ನಿಂತ ಮಳೆ, ಹೆಚ್ಚಿದ ಚಾರ್ಮಾಡಿ ವೈಭೋಗ: ಕಣ್ಮನ ತಣಿಸುತ್ತಿವೆ ಸಣ್ಣ ಸಣ್ಣ ಜಲಪಾತಗಳು
ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸ್ವಲ್ಪ ರಜೆ ಸಿಕ್ಕಿದ್ರೆ ಸಾಕು ಕೆಲಸಕ್ಕೆ ಬೈ ಹೇಳಿ, ರೌಂಡ್ ಹೊಡ್ಕೊಂಡ್ ಬರೋಣ ಅಂತಾ ಫೇವರಿಟ್ ಸ್ಪಾಟ್ಗಳಿಗೆ ಜನ ರೈಟ್ ಹೇಳ್ತಾರೆ. ಆ ರೀತಿಯ ಒಂದು ಸ್ಥಳವೇ ಚಾರ್ಮಾಡಿ ಘಾಟ್. ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯಲ್ಲಿ ಈಗ ನಿಸರ್ಗ ಮಾತೆಯ ನೈಜ ಸೊಬಗು ಅನಾವರಣಗೊಂಡಿದೆ. ಕಾಫಿನಾಡು ಚಿಕ್ಕಮಗಳೂರಿನ ನಿಸರ್ಗ ಸಂಪತ್ತು, ಸೌಂದರ್ಯ ಕಣ್ಮುಂದೆ ಬಂದು ನಿಲ್ಲುತ್ತದೆ. ಬೆಟ್ಟ-ಗುಡ್ಡಗಳ ಸಾಲು. ಬಾನಿಗೆ ಮುತ್ತಿಕ್ಕೋ ಮಂಜಿನ ರಾಶಿ. ಎಡೆಬಿಡದೆ ಸುರಿಯೋ ಮಳೆಗೆ ಹಸಿರ ಬೆಟ್ಟಗಳ ಸಾಲಿನಿಂದ […]

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸ್ವಲ್ಪ ರಜೆ ಸಿಕ್ಕಿದ್ರೆ ಸಾಕು ಕೆಲಸಕ್ಕೆ ಬೈ ಹೇಳಿ, ರೌಂಡ್ ಹೊಡ್ಕೊಂಡ್ ಬರೋಣ ಅಂತಾ ಫೇವರಿಟ್ ಸ್ಪಾಟ್ಗಳಿಗೆ ಜನ ರೈಟ್ ಹೇಳ್ತಾರೆ. ಆ ರೀತಿಯ ಒಂದು ಸ್ಥಳವೇ ಚಾರ್ಮಾಡಿ ಘಾಟ್. ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯಲ್ಲಿ ಈಗ ನಿಸರ್ಗ ಮಾತೆಯ ನೈಜ ಸೊಬಗು ಅನಾವರಣಗೊಂಡಿದೆ.
ಕಾಫಿನಾಡು ಚಿಕ್ಕಮಗಳೂರಿನ ನಿಸರ್ಗ ಸಂಪತ್ತು, ಸೌಂದರ್ಯ ಕಣ್ಮುಂದೆ ಬಂದು ನಿಲ್ಲುತ್ತದೆ. ಬೆಟ್ಟ-ಗುಡ್ಡಗಳ ಸಾಲು. ಬಾನಿಗೆ ಮುತ್ತಿಕ್ಕೋ ಮಂಜಿನ ರಾಶಿ. ಎಡೆಬಿಡದೆ ಸುರಿಯೋ ಮಳೆಗೆ ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕಿ ಹರಿಯೋ ಜಲಧಾರೆ. ಚಾರ್ಮಾಡಿ ಘಾಟಿಯ ಸೊಬಗು ಇಮ್ಮಡಿಗೊಳಿಸಿದೆ. ಅಂದಹಾಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ಚಾರ್ಮಾಡಿಯ ಸೌಂದರ್ಯವನ್ನ ವರ್ಣಿಸಲು ಪದಗಳೇ ಸಾಲದು.
ಮಳೆರಾಯ ಬ್ರೇಕ್ ಕೊಟ್ಟಿದ್ರೂ ನದಿಗಳು ಜೀವ ಕಳೆ ತುಂಬಿಕೊಂಡಿವೆ. ಬಂಡೆಗಳ ಮೇಲಿನಿಂದ ಜುಳು-ಜುಳು ನಿನಾದಗೈಯುತ್ತಾ ಧುಮ್ಮಿಕ್ಕೋ ಜಲಧಾರೆಗಳು ಕ್ಷೀರಧಾರೆಯಂತೆ ಭಾಸವಾಗುತ್ತೆ. ನಿರಂತರ ಮಳೆಯ ಆಗಮನಕ್ಕೆ ಬೆಟ್ಟಗಳ ಸಾಲು ಹಸಿರೊದ್ದು ಝೇಂಕರಿಸುತ್ತಿದ್ರೆ, ಮಂಜಿನ ಕಣ್ಣಾಮುಚ್ಚಾಲೆ ಆಟ ಪ್ರವಾಸಿಗರ ಪಾಲಿನ ಸ್ವರ್ಗವಾಗಿ ಮಾರ್ಪಟ್ಟಿದೆ.
ಕಳೆದ ಎರಡು ತಿಂಗಳ ಸತತ ಮಳೆಯಿಂದ ಚಾರ್ಮಾಡಿ ಘಾಟ್ ರಸ್ತೆಯುದ್ದಕ್ಕೂ ಹತ್ತಾರು ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸೋ ಪ್ರವಾಸಿಗರು ಚಾರ್ಮಾಡಿ ಒಡಲಿನಿಂದ ಹಾಲ್ನೊರೆಯಂತೆ ಸೂಸೋ ಫಾಲ್ಸ್ಗಳನ್ನ ಕಣ್ತುಂಬಿಸಿಕೊಂಡು ಖುಷಿ ಪಡ್ತಿದ್ದಾರೆ. ನವರಾತ್ರಿ ರಜೆಯಲ್ಲಿ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಚಾರ್ಮಾಡಿ ಘಾಟ್ ಕಡೆ ಮುಖ ಮಾಡಿರೋ ಪ್ರವಾಸಿಗರು ಎಂಜಾಯ್ ಮಾಡ್ತಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ್ದ ವ್ಯಾಪಾರಸ್ಥರಿಗೂ ರಿಲೀಫ್
ಕೊಟ್ಟಿಗೆಹಾರದಲ್ಲಿ ಭಾರಿ ಮಳೆಯಿಂದ ವ್ಯಾಪಾರವಿಲ್ಲದೇ ಕಳೆದ 2 ತಿಂಗಳು ಕಂಗಲಾಗಿದ್ದ ವರ್ತಕರು, ಈಗ ಪ್ರವಾಸಿಗರ ಆಗಮನದಿಂದ ಸ್ವಲ್ಪ ಚೇತರಿಸಿಕೊಳ್ತಿದ್ದಾರೆ. ಮೆಲ್ಲಗೆ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗ್ತಿದ್ದು, ವ್ಯಾಪಾರಸ್ಥರು ನಿಟ್ಟುಸಿರು ಬಿಡುವ ಜೊತೆಗೆ ಒಂದಷ್ಟು ಲಾಭ ಸಿಗ್ತಿದೆ.
ದಟ್ಟವಾದ ಮಂಜು, ಚುಮು ಚುಮು ಚಳಿ, ಮಿಸ್ಸಾಗದೇ ಬರೋ ಜಿನಿ ಜಿನಿ ಮಳೆಯ ಮಧ್ಯೆ ಚಾರ್ಮಾಡಿಯ ಪಯಣ ಎಂಥವರಿಗೂ ರೋಮಾಂಚನ ತರಿಸುತ್ತೆ. ಒಟ್ಟಾರೆ ಚಾರ್ಮಾಡಿ ಚಾರಣಿಗರ ಸ್ವರ್ಗ. ಹಸಿರು ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕೋ ಜಲಧಾರೆ ಕವಲು.
ಪ್ರಕೃತಿ ಮಾತೆ, ನಿಸರ್ಗ ಚೆಲುವು. ಬಿಸಿಲು ಮಳೆಯ ಲೀಲೆಗಳನ್ನ ಕಣ್ತುಂಬಿಕೊಳ್ಳಲು ನೀವು ಮಲೆನಾಡಿಗೆ ಬರಬೇಕು. ಬೆಟ್ಟದ ತುಂಬೆಲ್ಲಾ ಆವರಿಸಿರೋ ಮಂಜಿನ ರಾಶಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಮಳೆಗಾಲ, ಚಳಿಗಾಲ, ಬೇಸಿಗೆಕಾಲದಲ್ಲಿ ಬಂದ್ರೂ ಚಾರ್ಮಾಡಿ ಪಯಣ ಬೋರ್ ತರಿಸೋದೇ ಇಲ್ಲ -ಪ್ರಶಾಂತ್




