ಇಂದಿರಾನಗರದ ಬಾರ್​ಗಳಲ್ಲಿ ನಿಯಮ ಮೀರಿ ಗಟ್ಟಿಯಾದ ಮ್ಯೂಸಿಕ್, ನಿವಾಸಿಗಳ ದೂರಿಗೆ ಪೊಲಿಸ್ ದಿವ್ಯ ನಿರ್ಲಕ್ಷ್ಯ!

ಇಂದಿರಾನಗರ ನಿವಾಸಿಗಳು ಬಾರ್​ಗಳ ಮಾಲೀಕರೊಂದಿಗೆ ಮಾತಾಡಿ ತಮಗಾಗುತ್ತಿರುವ ತೊಂದರೆಯನ್ನು ಹೇಳಿಕೊಂಡಿದ್ದರು. ಆದರೆ, ಮಾತುಕತೆ ಯಾವುದೇ ಫಲಿತಾಂಶ ನಿಡದೇ ಹೋದಾಗ ಸ್ಲೈ ಗ್ರ್ಯಾನಿ, ನೆವರ್​ಮೈಂಡ್ ಮತ್ತು ಒನ್ ಫಾರ್ ದಿ ರೋಡ್ ಹೆಸರಿನ ಮೂರು ಬಾರ್​ಗಳ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.

ಇಂದಿರಾನಗರದ ಬಾರ್​ಗಳಲ್ಲಿ ನಿಯಮ ಮೀರಿ ಗಟ್ಟಿಯಾದ ಮ್ಯೂಸಿಕ್, ನಿವಾಸಿಗಳ ದೂರಿಗೆ ಪೊಲಿಸ್ ದಿವ್ಯ ನಿರ್ಲಕ್ಷ್ಯ!
ಬಾರ್​ ಮತ್ತು ರೆಸ್ಟೋರೆಂಟ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Feb 27, 2021 | 11:10 PM

ಬೆಂಗಳೂರು: ಇಂದಿರಾನಗರದ ನಿವಾಸಿಗಳು ತಮ್ಮ ಪ್ರದೇಶದಲ್ಲಿ ನಿಯಮಗಳನ್ನು ನಿರ್ಭೀತಿಯಿಂದ ಉಲ್ಲಂಘಿಸುತ್ತಿರುವ ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಬಾರ್​ಗಳ ವಿರುದ್ಧ ದೂರನ್ನು ದಾಖಲಿಸಿ ಅವುಗಳ ವಿರುದ್ಧ ಕೂಡಲೇ ಕ್ರಮ ಜರುಗಿಸುವಂತೆ ಹೇಳಿದ್ದಾರೆ. ಹಾಗೆಯೇ, ಬೆಂಗಳೂರಿನ ಪೊಲೀಸ್ ಕಮೀಷನರ್​ ಅವರಿಗೆ ಪತ್ರವೊಂದನ್ನು ಬರೆದು ತಮ್ಮ ದೂರನ್ನು ಅಪರಾಧದ ಮೊದಲ ಮಾಹಿತಿ (ಎಫ್ ಐ ಆರ್) ಅಂತ ಪರಿಗಣಿಸಲು ಕೋರಿದ್ದಾರೆ. ಏತನ್ಮಧ್ಯೆ, ಕೋರ್ಟಿಗೆ ಅಫಿಡವಿಟೊಂದನ್ನು ಸಲ್ಲಿಸಿರುವ ಪೊಲೀಸ್ ಕಮೀಷನರ್ ಪ್ರವೀಣ್ ಸೂದ್ ನಿಯಮಗಳನ್ನು ಉಲ್ಲಂಘಿಸುವ ಬಾರ್ ಮತ್ತು ರೆಸ್ಟೋರೆಂಟ್​ಗಳ ಮಾಲೀಕರ ವಿರುದ್ಧ ಯಾವ ಕ್ರಮಗಳನ್ನು ಜರುಗಿಸಲಿಸಲಾಗುವುದೆಂದು ಕೋರ್ಟಿಗೆ ತಿಳಿಸಿದ್ದಾರೆ. ಆದರೆ, ಇಂದಿರಾನಗರದ ಐ ಚೇಂಜ್ ನಿವಾಸಿಗಳ ಕಲ್ಯಾಣ ಸಂಸ್ಥೆಯ ಸದಸ್ಯೆಯೆಯೊಬ್ಬರು, ಪೊಲೀಸರಿಂದ ಇದುವರೆಗ ಯಾವುದೇ ಕ್ರಮ ಜರುಗಿಲ್ಲ, ಅವರು ಬಾರ್ ಮತ್ತು ರೆಸ್ಟೋರೆಂಟ್​ಗಳಲ್ಲಿನ ಉಪಕರಣಗಳನ್ನು ಸೀಜ್ ಮಾಡಬಹುದಿತ್ತು, ಅವುಗಳ ಮಾಲೀಕರನ್ನು ವಶಕ್ಕೆ ಪಡೆಯಬಹುದಿತ್ತು ಮತ್ತು ಬಾರ್​ಗಳನ್ನು ಮುಚ್ಚಿಸಬಹುದಿತ್ತು, ಆದರೆ ಪೊಲೀಸರಿಂದ ಇದ್ಯಾವುದೂ ಆಗಿಲ್ಲವೆಂದು ಹೇಳಿದ್ದಾರೆ.

ಲಭ್ಯವಿರುವ ಮಾಹಿತಿ ಪ್ರಕಾರ ಟೈಮ್ ಅಪಾರ್ಟ್​ಮೆಂಟ್ ಓನರ್ಸ್ ವೆಲ್​ಫೇರ್ ಅಸೋಸಿಯೇಷನ್​ನವರು 2019ರಲ್ಲೇ ತಮ್ಮ ಪ್ರದೇಶದಲ್ಲಿರುವ ಮೂರು ಬಾರ್​ಗಳಿಂದ ಉಂಟಾಗುತ್ತಿರುವ ಶಬ್ದಮಾಲಿನ್ಯದ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗಕ್ಕೆ ದೂರನ್ನು ಸಲ್ಲಿಸಿದ್ದರು. ಆದರೆ ಆಯೋಗವು ಅವರಿಗೆ ನ್ಯಾಯಾಂಗದ ಮೊರೆ ಹೋಗಲು ತಿಳಿಸಿತ್ತು. ಅದಾದ ನಂತರ ನಿವಾಸಿಗಳು ಬಾರ್​ಗಳ ಮಾಲೀಕರೊಂದಿಗೆ ಮಾತಾಡಿ ತಮಗಾಗುತ್ತಿರುವ ತೊಂದರೆಯನ್ನು ಹೇಳಿಕೊಂಡಿದ್ದರು. ಆದರೆ, ಮಾತುಕತೆ ಯಾವುದೇ ಫಲಿತಾಂಶ ನಿಡದೇ ಹೋದಾಗ ಸ್ಲೈ ಗ್ರ್ಯಾನಿ, ನೆವರ್​ಮೈಂಡ್ ಮತ್ತು ಒನ್ ಫಾರ್ ದಿ ರೋಡ್ ಹೆಸರಿನ ಮೂರು ಬಾರ್​ಗಳ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು. ಈ ಬಾರ್​ಗಳು ಸದರಿ ಅಪಾರ್ಟ್​ಮೆಂಟ್​ನ ಹಿಂಭಾಗದಲ್ಲಿವೆ.

‘ಪ್ರತಿ ಶುಕ್ರವಾರ, ಶನಿವಾರ ಮತ್ತು ರವಿವಾರಂದು ಈ ಬಾರ್​ಗಳಲ್ಲಿ ಬಹಳ ಜೋರಾಗಿ ಮ್ಯೂಸಿಕ್ ಹಾಕುತ್ತಾರೆ. ಈ ಮೂರು ದಿನಗಳಲ್ಲೂ ಬೆಳಗಿನ ಜಾವ 2 ಗಂಟೆಯವರೆಗೆ ಪಾರ್ಟಿಗಳು ನಡೆಯುತ್ತವೆ. ಅದಾದ ನಂತರ ಬಾರ್​ಗಳು ಮುಚ್ಚಲ್ಪಟ್ಟರೂ ಇಂಡಸ್ಟ್ರಿಯಲ್ ಗ್ರೇಡ್​ ಉಪಕರಣಗಳು ಸಹ ಜೋರಾಗಿ ಶಬ್ದ ಮಾಡುವುದರಿಂದ ನಾವೆಲ್ಲ ನಿದ್ರೆ ಮಾಡುವುದು ಸಾಧ್ಯವಾಗುತ್ತಿಲ್ಲ. ಕೆಲವು ಸಲ ವಾರದ ದಿನಗಳಲ್ಲೂ ಪಾರ್ಟಿಗಳು ನಡೆಯುತ್ತವೆ,’ ಎಂದು ತಮ್ಮ 65-ವರ್ಷ ವಯಸ್ಸಿನ ತಾಯಿಯೊಂದಿಗೆ ವಾಸಿಸುವ ಎಸ್​ ನಮನ ಎನ್ನುವವರು ಹೇಳಿದ್ದಾರೆ.

welfare association complaint

ವೆಲ್​ಫೇರ್​ ಅಸೋಸಿಯೇಷನ್ ನೀಡಿರುವ ದೂರಿನ ಪ್ರತಿ

ತಮ್ಮ ಪ್ರದೇಶದವು ಮೊದಲಿಗೆ ವಾಣಿಜ್ಜೀಕರಣಗೊಂಡಾಗ ಅಲ್ಲಿ ವಾಸಿಸುವ ನಿವಾಸಿಗಳಿಗೆ ಯಾವುದೇ ಸಮಸ್ಯೆಯಿರಲಿಲ್ಲ, ಯಾಕೆಂದರೆ ಆಗೆಲ್ಲ ಬಾರ್​ಗಳು ರಾತ್ರಿ 11 ಗಂಟೆಗೆ ಮುಚ್ಚುತ್ತಿದ್ದವು. ಆದರೆ ಬಾರ್​ ಮತ್ತು ಪಬ್​ಗಳ ವೇಳೆಯನ್ನು ರಾತ್ರಿ 1 ಗಂಟೆವರೆಗೆ ವಿಸ್ತರಿಸಿದಾಗ ಇಲ್ಲಿನ ಬಾರ್​ಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಯಿತು ಎಂದು ಸೋಶಿಯಲ್ ಅಮೆನಿಟೀಸ್ ಸಂಸ್ಥೆಯ ಇಂದಿರಾ ವಿಶ್ವನಾಥನ್ ಹೇಳುತ್ತಾರೆ.

ಬಾರ್ ಮತ್ತು ರೆಸ್ಟೋರಂಟ್​ಗಳು ಲೈವ್ ಅಥವಾ ಧ್ವನಿಮುದ್ರಿತ ಮ್ಯೂಸಿಕ್ ಬಳಸಲು ಪೊಲಲೀಸ್ ಇಲಾಖೆಯಿಂದ ಪರವಾನಗಿ ಪಡೆಯಬೇಕಾಗುತ್ತದೆ. ಪರವಾನಿಗೆ ಪಡೆಯದೆ ಮ್ಯೂಸಿಕ್ ಉಪಯೋಗಿದರೆ ಪೊಲೀಸರು ಅಂಥ ಬಾರ್​ಗಳನ್ನು ಮುಚ್ಚಬಹುದಾಗಿದೆ. ಪರವಾನಗಿ ಪಡೆಯಬೇಕಾದರೆ ಬಾರ್ ಮಾಲೀಕರು ವಾಸ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ ಮತ್ತು ಈ ಪ್ರಮಾಣಪತ್ರವನ್ನು ಪಡೆಯಲು ಕಟ್ಟಡ ನಿಯಾಮಾವಳಿಗಳನ್ನು ಪಾಲಿಸಿರಬೇಕಾಗುತ್ತದೆ ಎಂದು ಇಂದಿರಾ ಹೇಳುತ್ತಾರೆ.

ನಿಯಮಗಳ ಪ್ರಕಾರ ಬಾರ್​ಗಳು ತಮ್ಮಲ್ಲಿಗೆ ಬರುವ ಗ್ರಾಹಕರಿಗೆ ತಮ್ಮದೇ ಅದ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕಾಗುತ್ತದೆ. ಬಾರ್​ಗಳು ಪಾರ್ಕಿಂಗ್​ಗಾಗಿ ಸೆಲ್ಲರ್​​ಗಳನ್ನು ನಿರ್ಮಿಸಿಕೊಳ್ಳಬೇಕು. ಆದರೆ, ಇಂದಿರಾನಗರದ ಬಾರ್​ ಮಾಲೀಕರು ಈ ನಿಯಮವನ್ನು ಗಾಳಿಗೆ ತೂರಿದ್ದರಿಂದ ಗ್ರಾಹಕರು ಬೇಕಾಬಿಟ್ಟಿಯಾಗಿ ತಮ್ಮ ವಾಹನಗಳನ್ನು ಪಾರ್ಕ್​ ಮಾಡುತ್ತಾರೆ. ಸ್ಲೈ ಗ್ರ್ಯಾನಿ ಬಾರ್ ಹಿಂಭಾಗದಲ್ಲಿ ವಾಸಿಸುವ ಡಾ ಆದರ್ಶ್ ಅವರು, ಈ ಬಾರ್​ಗೆ ಬರುವ ಗ್ರಾಹಕರು ತಮ್ಮ ಮನೆಯ ಮುಂದೆ ವಾಹನಗಳನ್ನು ಪಾರ್ಕ್ ಮಾಡುತ್ತಾರೆ, ಇದರಿಂದ ತಮಗೆ ತುಂಬಾ ಸಮಸ್ಯೆಯಾಗುತ್ತಿದೆ ಅಂತ ಹೇಳಿದ್ದಾರೆ.

ಬಾರ್​ಗಳ ಮಾಲೀಕರು ಸುರಕ್ಷತೆಯ ಕ್ರಮಗಳನ್ನೂ ದಿವ್ಯವಾಗಿ ನಿರ್ಲಕ್ಷಿಸಿದ್ದಾರೆ ಎಂದು ಡಾ ಆದರ್ಶ್ ಹೇಳುತ್ತಾರೆ. ಸ್ಲೈ ಗ್ರ್ಯಾನಿ ಬಾರ್ ಮಾಲೀಕರು ನಿಯಮಗಳಿಗೆ ವಿರುದ್ಧವಾಗಿ ನೆಲಮಾಳಿಗೆಯಲ್ಲಿ ಡೀಸೆಲ್ ಜನರೇಟರ್ ಮತ್ತು ಶೈತ್ಯಾಗಾರಗಳನ್ನು ಇಟ್ಟಿದ್ದಾರೆ. ಇದು ಕಾನೂನುಬಾಹಿರ ಮತ್ತು ನೆರೆಹೊರೆಯ ಮನೆಗಳಿಗೆ ಅಪಾಯಕ್ಕೆ ಈಡುಮಾಡುವಂಥ ಕೆಲಸವಾದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂತ ಅವರು ಹೇಳುತ್ತಾರೆ.

ರಾತ್ರಿ ಕಿವಿಗಡಚಿಕ್ಕುವಂಥ ಮ್ಯೂಸಿಕ್ ಶುರುವಾದಾಗ ನಿವಾಸಿಗಳು ಪೊಲೀಸರಿಗೆ ಫೋನ್ ಮಾಡಿದರೆ ಅವರು ಬಂದು ಸಂಗೀತವನ್ನು ನಿಲ್ಲಿಸುತ್ತಾರಂತೆ. ಆದರೆ ಅದು ತಾತ್ಕಾಲಿಕ ಮಾತ್ರ, ಅರ್ಧ ಗಂಟೆಯ ನಂತರ ಪುನಃ ಅದು ಶುರುವಾಗುತ್ತದೆ ಅಂತ ಆದರ್ಶ್ ಹೇಳುತ್ತಾರೆ. ಹಾಗೆಯೇ ಮ್ಯೂಸಿಕ್ ವಿಷಯದಲ್ಲಿ ಅಲ್ಲಿರುವ ಬಾರ್​ಗಳು ಪರಸ್ಪರ ದೂಷಿಸಿಕೊಳ್ಳುತ್ತವೆ, ಅವರು ತಮ್ಮ ಬಾರ್​ಗಳನ್ನು ಮುಚ್ಚಲಿ ಅಂತ ಅಲ್ಲಿನ ನಿವಾಸಿಗಳೇನೂ ಹೇಳುತ್ತಿಲ್ಲ, ಅದರೆ ಒಂದಷ್ಟು ಹೊಂದಾಣಿಕೆ ಮಾಡಿಕೊಳ್ಳಲಿ ಅನ್ನುತ್ತಿದ್ದಾರೆ ಎಂದು ಆದರ್ಶ್ ಹೇಳುತ್ತಾರೆ. ಮ್ಯೂಸಿಕ್ ಸಿಸ್ಟಂಗಳನ್ನು ಸೀಜ್ ಮಾಡುವ ಅಧಿಕಾರ ಪೊಲೀಸರಿಗಿದ್ದರೂ ಅವರು ಆ ಕೆಲಸ ರಾಜ್ಯ ಪರಿಸರ ಮಾಲಿನ್ಯ ಮಂಡಳಿಯದ್ದು ಅಂತ ಹೇಳುತ್ತಾರೆ ಎಂದು ಇಂದಿರಾ ದೂರುತ್ತಾರೆ.

2019ರಿಂದ ಈ ನಿವಾಸಿಗಳು ಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆಗೆ ಹಾಜರಾಗುತ್ತಿದ್ದಾರೆ. 2020ರಲ್ಲಿ ಒಂದು ತಾತ್ಕಾಲಿಕ ಆದೇಶ ಹೊರಬಿದ್ದಿದೆ. ಆದರೆ, ಹೈಕೋರ್ಟಿನ ಅಂತಿಮ ಆದೇಶಕ್ಕಾಗಿ ತಾವು ಕಾಯುತ್ತಿದ್ದು ಅದು ಬಂದ ಮೇಲೆ ಇಂದಿರಾನಗರದಲ್ಲಿರುವ ಎಲ್ಲ ಅಕ್ರಮ ಬಾರ್​ಗಳು ಮುಚ್ಚಲಿವೆ ಎಂಬ ಭರವಸೆ ನಿವಾಸಿಗಳಿಗಿದೆ.

ಇದನ್ನೂ ಓದಿಸಿಸಿಬಿ ವಶದಲ್ಲಿದ್ದ ಜಾಗ್ವಾರ್ ಕಾರು ಮಾರಿದ ಇಬ್ಬರು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್​