ಜಾಗತಿಕ ಮಟ್ಟದಲ್ಲಿ ಶ್ರೀಮಂತರು ಎನಿಸಿಕೊಂಡ ಶೇಕಡಾ 1ರಷ್ಟು ಜನರಲ್ಲಿ ನೀವೂ ಒಬ್ಬರಾಗಿ ಇರಬೇಕು ಅಂದರೆ ಎಷ್ಟು ಹಣ ಇರಬೇಕು ಗೊತ್ತಾ? “ಹೌದು, ಆ ಪಟ್ಟಿಯಲ್ಲಿ ನಾನೂ ಇರಬೇಕು,” ಅಂತ ನಿಮಗೆ ಅನಿಸುವ ಮುಂಚೆ ಈ ವರದಿ ಓದಿಬಿಡಿ. ಏಕೆಂದರೆ, ಆ ಒಂದು ಪರ್ಸೆಂಟ್ ಜನಸಂಖ್ಯೆಯಲ್ಲಿ ಒಬ್ಬರಾಗೋದು ಸಲೀಸಲ್ಲ. ಮೊನಾಕೋ ದೇಶದಲ್ಲಿ ಇದ್ದವರಿಗೆ ಅತಿ ಶ್ರೀಮಂತರು ಅನಿಸಿಕೊಳ್ಳುವುದಕ್ಕೆ ಆಸ್ತಿ ಪ್ರಮಾಣ ಎಷ್ಟಿರಬೇಕು ಗೊತ್ತಾ? 80 ಲಕ್ಷ ಅಮೆರಿಕನ್ ಡಾಲರ್. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ 58.40 ಕೋಟಿ ರೂಪಾಯಿಗೂ ಹೆಚ್ಚಾಗುತ್ತದೆ. ಮೊನಾಕೋದಲ್ಲಿ ಜನ ತೆರಿಗೆಯನ್ನೇ ಕಟ್ಟೋದಿಲ್ಲ. -ಈ ಸಂಗತಿಯನ್ನು ಬಯಲು ಮಾಡಿರುವುದು Knight Frank. 24ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಂಶೋಧನೆ ನಡೆಸಿದ ನಂತರ ಈ ವಿಚಾರ ತಿಳಿಸಲಾಗಿದೆ.
ಮೊನಾಕೋ ನಂತರದ ಸ್ಥಾನ ಸ್ವಿಟ್ಜರ್ಲೆಂಡ್ ಹಾಗೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ್ದು. ಸ್ವಿಟ್ಜರ್ಲೆಂಡ್ನಲ್ಲಿ ಅತ್ಯಂತ ಸಿರಿವಂತ ಎನಿಸಿಕೊಳ್ಳಲು 51 ಲಕ್ಷ ಅಮೆರಿಕನ್ ಡಾಲರ್ ಹಾಗೂ ಯುಎಸ್ಎನಲ್ಲಿ 44 ಲಕ್ಷ ಯುಎಸ್ಡಿ ಆಸ್ತಿ ಇರಬೇಕು. ಇದು 2021ರ ಆಸ್ತಿ ದಲ್ಲಾಳಿಗಳ ಸಂಪತ್ತಿನ ವರದಿ. ಸಿಂಗಾಪುರದಲ್ಲಿ 29 ಲಕ್ಷ ಅಮೆರಿಕನ್ ಡಾಲರ್ ಇದ್ದಲ್ಲಿ ಅತ್ಯಂತ ಸಿರಿವಂತರ ಪಟ್ಟಿಯೊಳಗೆ ಜಿಗಿದಂತೆ ಆಗುತ್ತದೆ.
‘ಮೇಲ್ಮಟ್ಟದಲ್ಲಿ ತೆರಿಗೆ ನೀತಿಗಳು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು’ ಎನ್ನುತ್ತಾರೆ ನೈಟ್ ಫ್ರಾಂಕ್ ಗ್ಲೋಬಲ್ ಹೆಡ್ ರೀಸರ್ಚ್ ಲಯಾಮ್ ಬೈಲಿ. ಕೊರೊನಾ ಬಂದ ನಂತರ ಜಾಗತಿಕ ಮಟ್ಟದಲ್ಲಿ ಶ್ರೀಮಂತರನ್ನು ಅಳೆಯುವ ಅಳತೆಗೋಲಿನ ಅಂತರವೇ ತಾರುಮಾರಾಗಿದೆ. ಪಟ್ಟಿಯಲ್ಲಿ ಪ್ರವೇಶ ಪಡೆಯುವುದಕ್ಕೆ ಮೊನಾಕೋ ದೇಶದ ಶ್ರೀಮಂತರಿಗೆ ಇರುವ ಎಂಟ್ರಿ ಪಾಯಿಂಟ್ ಕೀನ್ಯಾ ದೇಶದಲ್ಲಿ ಇರುವವರಿಗಿಂತ ನಾನೂರು ಪಟ್ಟು ಹೆಚ್ಚಾಗಿದೆ. ನೈಟ್ ಫ್ರಾಂಕ್ ಅಧ್ಯಯನ ನಡೆಸಿದ ಮೂವತ್ತು ಸ್ಥಳಗಳ ಪೈಕಿ ಅತ್ಯಂತ ಕೆಳ ಮಟ್ಟದಲ್ಲಿ ಇರೋದು ಕೀನ್ಯಾ.
20 ಲಕ್ಷ ಜನ ಬಡತನಕ್ಕೆ ಸಿಲುಕಿಕೊಂಡಿದ್ದಾರೆ:
ನಿಮಗೆ ಗೊತ್ತಿರಲಿ, ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ನಂತರ ಆಫ್ರಿಕನ್ ದೇಶದಲ್ಲಿ 20 ಲಕ್ಷ ಜನ ಬಡತನಕ್ಕೆ ಸಿಲುಕಿಕೊಂಡಿದ್ದಾರೆ. ಇದು ವಿಶ್ವ ಬ್ಯಾಂಕ್ ಅಂದಾಜು ಮಾಡಿರುವ ಸಂಖ್ಯೆ. ಇದೊಂದು ಕಡೆಯಾಯಿತು; ವಿಶ್ವದ ಅತ್ಯಂತ ಸಿರಿವಂತ 500 ಜನರ ಆಸ್ತಿ ಮೌಲ್ಯ 1.8 ಲಕ್ಷ ಕೋಟಿ ಅಮೆರಿಕನ್ ಡಾಲರ್ ಜಾಸ್ತಿ ಆಗಿದೆ. ಭಾರತದ ರೂಪಾಯಿ ಲೆಕ್ಕದಲ್ಲೇ ಹೇಳಬೇಕೆಂದರೆ, 126 ಲಕ್ಷ ಕೋಟಿಗೂ ಹೆಚ್ಚು. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಯು.ಎಸ್. ಮೂಲದ ತಂತ್ರಜ್ಞಾನ ಕಂಪೆನಿಗಳ ಉದ್ಯಮಿಗಳಾದ ಎಲಾನ್ ಮಸ್ಕ್ ಹಾಗೂ ಜೆಫ್ ಬೆಜೋಸ್ ಸಂಪಾದನೆ ಮಾಡಿದ್ದೇ ಹೆಚ್ಚು.
ವರದಿಯ ಪ್ರಕಾರ, ಚೀನಾ ಮತ್ತು ಹಾಂಕಾಂಗ್ನಂಥ ಏಷ್ಯಾ ಪೆಸಿಫಿಕ್ ಭಾಗದಲ್ಲಿ ಸಂಪತ್ತು ಹೆಚ್ಚಾಗಿದ್ದರೂ ಅತಿ ಸಿರಿವಂತರ ಪಟ್ಟಿಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಮುಂಚೂಣಿಯಲ್ಲಿದೆ. ಏಷ್ಯಾ ಪೆಸಿಫಿಕ್ ಭಾಗದ ಅತಿ ಸಿರಿವಂತರ ಒಟ್ಟು ಆಸ್ತಿ ಮೌಲ್ಯ ಈಗ 2.7 ಲಕ್ಷ ಕೋಟಿ ಅಮೆರಿಕನ್ ಡಾಲರ್ ಇದೆ. 2016ರ ಕೊನೆಗೆ ಇದ್ದುದಕ್ಕಿಂತ ಮೂರು ಪಟ್ಟಿಗೂ ಹೆಚ್ಚು ಸಂಪತ್ತಿದು. ನೈಟ್ ಫ್ರಾಂಕ್ ಅಧ್ಯಯನವೇ ತಿಳಿಸುವ ಹಾಗೆ 2020ರಿಂದ 2025ರ ಮಧ್ಯೆ ಜಾಗತಿಕ ಲೆಕ್ಕಾಚಾರವನ್ನೂ ಮೀರಲಿದ್ದಾರಂತೆ ಏಷ್ಯಾ ಪೆಸಿಫಿಕ್ ಭಾಗದ ಶ್ರೀಮಂತರು. 3 ಕೋಟಿ ಅಮೆರಿಕನ್ ಡಾಲರ್ಗೂ ಹೆಚ್ಚಿನ ಸಂಪತ್ತು ಇರುವವರ ಸಂಖ್ಯೆ 33 ಪರ್ಸೆಂಟ್ ಹೆಚ್ಚಾಗುತ್ತದೆ. ಅದರಲ್ಲಿ ಭಾರತ ಮತ್ತು ಇಂಡೋನೇಷ್ಯಾದವರ ಸಂಖ್ಯೆ ಹೆಚ್ಚಿರುತ್ತದೆ.
ಶ್ರೀಮಂತರ ಗಳಿಕೆ ಹೆಚ್ಚು; ಸರ್ಕಾರದ ಆದಾಯ ಇಳಿಕೆ
ಸಿಂಗಾಪುರದಲ್ಲೂ ಶ್ರೀಮಂತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಕಠಿಣವಾದ ಖಾಸಗಿ ನಿಯಮಗಳನ್ನು ರೂಪಿಸುವ ಮೂಲಕ ಸಿಂಗಾಪುರ ಜಾಗತಿಕ ಮಟ್ಟದ ಅತ್ಯಂತ ಸಿರಿವಂತರನ್ನು ತನ್ನತ್ತ ಸೆಳೆಯುತ್ತಿದೆ. ಗೂಗಲ್ ಸಹಸಂಸ್ಥಾಪಕ ಸೆರೆಗಿ ಬ್ರಿನ್ ಅವರು ಇಲ್ಲಿ ಕಚೇರಿ ಆರಂಭಿಸುತ್ತಿದ್ದಾರೆ. ಇನ್ನು ಬ್ರಿಟಿಷ್ ಶತಕೋಟ್ಯಧಿಪತಿ ಜೇಮ್ಸ್ ಡೈಸನ್ ಈಗಾಗಲೇ ತಮ್ಮ ಕುಟುಂಬ ಹೂಡಿಕೆ ಸಂಸ್ಥೆಯನ್ನು ಇಲ್ಲಿಗೆ ವರ್ಗಾವಣೆ ಮಾಡಿದ್ದಾರೆ.
ಯಾವಾಗ ಶ್ರೀಮಂತರ ಗಳಿಕೆ ಹೆಚ್ಚಾಗಿ, ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಸರ್ಕಾರಗಳ ಆದಾಯ ಇಳಿಕೆ ಆಯಿತೋ ಕೆಲವು ದೇಶಗಳು ಸಂಪತ್ತಿನ ಮೇಲೆ ತೆರಿಗೆ (Wealth tax) ವಿಧಿಸಲು ಮುಂದಾಗಿವೆ. ಯು.ಎಸ್.ನಲ್ಲಿ ನ್ಯೂಯಾರ್ಕ್ ಸೇರಿದಂತೆ ರಾಜ್ಯ ಮಟ್ಟದಲ್ಲಿ ಹೆಚ್ಚಿನ ಆದಾಯಕ್ಕೆ ತೆರಿಗೆ ಹಾಕುವುದಕ್ಕೆ ಕೆಲವು ಡೆಮಾಕ್ರಟ್ಗಳು ಪ್ರಯತ್ನ ಆರಂಭಿಸಿದ್ದಾರೆ. ಇತ್ತ ಹಾಂಕಾಂಗ್ನಲ್ಲಿ ಸ್ಟಾಕ ವಹಿವಾಟಿನ ಮೇಲೆ ನೋಂದಣಿ ಶುಲ್ಕವನ್ನು ಹೆಚ್ಚಿಸಲಾಗಿದೆ. 1993ರ ನಂತರ ಇದೇ ಮೊದಲ ಬಾರಿಗೆ ದರ ಏರಿಸಿದೆ. ಕಳೆದ ವರ್ಷದಿಂದ ಈಚೆಗೆ ಆರ್ಥಿಕತೆ ಕುಸಿಯುತ್ತಾ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ನೈಟ್ ಫ್ರಾಂಕ್ ನಿಂದ ಸಿರಿವಂತ ವ್ಯಕ್ತಿಗಳ ಸಲಹೆಗಾರರ ಸಮೀಕ್ಷೆ ಕೂಡ ಮಾಡಲಾಗಿದೆ. ಅವರ ಪೈಕಿ ಶೇಕಡಾ ಎಪ್ಪತ್ತೈದಕ್ಕೂ ಹೆಚ್ಚು ಮಂದಿ ತಮ್ಮ ಗ್ರಾಹಕರ ತೆರಿಗೆ ಪಾವತಿ ಬಗ್ಗೆಯೇ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Elon Musk: ಎಲಾನ್ ಮಸ್ಕ್ 1.14 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಒಂದೇ ಟ್ವೀಟ್ಗೆ ಖಲಾಸ್