Hyundai Alcazar: ಹುಂಡೈನಿಂದ 7 ಸೀಟರ್ನ ಎಸ್ಯುವಿ ಅಲ್ಕಜರ್ ಶೀಘ್ರದಲ್ಲೇ ರಸ್ತೆಗೆ
ಭಾರತದಲ್ಲಿ ಹುಂಡೈ ಕ್ರೆಟಾ 5 ಸೀಟರ್ ಎಸ್ಯುವಿ ಯಶಸ್ವಿಯಾದ ಮೇಲೆ 2021ರ ಮಧ್ಯಭಾಗದಲ್ಲಿ 7 ಸೀಟರ್ ಎಸ್ಯುವಿ ಬಿಡುಗಡೆ ಮಾಡಲಿದೆ ಎಂಬ ಮಾತಿತ್ತು. ಇದೀಗ Hyundai Alcazar ಟೆಸ್ಟ್ ಡ್ರೈವ್ ವೇಳೆ ಹಲವು ಸಲ ಕಾಣಿಸಿಕೊಂಡಿದೆ.
ಹುಂಡೈ ಕಂಪೆನಿಯಿಂದ ಭಾರತದಲ್ಲಿ ಬಿಡುಗಡೆ ಆಗಲಿರುವ ಹೊಸ ಎಸ್ಯುವಿ ಬಗ್ಗೆ ಅತಿ ಮುಖ್ಯವಾದ ಮಾಹಿತಿಗಳನ್ನು ನಿಮ್ಮೆದುರು ಹಂಚಿಕೊಳ್ಳಬೇಕಿದೆ. ಹುಂಡೈ ಕಂಪೆನಿ ಹೊರತರಲಿರುವ ಆ ಕಾರಿನ ಹೆಸರು ಅಲ್ಕಜರ್ (Alcazar). ಮುಂದಿನ ತಿಂಗಳು, ಅಂದರೆ ಏಪ್ರಿಲ್ನಲ್ಲಿ ಭಾರತದಲ್ಲಿ ಬಿಡುಗಡೆ ಆಗಲಿದೆ. ಆದರೆ ಇಂಥದ್ದೇ ದಿನಾಂಕ ಅನ್ನೋದು ಅಂತಿಮವಾಗಿಲ್ಲ. ಆದರೆ ಈ ಹಿಂದೆ ಆಗಿದ್ದ ಸುದ್ದಿಯನ್ನು ಆಧರಿಸಿ ಹೇಳೋದಾದರೆ, 2021ರ ಮಧ್ಯಭಾಗದಲ್ಲಿ 7 ಸೀಟಿನ ಕ್ರೆಟಾ ಕಾರು ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆ ಯೋಜನೆಯೇ ಈಗಿನ ಎಸ್ಯುವಿ ಎಂದು ಅಂದುಕೊಳ್ಳಲಾಗುತ್ತಿದೆ.
ಟಾಟಾ ಸಫಾರಿ, ಮಹೀಂದ್ರಾ XUV5OO, MG ಹೆಕ್ಟರ್ ಪ್ಲಸ್ ಮತ್ತಿತರ ಕಾರುಗಳ ಜತೆಗೆ ಸ್ಪರ್ಧೆ ನಡೆಸಲಿದೆ ಅಲ್ಕಜರ್. 2021ರ ಅಲ್ಕಜರ್ ಈಗಾಗಲೇ ಟೆಸ್ಟ್ ರೈಡ್ ವೇಳೆ ದೇಶದ ರಸ್ತೆಗಳ ಮೇಲೆ ಹಲವು ಸಲ ಕಾಣಿಸಿಕೊಂಡಿದೆ. ಆದ್ದರಿಂದಲೇ ಭಾರತದಲ್ಲಿ ಎಸ್ಯುವಿ ಮಾರಾಟ ಶುರುವಾಗುವುದು ಹಾಗೂ ಪೂರ್ಣ ಪ್ರಮಾಣದಲ್ಲಿ ರಸ್ತೆಗಿಳಿಯುವ ದಿನಗಳು ದೂರವಿಲ್ಲ. ಹುಂಡೈ ಅಲ್ಕಜರ್ ಎಸ್ಯುವಿ ಬಗ್ಗೆ ಈ ತನಕ ಗೊತ್ತಾಗಿರುವ ಮಾಹಿತಿಗಳ ಬಗ್ಗೆ ನೀವೊಂದಿಷ್ಟು ತಿಳಿದುಕೊಂಡುಬಿಡಿ.
ಹುಂಡೈ ಕ್ರೆಟಾದ ಡಿಸೈನ್ನಿಂದಲೇ ಆಧಾರ ಪಟ್ಟಿದ್ದರೂ ಅಲ್ಕಜರ್ ಹೊರ ವಿನ್ಯಾಸದಲ್ಲಿ ಬದಲಾವಣೆಗಳಿರುತ್ತವೆ. ಹುಂಡೈನ ಈ ಎರಡು ಎಸ್ಯುವಿಗಳ ಮಧ್ಯೆ ವ್ಯತ್ಯಾಸ ಗೊತ್ತಾಗಬೇಕು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ಮುಂದಿನ ಬಂಪರ್ನಲ್ಲಿ ಬದಲಾವಣೆ, ಗ್ರಿಲ್ ಪುನರ್ರಚನೆ ಹಾಗೂ ಅಲಾಯ್ ವ್ಹೀಲ್ ಮತ್ತು ಇನ್ನೂ ಕೆಲವು ಮಾರ್ಪಾಟುಗಳನ್ನು ಮಾಡಲಾಗಿದೆ. ಇನ್ನು ಭಾರತದಲ್ಲಿ ಇರುವ ರೂಢಿಯಂತೆ ಮೂರು ಸಾಲಿನ ಸೀಟು ವ್ಯವಸ್ಥೆ ಇದ್ದು, ಅಲ್ಕಜರ್ನಿಂದ ಎರಡು ಸೀಟಿನ ವ್ಯವಸ್ಥೆ ಮಾಡಿಕೊಳ್ಳುವ ವ್ಯವಸ್ಥೆ ಇರುವ ಸಾಧ್ಯತೆ ಹೆಚ್ಚಿದೆ.
ಕ್ಯಾಪ್ಟನ್ ಸೀಟ್ ಹಾಗೂ ಆರ್ಮ್ ರೆಸ್ಟ್ ಏಳು ಸೀಟಿನ ಎಸ್ಯುವಿಯಲ್ಲಿ ಎರಡನೇ ಸಾಲಿನಲ್ಲಿ ಬೆಂಚ್ ಸೀಟ್ ಬರುತ್ತದೆ. ಇನ್ನು ಆರು ಸೀಟಿನ ಮಾಡೆಲ್ನಲ್ಲಿ ವೈಯಕ್ತಿಕ ಕ್ಯಾಪ್ಟನ್ ಸೀಟ್ಗಳು ಬರುತ್ತವೆ. ಅಲ್ಲಿಲ್ಲಿ ತೆಗೆದುಕೊಂಡಿರುವ ಗುಟ್ಟಾದ ಫೋಟೋಗಳಲ್ಲಿ ಕಂಡುಬಂದಿರುವುದು ಆರು ಸೀಟಿನ ಮಾಡೆಲ್. ಇದರಲ್ಲಿ ಡ್ಯುಯಲ್ ಟೋನ್ ಕಾರಿನ ಒಳವಿನ್ಯಾಸದ ಬಣ್ಣ, ಆರ್ಮ್ರೆಸ್ಟ್ ಜತೆಗೆ ಕಪ್ ಹೋಲ್ಡರ್ಗಳಿವೆ. ಸ್ಮಾರ್ಟ್ಫೋನ್ಗಳ ಚಾರ್ಜಿಂಗ್ ಮತ್ತಷ್ಟು ಅನುಕೂಲಗಳಿವೆ.
ಹುಂಡೈ ಕ್ರೆಟಾದಲ್ಲಿ ಇದ್ದಂತೆಯೇ ಅಲ್ಕಜರ್ನಲ್ಲೂ 1.4 ಲೀಟರ್ GDI ಟರ್ಬೋಚಾರ್ಜ್ಡ್ ಪೆಟ್ರೋಲ್, 1.5 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಇದೆ. ಇನ್ನು ಟ್ರಾನ್ಸ್ಮಿಷನ್ ವಿಚಾರಕ್ಕೆ ಬಂದರೆ ಐದು ಸೀಟರ್ ಕ್ರೆಟಾದಲ್ಲಿ ಏನು ಬರುತ್ತದೋ ಏಳು ಸೀಟರ್ ಎಸ್ಯುವಿಗೂ ಬರುತ್ತದೆ.
ಇದನ್ನೂ ಓದಿ: Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ ಖರೀದಿಸಲಿರುವ ಐಷಾರಾಮಿ ಕಾರು ಯಾವುದು ಗೊತ್ತಾ?