್​

Updated on: Dec 05, 2020 | 4:33 PM

ಮೈಸೂರು: ದೇವೇಗೌಡರ ಎಮೋಶನಲ್​ಗೆ ನಾನು ಟ್ರ್ಯಾಪ್​ ಆದೆ. ಅವರ ಮಾತು ಕೇಳಿ ಕಾಂಗ್ರೆಸ್​ ಜತೆ ಮೈತ್ರಿ ಮಾಡಿಕೊಂಡು ಕಳೆದ 12 ವರ್ಷಗಳಲ್ಲಿ ಸಂಪಾದಿಸಿದ್ದ ಒಳ್ಳೆಯ ಹೆಸರನ್ನು ಹಾಳುಮಾಡಿಕೊಂಡೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ಬಿಜೆಪಿಯವರು ನನಗೆ ಕಾಂಗ್ರೆಸ್ಸಿನವರಂತೆ ದ್ರೋಹ ಮಾಡಿರಲಿಲ್ಲ
ನಗರದಲ್ಲಿ ಮಾತನಾಡಿ, ನಾನು ಬಿಜೆಪಿಯ ಜತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರೆ ರಾಜ್ಯದಲ್ಲಿ ಇಂದು ನಾನೇ ಮುಖ್ಯಮಂತ್ರಿಯಾಗಿ ಇರುತ್ತಿದ್ದೆ. ಆದರೆ ಕಾಂಗ್ರೆಸ್​ಗೆ ಸೇರಿದ ಮೇಲೆ ಸಿದ್ದರಾಮಯ್ಯನವರ ಗುಂಪು ನನ್ನ ಹೆಸರನ್ನು ಸರ್ವನಾಶ ಮಾಡಿಬಿಟ್ಟಿತು.

ಸಿದ್ದರಾಮಯ್ಯನವರು ಎಲ್ಲ  ಪ್ರೀಪ್ಲ್ಯಾನ್ ಮಾಡಿಕೊಂಡು ನನ್ನ ಬಗ್ಗೆ ಅಪಪ್ರಚಾರ ಮಾಡಿದರು​. ನಾನು ಕಾಂಗ್ರೆಸ್​ ಎಂಎಲ್​ಎಗಳಿಗೆ 19 ಸಾವಿರ ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದೆ. ಇವರು ಮಾತ್ರ ನನಗೆ ಸಹಕಾರ ಕೊಡಲಿಲ್ಲ. ಬಿಜೆಪಿಯವರು ನನಗೆ ಈ ಮಟ್ಟಿಗೆ ದ್ರೋಹ ಮಾಡಿರಲಿಲ್ಲ ಎಂದು ಹೇಳಿದರು.

ಕಣ್ಣೀರಿಗೆ ಕಾಂಗ್ರೆಸ್ ಕಾರಣ
ನಾನು ಒಂದೇ ತಿಂಗಳಲ್ಲಿ ಅಷ್ಟು ಕಣ್ಣೀರು ಹಾಕಲು ಕಾರಣ ಕಾಂಗ್ರೆಸ್. ಇವರು ಮಾಡುತ್ತಿರುವುದೆಲ್ಲ ಗೊತ್ತಾಗಿ ಕಣ್ಣಲ್ಲಿ ನೀರು ಹಾಕಿದ್ದೆ. ಕಾಂಗ್ರೆಸ್ ಜತೆ ಕೈಜೋಡಿಸಿದ ಕಾರಣ ನಮ್ಮ ಶಕ್ತಿ ಕುಂದಿತು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರೆ ನಮಗೇನು ಸಿಗತ್ತೆ? ಯಡಿಯೂರಪ್ಪ 6 ತಿಂಗಳು ಸಿಎಂ ಆಗಿದ್ದುಕೊಂಡು ವಾಪಸ್ ಹೋಗುತ್ತಾರೆ. ಆಮೇಲೆ ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಸಿದ್ದರಾಮಯ್ಯ ಕನಸು ಕಂಡಿದ್ದರು. ಅದೇ ಭ್ರಮೆಯಲ್ಲೇ ಇದ್ದಾರೆ.

ಅವರು ಪಕ್ಷಕ್ಕಾಗಿ ಏನೂ ಮಾಡಿದವರು ಅಲ್ಲ. ಸ್ವಾರ್ಥಕ್ಕಾಗಿ ಏನು ಸಿಗತ್ತೆ ಎಂಬುದನ್ನು ನೋಡುತ್ತಾರೆ. ದೇವೇಗೌಡರ ಭಾವನಾತ್ಮಕತೆಯನ್ನು ದುರುಪಯೋಗಪಡಿಸಿಕೊಂಡರು ಎಂದು ಕಿಡಿಕಾರಿದರು. ಹಾಗೇ, ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡುತ್ತಿದ್ದಾರೆ ಎಂಬುದನ್ನು ಆದಷ್ಟು ಬೇಗನೇ ಬಹಿರಂಗಪಡಿಸುತ್ತೇನೆ ಎಂದೂ ಹೇಳಿದರು.

ಇದು ನಮ್ಮ ಕುಟುಂಬಕ್ಕೆ ಇರುವ ಶಾಪ
ರಾಜಕೀಯದಲ್ಲಿ ಅನಾಥರಾದಾಗ ಮರುಜೀವ ಕೊಟ್ಟವರ ಬಗ್ಗೆಯೇ ನಂತರ ಮಾತನಾಡುತ್ತಾರೆ ಎಂದು ಎಚ್​.ವಿಶ್ವನಾಥ್​ಗೆ ಟಾಂಗ್​ ನೀಡಿದ ಕುಮಾರಸ್ವಾಮಿ, ದೇವೇಗೌಡರ ಫೋಟೋ ಇಟ್ಟುಕೊಳ್ತೇನೆ ಎನ್ನುತ್ತಾರೆ. ಆದರೆ ನನ್ನನ್ನೇ ಟೀಕೆ ಮಾಡುತ್ತಾರೆ. ನಮ್ಮ ಕುಟುಂಬಕ್ಕೆ ಒಂದು ಶಾಪ ಇದೆ.. ನಾವು ಯಾರನ್ನು ಬೆಳೆಸುತ್ತೇವೋ ಅವರೇ ನಮ್ಮ ವಿರುದ್ಧ ಮಾತನಾಡುತ್ತಾರೆ. ಈ ಶಾಪ ವಿಮೋಚನೆ ಮಾಡಿಕೊಳ್ಳುವುದು ಹೇಗೆಂದು ಸಂಶೋಧನೆ ಮಾಡಬೇಕು ಎಂದರು.

ಕಾಂಗ್ರೆಸ್ ಸಹವಾಸ ಮಾಡಿದ ಮೇಲೆ ನಮ್ಮ ಪಕ್ಷದ ಶಕ್ತಿ ಕುಂದಿದೆ. ಆದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಸಂಕ್ರಾಂತಿ ಬಳಿಕ ನಮ್ಮ ಪಕ್ಷದ ಪುನಃಶ್ಚೇತನ ಕಾರ್ಯ ಆರಂಭವಾಗಲಿದೆ. ಪಕ್ಷವನ್ನು ಮತ್ತೆ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು.

Lakshmi Hegde
Follow Us