AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಯಾಗಿದ್ದ ಸ್ನೇಹಿತರಿಗೆ ಮುಳುವಾಯ್ತು ಅಪಘಾತ.. ಅಗಲಿದ ಗೆಳೆಯನ ನೆನೆದು ಶ್ವಾನದ ಕಣ್ಣೀರು

ಅವರಿಬ್ರೂ ಪಕ್ಕಾ ದೋಸ್ತಿಗಳು.. ಏರಿಯಾದಲ್ಲಿ ಒಟ್ಟೊಟ್ಟಿಗೆ ಓಡಾಡಿಕೊಂಡು ಆರಾಮಾಗಿಯೇ ಇದ್ದವರು. ಆದ್ರೆ ಅದ್ಯಾರ ಕಣ್ಣು ಬಿತ್ತೋ ಏನೋ.. ಒಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟ.. ಆದ್ರೆ ಬದುಕುಳಿದವನ ಸ್ಥಿತಿ ಮಾತ್ರ ಅಯೋಮಯ. ಜೀವದ ಗೆಳೆಯನನ್ನ ಕಳೆದುಕೊಂಡು ವಿಲವಿಲ ಅಂತ ಒದ್ದಾಡ್ತಿದ್ದಾನೆ.

ಹಾಯಾಗಿದ್ದ ಸ್ನೇಹಿತರಿಗೆ ಮುಳುವಾಯ್ತು ಅಪಘಾತ.. ಅಗಲಿದ ಗೆಳೆಯನ ನೆನೆದು ಶ್ವಾನದ ಕಣ್ಣೀರು
ಅಗಲಿದ ಗೆಳೆಯನ ನೆನೆದು ಶ್ವಾನದ ಕಣ್ಣೀರು
ಆಯೇಷಾ ಬಾನು
|

Updated on:Dec 27, 2020 | 8:37 AM

Share

ಮಡಿಕೇರಿ: ಜಿಲ್ಲೆಯಲ್ಲಿ ಎಂಥವ್ರಿಗೂ ಕರುಳು ಚುರುಕ್ ಅನ್ನವಂತಹ ಕರುಣಾಜನಕ ಘಟನೆಯೊಂದು ನಡೆದಿದೆ. ಅಗಲಿದ ಗೆಳೆಯನ ಮೇಲೆ ಬಿದ್ದು ಪುಟ್ಟ ನಾಯಿ ಮರಿ ಒದ್ದಾಡ್ತಿದೆ. ನಾಯಿ ಮರಿಗೆ ಬಿಸ್ಕೆಟ್‌ ಕೊಟ್ರೂ ತಿನ್ನುತ್ತಿಲ್ಲ.. ಮೃತ ಗೆಳೆಯನ ಬಿಟ್ಟು ಕದಲದೆ ಅಲ್ಲಿಯೇ ಠಿಕಾಣಿ ಹೂಡಿದೆ.

ಇಂಥಾದ್ದೊಂದು ದೃಶ್ಯ ಕಂಡು ಬಂದಿದ್ದು ಮಡಿಕೇರಿಯ ವಾರ್ತಾ ಇಲಾಖೆಯ ಮುಂಭಾಗದಲ್ಲಿ. ಅಂದ್ಹಾಗೆ ಎರಡು ಪುಟ್ಟ ನಾಯಿ ಮರಿಗಳು ಇದೇ ರಸ್ತೆಯಲ್ಲಿ ಓಡಾಡಿಕೊಂಡಿದ್ವು. ಮುದ್ದು ಮುದ್ದಾಗಿ ಏರಿಯಾದಲ್ಲಿ ಓಡಾಡಿಕೊಂಡಿದ್ದ ಪುಟ್ಟ ಶ್ವಾನದ ಮರಿಗಳನ್ನ ಕಂಡು ಈ ಏರಿಯಾದಲ್ಲಿದ್ದ ಜನ್ರು ಕೂಡ ಬಿಸ್ಕೆಟ್‌.. ಬನ್‌ ಕೊಟ್ಟು ಖುಷಿ ಪಡ್ತಿದ್ರು. ಆದ್ರೆ ಅದೇನಾಯ್ತೋ ಏನೋ ರಸ್ತೆ ಅಪಘಾತದಲ್ಲಿ ಒಂದು ನಾಯಿ ಮೃತಪಟ್ಟಿದೆ.

ಸ್ನೇಹಿತನಿಗಾಗಿ ಶ್ವಾನದ ಮೂಕ ರೋದನೆ ಇನ್ನು ಗೆಳೆಯನ ಅಗಲಿಕೆಯಿಂದ ಮತ್ತೊಂದು ನಾಯಿ ಮರಿಗೆ ದಿಕ್ಕೇ ತೋಚದಂತಾಗಿದೆ. ಮನುಷ್ಯರಾದ ನಾವು ತಮ್ಮ ನೋವನ್ನ ಎಲ್ಲರ ಬಳಿ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ತೀವಿ. ಆದ್ರೆ ಮಾತು ಬಾರದ ಶ್ವಾನ, ತನ್ನ ಅಂತರಂಗದ ನೋವನ್ನ ಯಾರಿಗೆ ತಾನೇ ಹೇಳೋಕೆ ಸಾಧ್ಯ. ಬೆಳಗ್ಗೆಯಿಂದ ಸಂಜೆವರೆಗೂ ಮೃತ ನಾಯಿ ಮರಿಯನ್ನ ಬಿಟ್ಟು ಅಗಲಲೇ ಇಲ್ಲ. ಅದೇ ರಸ್ತೆಯಲ್ಲಿ ಅಡ್ಡಾಡುತ್ತಾ.. ಮೃತ ಸ್ನೇಹಿತನ ಜೊತೆಯಲ್ಲೇ ತಾನು ಆಟವಾಡ್ತಿದ್ದ ಘಳಿಗೆ ನೆನೆದು ಭಾವುಕನಾಗಿ ಅಲ್ಲಿಯೇ ಇದ್ದಾನೆ. ಇನ್ನು ಬೇಜವಾಬ್ದಾರಿಯಾಗಿ ವಾಹನ ಚಲಾಯಿಸಿದವನ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕ್ತಿದ್ದಾರೆ.

ಒಟ್ನಲ್ಲಿ ಅಗಲಿದ ಗೆಳೆಯನ ನೆನೆದು ತನ್ನ ನೋವು ತಡೆಯಲಾರದೆ ಅಸಹಾಯಕ ಸ್ಥಿತಿಗೆ ಈ ಶ್ವಾನ ತಲುಪಿದೆ. ಮುಂದೇನು ಮಾಡೋದು ಅಂತ ಏನೂ ಅರಿಯದ ಪುಟ್ಟ ನಾಯಿ ಮರಿ, ಗೆಳೆಯನ ಬಳಿಯೇ ಸುಳಿದಾಡುತ್ತಾ ಮರುಗುತ್ತಿದೆ.

ಎದ್ದೇಳು ಕಂದ.. ಅಪಘಾತದಲ್ಲಿ ಸಾವಿಗೀಡಾದ ಮರಿಯನ್ನು ಎಬ್ಬಿಸೋಕೆ ಮುಂದಾದ ತಾಯಿ ಶ್ವಾನ

Published On - 8:36 am, Sun, 27 December 20