ಮತ್ತೆ ಮೈದುಂಬಿದ ಮದಗದ ಕೆರೆ: ಸೌಂದರ್ಯ ಸವಿಯಲು ಬರುತ್ತಿದೆ ಯುವ ದಂಡು!
ಹಾವೇರಿ: ಮಾಯದಂತಾ ಮಳೆ ಬಂತಣ್ಣ ಮದಗದ ಕೆರೆಗೆ ಎಂಬ ಜಾನಪದ ಹಾಡನ್ನು ಬಹುತೇಕರು ಕೇಳಿಯೇ ಇರುತ್ತಾರೆ. ಹೌದು ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಮದಗಮಾಸೂರು ಕೆರೆಗೆ ಈಗ ಮಾಯದಂತಾ ಮಳೆ ಬಂದಿದೆ. ಶಿವಮೊಗ್ಗ ಭಾಗದಲ್ಲಿ ಸುರಿದ ಮಳೆಗೆ ಮದಗದ ಕೆರೆಗೆ ಭರಪೂರ ನೀರು ಬಂದಿದೆ. ಕೆರೆ ತುಂಬಿ ಹರಿಯುತ್ತಿದೆ. ದಟ್ಟ ಕಾನನದ ನಡುವೆ ಧುಮ್ಮಿಕ್ಕಿ ಹರಿಯುವ ಜಲಧಾರೆ ನೋಡಲು ಎರಡು ಕಣ್ಣುಗಳು ಸಾಲದಂತೆ ರಮ್ಯ ಮನೋಹರ ದೃಶ್ಯ ಸೃಷ್ಟಿಯಾಗಿದೆ. ಮದಗಮಾಸೂರು ಕೆರೆ ನೂರಾರು ಎಕರೆ ವಿಶಾಲವಾದ ಪ್ರದೇಶದಲ್ಲಿ […]

ಹಾವೇರಿ: ಮಾಯದಂತಾ ಮಳೆ ಬಂತಣ್ಣ ಮದಗದ ಕೆರೆಗೆ ಎಂಬ ಜಾನಪದ ಹಾಡನ್ನು ಬಹುತೇಕರು ಕೇಳಿಯೇ ಇರುತ್ತಾರೆ. ಹೌದು ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಮದಗಮಾಸೂರು ಕೆರೆಗೆ ಈಗ ಮಾಯದಂತಾ ಮಳೆ ಬಂದಿದೆ. ಶಿವಮೊಗ್ಗ ಭಾಗದಲ್ಲಿ ಸುರಿದ ಮಳೆಗೆ ಮದಗದ ಕೆರೆಗೆ ಭರಪೂರ ನೀರು ಬಂದಿದೆ. ಕೆರೆ ತುಂಬಿ ಹರಿಯುತ್ತಿದೆ. ದಟ್ಟ ಕಾನನದ ನಡುವೆ ಧುಮ್ಮಿಕ್ಕಿ ಹರಿಯುವ ಜಲಧಾರೆ ನೋಡಲು ಎರಡು ಕಣ್ಣುಗಳು ಸಾಲದಂತೆ ರಮ್ಯ ಮನೋಹರ ದೃಶ್ಯ ಸೃಷ್ಟಿಯಾಗಿದೆ.
ಮದಗಮಾಸೂರು ಕೆರೆ ನೂರಾರು ಎಕರೆ ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದೆ. ಕೆರೆಯ ಸುತ್ತಲು, ನಿಸರ್ಗವೇ ಧರೆಗೆ ಇಳಿದು ಬಂದಂತೆ ಕಾಣುವ ಸುಂದರ ಹಸಿರಿದೆ. ದಟ್ಟ ಕಾನನದ ನಡುವೆ ಕೆರೆಗೆ ಕೋಡಿ ಬಿದ್ದು ಮೇಲಿನಿಂದ ಧುಮ್ಮಿಕ್ಕಿ ಹರಿಯುವ ಹಾಲಿನ ನೊರೆಯಂತಹ ನೀರು ಈ ಭಾಗದಲ್ಲಿ ಮಿನಿ ಜೋಗ್ ಪಾಲ್ಸ್ ಎಂತಲೇ ಖ್ಯಾತಿ ಪಡೆದಿದೆ.
ಮದಗಮಾಸೂರು ಕೆರೆಗೆ ಕೋಡಿ ಬಿದ್ದು ಹರಿತಿರೋ ನೀರು ನೋಡಲು ಯುವಕರ ದಂಡೇ ಕೆರೆಯತ್ತ ಹರಿದು ಬರುತ್ತಿದೆ. ಮದಗಮಾಸೂರು, ಹಿರೇಕೆರೂರು, ರಟ್ಟೀಹಳ್ಳಿ, ಹಾವೇರಿ, ಶಿಕಾರಿಪುರ ಸೇರಿದಂತೆ ವಿವಿಧ ಭಾಗಗಳಿಂದ ಯುವಕರ ದಂಡು ಕೆರೆಯತ್ತ ಆಗಮಿಸುತ್ತಿದೆ.
ಸುಂದರ ಹಸಿರಿನ ನಡುವೆ ಹರಿಯೋ ಜಲ ಧಾರೆ ಕಂಡು ಕಣ್ತುಂಬಿಕೊಂಡು ಹೋಗುತ್ತಿದ್ದಾರೆ. ಕಾರು, ಬೈಕ್ಗಳಲ್ಲಿ ಬರುವ ಯುವಕರು ಹಾಗೂ ಕುಟುಂಬ ಸಮೇತರಾಗಿ ಬರುವ ಜನರು ಈಡೀ ದಿನ ಅಲ್ಲಿದ್ದು ಪ್ರಕೃತಿಯ ಸೌಂದರ್ಯ ಸವಿದು ಹೋಗುತ್ತಿದ್ದಾರೆ.
ಪಿಕ್ನಿಕ್ ಸ್ಪಾಟ್ ಆಯ್ತು ಕೆರೆ
ಮದಗಮಾಸೂರು ಕೆರೆಗೆ ಕೋಡಿ ಬಿದ್ದು ಹರಿಯುತ್ತಿರುವುದನ್ನು ನೋಡಲು ಸಾಕಷ್ಟು ಸಂಖ್ಯೆಯ ಜನರು ಆಗಮಿಸುತ್ತಿದ್ದಾರೆ. ಕೆಲವರಿಗಂತೂ ಸ್ವರ್ಗವೆ ಧರೆಗೆ ಇಳಿದು ಬಂದಷ್ಟು ಖುಷಿ ಆಗುತ್ತಿದೆ.
ಇನ್ನು ಅನೇಕ ಜನರು ಒಂದು ದಿನದ ಪಿಕ್ನಿಕ್ಗೆ ಕೆರೆಗೆ ಬರುತ್ತಿದ್ದಾರೆ. ಕುಟುಂಬ ಸಮೇತರಾಗಿ ಕೆರೆಗೆ ಬಂದು ದಿನವಿಡಿ ಪ್ರಕೃತಿಯ ಮಡಿಲಲ್ಲಿ ಸುತ್ತಾಡಿ, ಬೋರ್ಗರೆದು ಬೀಳುವ ಜಲ ಧಾರೆಯ ಸೌಂದರ್ಯ ಕಣ್ತುಂಬಿಕೊಂಡು ಖುಷಿ ಪಡುತ್ತಾರೆ. ಮನೆಯಲ್ಲಿ ಅಡುಗೆ ತಯಾರಿಸಿಕೊಂಡು ಬಂದು ಕೆರೆಯ ದಂಡೆಯ ಮೇಲೆ ಕುಳಿತು ಊಟ ಮಾಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಕುಮದ್ವತಿಗೂ ಬರುತ್ತಿದೆ ನೀರು ಕೆರೆ ತುಂಬಿ ಕೋಡಿ ಬಿದ್ದು ಹರಿಯುವ ನೀರಿನಿಂದ ಕುಮದ್ವತಿ ನದಿಗೆ ಭಾರಿ ಪ್ರಮಾಣದ ನೀರು ಬರುತ್ತಿದೆ. ಹಿರೇಕೆರೂರು ಮತ್ತು ರಟ್ಟೀಹಳ್ಳಿ ಭಾಗದಲ್ಲಿ ಕುಮದ್ವತಿ ನದಿ ನೀರು ಈಗ ಭರಪೂರ ಹರಿಯುತ್ತಿದೆ. ಕಳೆದೆರಡು ದಿನಗಳಿಂದ ಮಳೆಯ ಪ್ರಮಾಣ ಕೊಂಚ ತಗ್ಗಿದೆ. ಆದರೂ ಕುಮದ್ವತಿ ನದಿಯಲ್ಲಿ ನೀರು ಹರಿಯುತ್ತಿದೆ.
ಮದಗಮಾಸೂರು ಕೆರೆ ಕೋಡಿ ಬಿದ್ದು ಹರಿಯುವ ಭರಪೂರ ನೀರು ಕುಮದ್ವತಿ ನದಿ ಸೇರಿ ರಟ್ಟೀಹಳ್ಳಿ ಮತ್ತು ಹಿರೇಕೆರೂರು ಭಾಗದಲ್ಲಿ ಹರಿಯುತ್ತದೆ. ಒಟ್ಟಿನಲ್ಲಿ ಮಾಯದಂತಾ ಮಳೆ ಬಂದು ಮದಗದ ಕೆರೆ ತುಂಬಿ ಕೋಡಿ ಬಿದ್ದು ಹರಿಯುತ್ತಿದೆ. ಕೆರೆಯ ಸುತ್ತಲಿನ ನಿಸರ್ಗ ನಿರ್ಮಿತ ಪ್ರಕೃತಿ ಸೌಂದರ್ಯ ಹಾಗೂ ಭೋರ್ಗರೆದು ಹರಿಯುವ ನೀರು ನೋಡಲು ಎರಡು ಕಣ್ಣುಗಳು ಸಾಲದಂತಹ ಸೌಂದರ್ಯ ಅಲ್ಲಿ ನಿರ್ಮಾಣವಾಗಿದೆ. -ಪ್ರಭುಗೌಡ ಎನ್. ಪಾಟೀಲ