World Cancer Day 2021 ‘ಕ್ಯಾನ್ಸರ್ ಬಂದಾಕ್ಷಣ ಹೆದರಬೇಡ್ರಿ’- ಖ್ಯಾತ ಕ್ಯಾನ್ಸರ್​ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ

ಕ್ಯಾನ್ಸರ್​ ರೋಗಿಗಳಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೊದಲು ಆತ್ಮವಿಶ್ವಾಸ ಮೂಡಿಸಬೇಕು ಎನ್ನುತ್ತಾರೆ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರು ಆಗಿದ್ದ ಖ್ಯಾತ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ.

World Cancer Day 2021 ‘ಕ್ಯಾನ್ಸರ್ ಬಂದಾಕ್ಷಣ ಹೆದರಬೇಡ್ರಿ'- ಖ್ಯಾತ ಕ್ಯಾನ್ಸರ್​ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ
ಡಾ. ವಿಜಯಲಕ್ಷ್ಮೀ ದೇಶಮಾನೆ
Lakshmi Hegde

| Edited By: Arun Belly

Feb 04, 2021 | 10:44 PM

ಕ್ಯಾನ್ಸರ್ ಎಂದ ತಕ್ಷಣ ಹೆದರಬೇಕಿಲ್ಲ. ಇದೊಂದು ನಿಯಂತ್ರಿಸಬಹುದಾದ ಕಾಯಿಲೆ.. ನಿಭಾಯಿಸಬಲ್ಲ ರೋಗ, ಹಾಗೇ ಕೆಲವು ಕ್ಯಾನ್ಸರ್​ಗಳನ್ನು ಗುಣಪಡಿಸಲೂ ಸಾಧ್ಯ ಎನ್ನುತ್ತಾರೆ ಖ್ಯಾತ ಕ್ಯಾನ್ಸರ್ ತಜ್ಞ ವೈದ್ಯೆ ಡಾ. ವಿಜಯಲಕ್ಷ್ಮೀ ದೇಶಮಾನೆ. ಕಲಬುರಗಿಯ ಅತ್ಯಂತ ಬಡಕುಟುಂಬದಿಂದ ಬಂದ ವಿಜಯಲಕ್ಷ್ಮೀ ದೇಶಮಾನೆ ಖ್ಯಾತಿ ಉತ್ತುಂಗದಲ್ಲಿದ್ದರೂ ತೀರ ಸರಳವಾಗಿ ಬದುಕುತ್ತಿರುವವರು. ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ನಿರ್ದೇಶಕರಾಗಿ, ಸರ್ಜನ್ ಆಗಿದ್ದರು. 30 ವರ್ಷ ಅಲ್ಲಿ ಸೇವೆ ಸಲ್ಲಿಸಿ ಸದ್ಯ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಅದೆಷ್ಟೋ ಕ್ಯಾನ್ಸರ್ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿ, ಚಿಕಿತ್ಸೆ ನೀಡಿದ್ದಾರೆ. ರೋಗಿಗಳು ನಮಗೆ ದೇವರಿದ್ದಂತೆ ಎನ್ನುವ ಡಾ. ವಿಜಯಲಕ್ಷ್ಮೀ 65ರ ವಯಸ್ಸಿನಲ್ಲಿಯೂ ತುಂಬ ಚಟುವಟಿಕೆಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶ್ವ ಕ್ಯಾನ್ಸರ್ ದಿನ (World Cancer Day 2021) ಹಿನ್ನೆಲೆಯಲ್ಲಿ Tv9 ಕನ್ನಡ ಡಿಜಿಟಲ್ ಜೊತೆಗೆ ಅವರು ಹಲವು ಅಪರೂಪದ ಮಾಹಿತಿ ಹಂಚಿಕೊಂಡರು. ಅವರ ಮಾತುಗಳ ಅಕ್ಷರರೂಪ ಇಲ್ಲಿದೆ.

ಕ್ಯಾನ್ಸರ್​ ಬಂದಾಕ್ಷಣ ಸಾವೇ ಬರುತ್ತದೆ ಎಂದು ಹೇಳಬಾರದು. ಸುಮ್ಮನೆ ರೋಗಿಗಳನ್ನು ಹೆದರಿಸುವ ಕೆಲಸ ಮಾಡಬಾರದು. ಇದೂ ಕೂಡ ಎಲ್ಲ ರೋಗಗಳಂತೆ. ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿ, ಚಿಕಿತ್ಸೆ ನೀಡಿದರೆ ಖಂಡಿತ ಗುಣವಾಗುತ್ತದೆ. ಕ್ಯಾನ್ಸರ್​ ಲಕ್ಷಣಗಳ ಬಗ್ಗೆ ಸಾಮಾನ್ಯವಾಗಿ ಈಗಿನವರಿಗೆ ಒಂದು ಅರಿವು ಇದ್ದೇ ಇರುತ್ತದೆ. ಆ ಲಕ್ಷಣಗಳು ಕಂಡುಬಂದರೆ, ಅನುಮಾನ ಬಂದರೆ ಕೂಡಲೇ ಪರೀಕ್ಷೆಗೆ ಒಳಗಾಗಬೇಕು. ಒಂದೊಮ್ಮೆ ಕ್ಯಾನ್ಸರ್ ಇದೆ ಎಂದು ಗೊತ್ತಾದರೆ ತಜ್ಞ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು. ಸದ್ಯ ನನ್ನ ದೇಹದ ಆರೋಗ್ಯದ ಪರಿಸ್ಥಿತಿ ಹೇಗಿದೆ? ಏನೆಲ್ಲ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂಬುದನ್ನು ಶಾಂತವಾಗಿ ಕೇಳಬೇಕು. ಹಾಗಂತ ಮನೆಯಲ್ಲಿ ಅಮ್ಮಂಗೋ, ಚಿಕ್ಕಮ್ಮಂಗೋ ಕ್ಯಾನ್ಸರ್​ ಬಂದಾಕ್ಷಣ ನಮಗೂ ಬಂದೇಬರುತ್ತದೆ ಎಂಬ ಭಯವೂ ಬೇಡ. ಕ್ಯಾನ್ಸರ್​ ಬಗ್ಗೆ ಕೇಳಿದ್ದನ್ನೆಲ್ಲ ನಂಬಲೂ ಬಾರದು.

ಕ್ಯಾನ್ಸರ್​ ಎಂದರೆ ಅದರಲ್ಲಿ ಒಂದೇ ವಿಧವಲ್ಲ. ಅದರಲ್ಲೂ ಹಲವು ರೀತಿಗಳಿರುತ್ತವೆ. ಈ ಗಡ್ಡೆಯಾಗಿ ಉಂಟಾಗುವ ಕ್ಯಾನ್ಸರ್ ಅಂದರೆ ಸಾಲಿಡ್​ ಟ್ಯೂಮರ್ (solid tumors) ಬೇರೆ, ಲ್ಯುಕೋಮಿಯಾ ಮತ್ತಿತರ ವರ್ಗದ ಬ್ಲಡ್​ ಕ್ಯಾನ್ಸರ್​ ಬೇರೆ. ಅದರಲ್ಲಿ ಸ್ಯಾಲಿಡ್ ಟ್ಯೂಮರ್​ ವರ್ಗಕ್ಕೆ ಸೇರುವ ಕ್ಯಾನ್ಸರ್​ಗಳು ಯುವಜನರಲ್ಲಿ ಅಂದರೆ 30 ವರ್ಷದ ಒಳಗೆ ಮತ್ತು ಆಸುಪಾಸು ಇದ್ದವರಿಗೆ ಜಾಸ್ತಿ ಅಪಾಯವನ್ನುಂಟು ಮಾಡುತ್ತವೆ. ಇವರಲ್ಲಿ ಗಡ್ಡೆಯ ಬೆಳವಣಿಗೆ ವೇಗವಾಗಿರುತ್ತದೆ.

ಇನ್ನು ಸ್ತನ ಕ್ಯಾನ್ಸರ್​ ಇತ್ತೀಚೆಗೆ ಹೆಣ್ಣುಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ತೀರ ಸಾಮಾನ್ಯವಾದ ಕ್ಯಾನ್ಸರ್. ಇಲ್ಲೂ ಅಷ್ಟೇ ಯುವತಿಯರಲ್ಲಿ, 40 ವರ್ಷ ಒಳಗಿನವರಲ್ಲಿ ಕಂಡುಬಂದಲ್ಲಿ ಕ್ಯಾನ್ಸರ್​ ಬೆಳವಣಿಗೆ ವೇಗ ಹೆಚ್ಚಿರುತ್ತದೆ. ಆದರೆ ಯುವತಿಯರಲ್ಲಿ ಸ್ತನ ಕ್ಯಾನ್ಸರ್​ ಬರೋದು ತೀರ ವಿರಳ. ಇದು ಬರೋದು 45-55 ವರ್ಷದವರೆಗಿನ ವಯಸ್ಸಿನವರಿಗೆ ಹೆಚ್ಚು. ಮುಟ್ಟುನಿಲ್ಲುವ ಕಾಲದಲ್ಲಿ ಹಾರ್ಮೋನುಗಳಲ್ಲಿ ಏರುಪೇರಾಗುವುದೇ ಇದಕ್ಕೆ ಕಾರಣ. ಇನ್ನು 65-75 ವಯಸ್ಸಿನವರಲ್ಲಿ ಸ್ತನ ಅಥವಾ ಇನ್ಯಾವುದೇ ಸಾಲಿಡ್​ ಟ್ಯೂಮರ್​ ಕ್ಯಾನ್ಸರ್ ಕಂಡುಬಂದರೂ ಬೆಳವಣಿಗೆ ವೇಗ ತುಂಬಾ ಕಡಿಮೆ ಇರುತ್ತದೆ. ಅದು ಬಿಟ್ಟರೆ ಹೆಣ್ಣುಮಕ್ಕಳಲ್ಲಿ ಸಾಮಾನ್ಯವಾಗಿ ಗರ್ಭಕೋಶ, ಗರ್ಭಕಂಠ, ಅಂಡಾಶಯ, ಥೈರಾಡ್ ಕ್ಯಾನ್ಸರ್​ಗಳು ಕಂಡುಬರುತ್ತವೆ. ಇವನ್ನೆಲ್ಲ ಬಹುತೇಕ ಗುಣಪಡಿಸಬಹುದು. ಇನ್ನು ಗುದನಾಳದ ಕ್ಯಾನ್ಸರ್​ ತುಂಬ ಅಪರೂಪ ಮತ್ತು ಅಷ್ಟುಬೇಗ ಪತ್ತೆ ಹಚ್ಚಲೂ ಆಗುವುದಿಲ್ಲ.

ರಕ್ತಸ್ರಾವ ಆಗುತ್ತಿದ್ದರೆ ಕೂಡಲೇ ತಪಾಸಣೆ ಮಾಡಿಸಿಕೊಳ್ಳಿ ಕ್ಯಾನ್ಸರ್​ ತನ್ನ ರೂಪವನ್ನು ಒಂದೇ ತರ ಯಾವಾಗಲೂ ತೋರಿಸುವುದಿಲ್ಲ. ಕೆಲವು ಸಾಮಾನ್ಯ ಲಕ್ಷಣ ಇರುತ್ತದೆ. ಅದರಲ್ಲಿ ಪ್ರಮುಖವಾಗಿ ದೇಹದ ಯಾವುದಾದರೂ ಅಂಗದಲ್ಲಿ ಸತತವಾಗಿ ರಕ್ತಸ್ರಾವ ಆಗುತ್ತಿದ್ದರೆ ಒಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಇನ್ನೊಂದು ಮುಖ್ಯವಾದ ವಿಷಯವೆಂದರೆ, ದೇಹದ ಯಾವುದೇ ಭಾಗದಲ್ಲಿ ಇರುವ ಮಚ್ಚೆ ಚರ್ಮಕ್ಕಿಂತ ಮೇಲೆಳುತ್ತಿದ್ದರೆ, ಅದರ ಗಾತ್ರ ದೊಡ್ಡದಾಗುತ್ತಿದ್ದರೆ ಮತ್ತು ತುರಿಕೆ, ಉರಿ ಕಾಣಿಸುತ್ತಿದ್ದರೆ ತಡಮಾಡದೆ ಪರೀಕ್ಷೆಗೆ ಒಳಪಡಬೇಕು. ಹಾಗಾಗಿ ಮುಖದ ಮೇಲೆ, ಹಣೆಯ ಮೇಲೆ ಅಥವಾ ಇನ್ಯಾವುದೇ ಭಾಗದಲ್ಲಿ ನಿಮಗೆ ಈ ಬದಲಾವಣೆ ಕಂಡುಬಂದರೆ ಒಮ್ಮೆ ಟೆಸ್ಟ್ ಮಾಡಿಸಿಕೊಂಡುಬಿಡಿ.

ಹಾಗೇ, ದೇಹದ ಯಾವುದೇ ಭಾಗದಲ್ಲಿ ಗಡ್ಡೆಗಳು ಉಂಟಾಗಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಅವು ಕೈಗೆ ಸಿಗುವಷ್ಟು ಗಾತ್ರದಲ್ಲಿ ಇರುತ್ತವೆ. ಅವುಗಳ ಬೆಳವಣಿಗೆಯೂ ನಿಮ್ಮ ಗಮನಕ್ಕೆ ಬರುತ್ತಿರುತ್ತದೆ. ಹಾಗಿದ್ದಾಗ ಒಮ್ಮೆ ಟೆಸ್ಟ್​ಗೆ ಒಳಗಾಗಬೇಕು. ಬಯಾಪ್ಸಿ ಮೂಲಕ ತಪಾಸಣೆ ಮಾಡಿದಾಗ ರೋಗ ಪತ್ತೆ ಹಚ್ಚಬಹುದಾಗಿದೆ. ಹಾಗಂತ ಎಲ್ಲ ಗಡ್ಡೆಗಳೂ ಕ್ಯಾನ್ಸರ್ ಆಗಿರುವುದೂ ಇಲ್ಲ. ಉದಾಹರಣೆಗೆ 15-25 ವರ್ಷದವರೆಗಿನ ಯುವತಿಯರಲ್ಲಿ ಸ್ತನದಲ್ಲಿ ಗಡ್ಡೆ ಕಂಡುಬರುತ್ತದೆ. ಅದು ಕ್ಯಾನ್ಸರ್​ ಗಡ್ಡೆಯಾಗಿರುವುದು ತೀರ ವಿರಳ. ಅವರಿಗೆ ಒಂದು ಸಣ್ಣ ಸರ್ಜರಿ ಮೂಲಕ ಅದನ್ನು ಹೊರತೆಗೆದರೆ ಸಾಕಾಗುತ್ತದೆ. ಹಾಗಾಗಿ ಗಡ್ಡೆ ಆದ ತಕ್ಷಣ ಕ್ಯಾನ್ಸರ್​ ಎಂದೇ ತೀರ್ಮಾನಕ್ಕೆ ಬರಬಾರದು. ಆದರೆ 40 ವರ್ಷ ಮೇಲ್ಪಟ್ಟವರು ಮಾತ್ರ ತಮ್ಮ ಸ್ತನ, ಅದರ ಸುತ್ತಮುತ್ತ ಒಂದು ಚಿಕ್ಕ ಗಂಟು, ಗಡ್ಡೆ ಕಂಡುಬಂದರೂ ಪರೀಕ್ಷೆಗೆ ಒಳಪಡಬೇಕು.

ಮೊದಲಿನಂತಿಲ್ಲ ಈಗ.. ಹೆದರುವುದೂ ಬೇಡ 40 ವರ್ಷದ ಹಿಂದೆ ಇದ್ದ ಪರಿಸ್ಥಿತಿ ಈಗಿಲ್ಲ. ಆಗ ಸ್ತನ ಕ್ಯಾನ್ಸರ್ ಸೇರಿ ಯಾವುದೇ ಕ್ಯಾನ್ಸರ್​ ಇದ್ದರೂ ಉಳಿಸುವುದು ಕಷ್ಟವೇ ಆಗಿತ್ತು. ಅದರಲ್ಲೂ ನಾಲ್ಕನೇ ಹಂತ ಎಂದರೆಲ್ಲ ಆ ರೋಗಿ ಉಳಿಯುವುದಿಲ್ಲ ಎಂಬುದು ವಾಸ್ತವವೂ ಆಗಿತ್ತು. ಸಾಮಾನ್ಯ ಜನರಿಗೆ ಬಿಡಿ, ಸ್ವತಃ ವೈದ್ಯರಿಗೂ ಕ್ಯಾನ್ಸರ್ ಬಗ್ಗೆ ಅಷ್ಟೊಂದು ಅರಿವು ಇರಲಿಲ್ಲ. ತಮಗೇ ಸ್ವತಃ ಕ್ಯಾನ್ಸರ್​ ಬಂದರೂ ಅದನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಆದರೆ ಈಗ ಹಾಗಿಲ್ಲ. ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಆಧುನಿಕ ಚಿಕಿತ್ಸೆಯೂ ಬಂದಿದೆ. ಕಿಮೊಥೆರಪಿಯಲ್ಲೂ ಸಹ 10 ವರ್ಷಗಳ ಹಿಂದೆ ಇದ್ದಷ್ಟು ಅಡ್ಡಪರಿಣಾಮ ಈಗ ಕಾಣಿಸಿಕೊಳ್ಳುತ್ತಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ಜನರಲ್ಲಿ ಕ್ಯಾನ್ಸರ್​ ಬಗ್ಗೆ ಅರಿವು ಮೂಡಿದೆ. ತಮ್ಮ ಆರೋಗ್ಯದಲ್ಲಾಗುವ ಚಿಕ್ಕ ಬದಲಾವಣೆಗೂ ವೈದ್ಯರ ಬಳಿ ಬರುತ್ತಾರೆ. ಹೀಗಾಗಿ ಕ್ಯಾನ್ಸರ್​ಗೆ ತುತ್ತಾದರೂ ಉಳಿಯುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಿದೆ. ಇನ್ನು ಚಿಕಿತ್ಸೆಯ ವಿಚಾರಕ್ಕೆ ಬಂದರೆ ಬಡವರಿಗೆ ಕಷ್ಟ.

ಅಂಥ ಜನರಿಗಾಗಿಯೇ ಪ್ರಧಾನಿ ಮೋದಿಯವರು ಆಯುಷ್ಮಾನ್ ಭಾರತ್​ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಅದನ್ನೆಲ್ಲ ಸದುಪಯೋಗಪಡಿಸಿಕೊಳ್ಳಬೇಕು. ಚಿಕಿತ್ಸೆಗೆ ಹಣ ಇಲ್ಲ ಎಂಬ ವಿಚಾರಕ್ಕೆಲ್ಲ ಕುಗ್ಗಬಾರದು. ಹಿಂದಿನ ಕಾಲದಲ್ಲಿ ಒಂದು ಸ್ತನ ಕ್ಯಾನ್ಸರ್​ ಚಿಕಿತ್ಸೆಗೆ 10 ಸಾವಿರ ರೂ. ಖರ್ಚಾಗುತ್ತಿತ್ತು. ಅದೇ ದೊಡ್ಡ ಮೊತ್ತವಾಗಿತ್ತು. ಕ್ಯಾನ್ಸರ್ ರೋಗಕ್ಕೆಂದೇ ಪ್ರತ್ಯೇಕ ಚಿಕಿತ್ಸೆ ನೀಡುವ ವೈದ್ಯರ ಸಂಖ್ಯೆ ಕಡಿಮೆ ಇತ್ತು. ಇದ್ದರೂ ಅವರಲ್ಲೂ ಅರಿವು ಕಡಿಮೆ ಇತ್ತು. ಬರಬರುತ್ತ ಅಧ್ಯಯನ ಹೆಚ್ಚಾಯ್ತು. ನಾವು ಜಾಸ್ತಿ ಓದಿಕೊಂಡೆವು. ಈಗಂತೂ ಎಲ್ಲದರಲ್ಲೂ ಸುಧಾರಣೆಯಾಗಿದೆ. ಹಾಗಾಗಿ ಹೆದರುವ ಬದಲು, ಧೈರ್ಯದಿಂದ ಮುಂದೇನು ಮಾಡಬೇಕು ಎಂದು ಯೋಚಿಸಬೇಕು.

ಕ್ಯಾನ್ಸರ್ ನಮ್ಮ ದೇಶದ್ದಲ್ಲ ಕ್ಯಾನ್ಸರ್ ಒಂದು ವೆಸ್ಟರ್ನ್​ ರೋಗ. ಅವರ ಲೈಫ್​ಸ್ಟೈಲ್​, ಆಹಾರಕ್ಕೆ ತಳುಕು ಹಾಕಿಕೊಂಡಿರುವ ಕಾಯಿಲೆ. ಈಗ ಭಾರತದಲ್ಲೂ ಪಾಶ್ಚಿಮಾತ್ಯ ಸಂಸ್ಕೃತಿ ಹೆಚ್ಚಾಗಿದೆ. ಹೀಗಾಗಿ ಕ್ಯಾನ್ಸರ್​ ಪ್ರಮಾಣವೂ ಹೆಚ್ಚುತ್ತಿದೆ. ಸೂರ್ಯನ ಶಾಖ ಅತ್ಯಂತ ಹೆಚ್ಚಾಗಿರುವ ರಾಷ್ಟ್ರಗಳಲ್ಲಿ ಕ್ಯಾನ್ಸರ್​ ಪ್ರಮಾಣ ಹೆಚ್ಚು. ಹಾಗೇ ಅವರು ನಾರಿನಂಶವುಳ್ಳ ಆಹಾರ ಸೇವಿಸುವುದಿಲ್ಲ. ಸದಾ ಬರ್ಗರ್​, ಫಿಜ್ಜಾ, ಸ್ಯಾಂಡ್​ವಿಚ್​ಗಳನ್ನೇ ತಿನ್ನುತ್ತಾರೆ. ಇದೆಲ್ಲ ಕಾರಣದಿಂದ ಕ್ಯಾನ್ಸರ್​ ಹೊರದೇಶದವರಲ್ಲಿ ಜಾಸ್ತಿ. ಆದರೆ ಭಾರತದಲ್ಲೂ ಆತಂಕಕಾರಿಯಾಗಿ ಕ್ಯಾನ್ಸರ್ ಹೆಚ್ಚುತ್ತಿದೆ. ಇದನ್ನು ತಡೆಯಬೇಕು ಎಂದರೆ ನಾವು ಸಾಧ್ಯವಾದಷ್ಟು ನಮ್ಮ ದೇಶದ ಆಹಾರ ಪದ್ಧತಿಯನ್ನೇ ಅಳವಡಿಸಿಕೊಳ್ಳಬೇಕು.

ಕ್ಯಾನ್ಸರ್ ಬಂದ ಮೇಲೆ ಚಿಕಿತ್ಸೆಯ ಹೊರತು ಬೇರೆ ಮಾರ್ಗವಿಲ್ಲ. ಬಾರದಂತೆ ತಡೆಯಲು ನಮ್ಮ ಊಟದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ತುಂಬ ಮುಖ್ಯ. ಅತಿಯಾದ ಕೊಬ್ಬಿನ ಅಂಶ ಇರುವ ಆಹಾರಗಳಿಂದ ದೂರ ಇದ್ದು, ಹಸಿರು ತರಕಾರಿ, ಬಾಳೆಹಣ್ಣು, ಕಿತ್ತಳೆಹಣ್ಣು, ಸೇಬು, ಮಾವಿನಹಣ್ಣು, ಕ್ಯಾರೆಟ್, ಟೊಮ್ಯಾಟೋಗಳನ್ನು ನಮ್ಮ ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳುವ ಮೂಲಕ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಕ್ಯಾನ್ಸರ್​ ಬಗ್ಗೆ ಅಧ್ಯಯನ ನಡೆಸಿದ ಜಪಾನ್ ತಜ್ಞರೊಬ್ಬರೂ ಇದನ್ನೇ ಶಿಫಾರಸ್ಸು ಮಾಡುತ್ತಾರೆ.

ಕ್ಯಾನ್ಸರ್​ ರೋಗ ಬರಲು ಬಾಹ್ಯ ವಿಷಯಗಳು ಎಷ್ಟು ಕಾರಣವಾಗುತ್ತವೆಯೋ, ನಮ್ಮೊಳಗಿನ ವಿಪರೀತ ಒತ್ತಡ, ಟೆನ್ಷನ್​ಗಳೂ ಅಷ್ಟೇ ಕಾರಣವಾಗುತ್ತವೆ. ಇನ್ನು ಆನುವಂಶಿಕವಾಗಿ ಬರುವ ಸಾಧ್ಯತೆಯಿದ್ದರೂ, ಅದು ವಿರಳ. ಅಮ್ಮನಿಗೋ, ಅಜ್ಜಿಗೋ ಇದೆ ಎಂದಾಕ್ಷಣ ನಮಗೂ ಬಂದೇಬರುತ್ತದೆ ಎಂಬುದು ಸುಳ್ಳು. ವಾಯುಮಾಲಿನ್ಯವೂ ಕ್ಯಾನ್ಸರ್​ಗೆ ಮುಖ್ಯಕಾರಣ. ಅದರಲ್ಲೂ ಕಬ್ಬಿಣದ ಫ್ಯಾಕ್ಟರಿ, ರಬ್ಬರ್​ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರಿಗೆ ಶ್ವಾಸಕೋಶದ ಕ್ಯಾನ್ಸರ್​ನ ಅಪಾಯ ಹೆಚ್ಚಿರುತ್ತದೆ. ಇರೋದ್ರಲ್ಲೇ ಶ್ವಾಸಕೋಶದ ಕ್ಯಾನ್ಸರ್ ತುಂಬ ಮಾರಣಾಂತಿಕ ಮತ್ತು ಅತ್ಯಂತ ವೇಗವಾಗಿ ಪ್ರಸರಣವಾಗುವ ಕ್ಯಾನ್ಸರ್.

ಮತ್ತೊಮ್ಮೆ ಬರಲೂಬಹುದು ಒಂದು ಬಾರಿ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾದ ಮೇಲೆ ಅದು ಮತ್ತೊಮ್ಮೆ ಅಟ್ಯಾಕ್​ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ಎರಡು ವರ್ಷದವರೆಗೆ ಮತ್ತೆ ಬರದೆ ಇದ್ದರೆ, ಅದು ಇನ್ನೊಂದು ಸಲ ಬರುವುದಿಲ್ಲ ಎಂದು ಅಧ್ಯಯನದ ಪ್ರಕಾರ ನಾವು ಹೇಳುತ್ತೇವೆ. ಆದರೆ ಯುವಜನರಲ್ಲಿ ಇದನ್ನು ಊಹಿಸುವುದು ಕಷ್ಟ. ಹಾಗಾಗಿ ಒಮ್ಮೆ ಗುಣಮುಖರಾದರೂ ಆಗಾಗ ಚೆಕಪ್​ಗೆ ಒಳಗಾಗುತ್ತ ಇರಬೇಕು.

ರೋಗಿಗಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಕ್ಯಾನ್ಸರ್​ ರೋಗಿಗಳಲ್ಲಿ ಮೊದಲನೆಯದಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಆತ್ಮವಿಶ್ವಾಸ ಮೂಡಿಸಬೇಕು. ಯಾರೇ ಆದರೂ ಸರಿ,  ತಮಗೆ ಈ ರೋಗ ಇದೆ ಎಂದಾಕ್ಷಣ ಭೂಮಿಗೇ ಇಳಿದುಹೋಗಿರುತ್ತಾರೆ. ನಾನು ಕಿದ್ವಾಯಿಯಲ್ಲಿದ್ದಾಗ ನನ್ನ ರೋಗಿಗಳೊಂದಿಗೆ ಆತ್ಮೀಯತೆಯಿಂದ ಮಾತನಾಡುತ್ತಿದ್ದೆ. ರೋಗದ ಬಗ್ಗೆ ಸರಿಯಾಗಿ ಅರಿವು ಮೂಡಿಸುತ್ತಿದ್ದೆ. ಅವರ ಮಾತುಗಳನ್ನು ಸಮಧಾನವಾಗಿ ಕೇಳಿಸಿಕೊಳ್ಳುತ್ತಿದ್ದೆ. ಚಿಕಿತ್ಸೆಗೆ ಅವರನ್ನು ಸಿದ್ಧಪಡಿಸುತ್ತಿದ್ದೆ.

ಈಗೀಗೆಲ್ಲ ಕೌನ್ಸೆಲಿಂಗ್ ಮಾಡೋಕೆ ಅಂತೆಲ್ಲ ಕೆಲವರು ಬರುತ್ತಾರೆ. ಆದರೆ ಒಬ್ಬ ತಜ್ಞಳಾಗಿ ನಾನು ರೋಗಿಗಳಿಗೆ ಸಮಾಧಾನ, ಸಾಂತ್ವನ ಮಾಡೋಕೂ, ಕೌನ್ಸೆಲಿಂಗ್​ನವರು ಮಾಡೋದಕ್ಕೂ ವ್ಯತ್ಯಾಸವಿದೆ. ಎಲ್ಲರೂ ಇದನ್ನು ಮಾಡಲಿ ಎಂಬುದು ನನ್ನ ಆಶಯ. ಕ್ಯಾನ್ಸರ್​ ಎಂಬುದು ಹೆದರುವ ರೋಗವಲ್ಲ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಇನ್ನು ಕೆಲವು ಕ್ಯಾನ್ಸರ್​ಗಳು ಜೀವ ತೆಗೆಯುತ್ತವೆ. ಆಯಸ್ಸು ಮುಗಿದಾಗ ಹೋಗಲು ಒಂದು ನೆಪ ಬೇಕಲ್ಲ. ಆ ನೆಪ ಕ್ಯಾನ್ಸರ್ ಆಗಿರುತ್ತದೆ ಅಷ್ಟೇ.

World Cancer Day 2021 ‘ಸಾವಿನ ಭಯ ಬಿಟ್ಟು ನಗುತ್ತಾ ಜೀವಿಸಿ..’: ಕ್ಯಾನ್ಸರ್​ ಗೆದ್ದ ಭಾರತಿಯವರ ಜೀವನ ಪ್ರೀತಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada