ಐಪಿಎಲ್ 13ನೇ ಆವೃತ್ತಿಯಲ್ಲಿ ಈಗ ಉಳಿದಿರುವುದು ಪಟ್ಟಾಭಿಷೇಕದ ಅಂಕ ಮಾತ್ರ! It’s coronation time in IPL season 13
ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತ್ತಿಯ ಪಟ್ಟಾಭಿಷೇಕದ ಸಮಯಕ್ಕೆ ನಾವು ಹತ್ತಿರವಾಗಿದ್ದೇವೆ. 52 ದಿನಗಳು, 56 ಲೀಗ್ ಹಂತದ ಪಂದ್ಯಗಳು, ಕ್ವಾಲಿಫೈಯರ್ 1, ಎಲಿಮಿನೇಟರ ಮತ್ತು ಕ್ವಾಲಿಫೈಯರ್ 2 ಪಂದ್ಯಗಳ ನಂತರ ಅಂತಿಮವಾಗಿ ನಾಳೆ ಈ ಸೀಸನ್ನ ಚಾಂಪಿಯನ್ಶಿಪ್ಗಾಗಿ ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಅಂತಿಮ ಪಂದ್ಯ ನಡೆಯಲಿದೆ. ಎರಡು ಅತ್ಯಂತ ಅರ್ಹ ತಂಡಗಳು ಫೈನಲ್ ತಲುಪಿದ್ದು, ಮುಂಬೈ 5 ನೇ ಬಾರಿ ಪ್ರಶಸ್ತಿ ಗೆಲ್ಲುವ ಹವಣಿಕೆಯಲ್ಲಿದ್ದರೆ, ಇದೇ ಮೊದಲ ಬಾರಿಗೆ ಪೈನಲ್ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಕಪ್ […]

ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತ್ತಿಯ ಪಟ್ಟಾಭಿಷೇಕದ ಸಮಯಕ್ಕೆ ನಾವು ಹತ್ತಿರವಾಗಿದ್ದೇವೆ. 52 ದಿನಗಳು, 56 ಲೀಗ್ ಹಂತದ ಪಂದ್ಯಗಳು, ಕ್ವಾಲಿಫೈಯರ್ 1, ಎಲಿಮಿನೇಟರ ಮತ್ತು ಕ್ವಾಲಿಫೈಯರ್ 2 ಪಂದ್ಯಗಳ ನಂತರ ಅಂತಿಮವಾಗಿ ನಾಳೆ ಈ ಸೀಸನ್ನ ಚಾಂಪಿಯನ್ಶಿಪ್ಗಾಗಿ ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಅಂತಿಮ ಪಂದ್ಯ ನಡೆಯಲಿದೆ. ಎರಡು ಅತ್ಯಂತ ಅರ್ಹ ತಂಡಗಳು ಫೈನಲ್ ತಲುಪಿದ್ದು, ಮುಂಬೈ 5 ನೇ ಬಾರಿ ಪ್ರಶಸ್ತಿ ಗೆಲ್ಲುವ ಹವಣಿಕೆಯಲ್ಲಿದ್ದರೆ, ಇದೇ ಮೊದಲ ಬಾರಿಗೆ ಪೈನಲ್ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಕಪ್ ತನ್ನದಾಗಿಸಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸಲಿದೆ.
ಕೊವಿಡ್-19 ಮಹಾಮಾರಿಯಿಂದಾಗಿ, ಐಪಿಎಲ್ 2020 ಆಯೋಜನೆಗೊಳ್ಳುವ ಬಗ್ಗೆಯೇ ಪ್ರಶ್ನೆ ಉದ್ಭವಿಸಿತ್ತು. ಆದರೆ, ವಿಶ್ವದ ಅತ್ಯಂತ ಜನಪ್ರಿಯ ಮತ್ತು ಅತಿ ದೊಡ್ಡ ಕ್ರೀಡಾ ಈವೆಂಟ್ಗಳಲ್ಲೊಂದಾಗಿರುವ ಐಪಿಎಲ್ ಅನ್ನು ವಿದೇಶಕ್ಕೆ ಶಿಫ್ಟ್ ಮಾಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಾಲಿ ಮೈದಾನಗಳ ಹೊರತಾಗಿಯೂ ಟೂರ್ನಮೆಂಟನ್ನು ಅತ್ಯಂತ ಯಶಸ್ವೀಯಾಗಿ ನಡೆಯುವಂತೆ ನೋಡಿಕೊಂಡಿತು. ಟೂರ್ನಿಯುದ್ದಕ್ಕೂ ಯಾವುದೇ ನ್ಯೂನತೆಗಳು ಕಂಡುಬರಲಿಲ್ಲ. ಇದರ ಶ್ರೇಯಸ್ಸು ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೂ ಸಲ್ಲುತ್ತದೆ.
ಮುಂಬೈ, ಲೀಗ್ ಹಂತದ 14 ಪಂದ್ಯಗಳ ಪೈಕಿ 9ರಲ್ಲಿ ಗೆದ್ದು ನಂತರ ಕ್ವಾಲಿಫೈಯರ್ 1ರಲ್ಲಿ ಇದೇ ಡೆಲ್ಲಿಯನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಮೊದಲ ಸುತ್ತಿನ ಪಂದ್ಯಗಳಲ್ಲಿ ಚಾಂಪಿಯನ್ ಟೀಮಿನಂತೆ ಆಡಿ ಎರಡನೇ ಸುತ್ತಿನಲ್ಲಿ ಅಸ್ಥಿರ ಪ್ರದರ್ಶನಗಳನ್ನು ನೀಡಿ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನ ಪಡೆದ ಡೆಲ್ಲಿ ಮೊದಲ ಕ್ವಾಲಿಫೈಯರ್ನಲ್ಲಿ ಮುಂಬೈಗೆ ಸೋತರೂ, ರವಿವಾರದಂದು, ಕ್ವಾಲಿಫೈಯರ್ 2ರಲ್ಲಿ ಸನ್ರೈಸರ್ಸ್ ಹೈದರಾಬಾದನ್ನು 17ರನ್ಗಳಿಂದ ಸೋಲಿಸಿ ಟೂರ್ನಿಯ ಇತಿಹಾಸದಲ್ಲೇ ಮೊದಲಬಾರಿಗೆ ಫೈನಲ್ ಪ್ರವೇಶಿದೆ. ಗಮನಿಸಬೇಕಿರುವ ಅಂಶವೆಂದರೆ, ಈ ಸೀಸನಲ್ಲಿ ಡೆಲ್ಲಿ ಮತ್ತು ಮುಂಬೈ 3 ಸಲ ಮುಖಾಮುಖಿಯಾಗಿವೆ ಮತ್ತು ಪ್ರತಿ ಸಲ ರೋಹಿತ್ ಶರ್ಮ ಟೀಮು ಮೇಲುಗೈ ಸಾಧಿಸಿದೆ. ನಾಲ್ಕನೇ ಬಾರಿಯಾದರೂ ವಿಜಯಲಕ್ಷ್ಮಿ ಶ್ರೇಯಸ್ ಅಯ್ಯರ್ಗೆ ಒಲಿಯುವಳೇ ಎನ್ನುವುದು ಕಾದು ನೋಡಬೇಕಿದೆ.
ಮುಂಬೈ ನಿಸ್ಸಂದೇಹವಾಗಿ ಸರ್ವಾಂಗ ಪ್ರಬಲ ಟೀಮಾಗಿದೆ. ಈ ತಂಡದ ಬ್ಯಾಟ್ಸ್ಮನ್ಗಳು ಟೂರ್ನಿಯಲ್ಲಿ ಇದುವರೆಗೆ 130 ಸಿಕ್ಸ್ರ್ಗಳನ್ನು ಚಚ್ಚಿದ್ದರೆ, ಡೆಲ್ಲಿಯ ಆಟಗಾರರು 84 ಬಾರಿಸಿದ್ದಾರೆ. ಮುಂಬೈ ಟೀಮಿನ ಪ್ರಾಮಿಸಿಂಗ್ ಆಟಗಾರ ಇಶಾನ್ ಕಿಶನ್ ಅವರೊಬ್ಬರ ಬ್ಯಾಟ್ನಿಂದಲೇ 29 ಸಿಕ್ಸ್ರ್ಗಳು ಸಿಡಿದಿವೆ. ಟೂರ್ನಿಯಲ್ಲಿ ಸತತವಾಗಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಿರುವ ಸೂರ್ಯಕುಮಾರ್ ಯಾದವ್ ಇದುವರೆಗೆ 60 ಬೌಂಡರಿ ಮತ್ತು 10 ಸಿಕ್ಸ್ರ್ಗಳನ್ನು ಬಾರಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಚೇಸ್ ಮಾಡುತ್ತಿದ್ದಾಗ ಕ್ರೀಸ್ನಲ್ಲಿದ್ದ ಸೂರ್ಯ, ‘ನಾನಿದ್ದೀನಿ, ನಿಶ್ಚಿಂತರಾಗಿರಿ,’ ಅಂತ ಡಗೌಟ್ನಲ್ಲಿದ್ದ ತಮ್ಮ ಜೊತೆ ಆಟಗಾರರಿಗೆ ಸನ್ನೆ ಮಾಡಿದ ದೃಶ್ಯ ಮಹಾರಾಷ್ಟ್ರದಲ್ಲಿ ಮನೆಮಾತಾಗಿಬಿಟ್ಟಿದೆ.
ಆರಂಭ ಆಟಗಾರ, ಕ್ವಿಂಟನ್ ಡಿ ಕಾಕ್ ಉತ್ತಮ ಸ್ಪರ್ಶದಲ್ಲಿರುವುದು ಮಿಡ್ಲ್ ಆರ್ಡ್ರ್ ಮೇಲಿನ ಒತ್ತಡ ಕಡಿಮೆಯಾಗಿದೆ. ಹಾಗಾಗಿ, ಯಾದವ್, ಕಿಶನ್, ಪಾಂಡೆ ಸಹೋದರರು ಮತ್ತು ಕೈರನ್ ಪೊಲ್ಲಾರ್ಡ್ ನಿರ್ಭೀತಿಯಿಂದ ಆಡುತ್ತಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ, ರೋಹಿತ್ ಆಡುತ್ತಿರುವುದು ಬಿಸಿಸಿಐ ಕಣ್ಣು ಕೆಂಪಾಗಿಸಿದೆ. ಫಿಟ್ನೆಸ್ ಹಿನ್ನೆಲೆಯಲ್ಲಿ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಿಲ್ಲ. ಅವರ ಗಾಯ ಮತ್ತು ಚೇತರಿಕೆ ಮೇಲೆ ನಿಗಾ ಇಟ್ಟಿರುವ ಮಂಡಳಿಯ ಮೆಡಿಕಲ್ ಟೀಮ್ ರೋಹಿತ್ ಫಿಟ್ನೆಸ್ ಕುರಿತು ಏನು ವರದಿ ನೀಡಿದೆ ಅಂತ ಹೊರಗಿನವರಿಗೆ ಗೊತ್ತಾಗಿಲ್ಲ.
ಜಸ್ಪ್ರೀತ್ ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್ ಜೋಡಿಯನ್ನು ಎದುರು ಪವರ್ ಪ್ಲೇನಲ್ಲಿ ರನ್ ಕಲೆಹಾಕುವುದು ಡೆಲ್ಲಿ ಟೀಮಿನ ಬ್ಯಾಟ್ಸ್ಮನ್ಗಳಿಗೆ ಸುಲಭವಾಗಲಾರದು. ಆಫ್ಕೋರ್ಸ್, ಶಿಖರ್ ಧವನ್ (ಈ ಸೀಸನಲ್ಲಿ 603 ರನ್ ಬಾರಿಸಿದ್ದಾರೆ) ಅಮೋಘವಾದ ಟಚ್ನಲ್ಲಿದ್ದಾರೆ. ನಿನ್ನೆ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಮಾರ್ಕಸ್ ಸ್ಟಾಯ್ನಿಸ್ 27 ಎಸೆತಗಳಲ್ಲಿ 38ರನ್ ಬಾರಿಸಿ ತಮಗೆ ನೀಡಿದ ಬಡ್ತಿಯನ್ನು ಸಮರ್ಥಿಸಿಕೊಂಡರು. ಐಪಿಎಲ್2020ಯಲ್ಲಿ 352 ರನ್ ಬಾರಿಸಿ 12 ವಿಕೆಟ್ ಪಡೆದಿರುವ ಆಸ್ಸೀಯಿಂದ ಡೆಲ್ಲಿ ಟೀಮಿಗೆ ಅದ್ಭುತವಾದ ಬ್ಯಾಲೆನ್ಸ್ ಸಿಕ್ಕಿದೆ.
ಡೆಲ್ಲಿಯ ಬಿಗ್ ಹಿಟ್ಟರ್ ರಿಷಬ್ ಪಂತ್ರಿಂದ ನಿರೀಕ್ಷಿತ ಪ್ರದರ್ಶನಗಳು ಬರುತ್ತಿಲ್ಲ. ಭಾರಿ ಹೊಡೆತಗಳ ಮತ್ತೊಬ್ಬ ಆಟಗಾರ ಶಿಮ್ರನ್ ಹೆಟ್ಮೆಯರ್ ಇಡೀ ಟೂರ್ನಿಯಲ್ಲಿ ನಿರಾಶಾದಾಯಕ ಆಟವಾಡಿದ್ದಾರೆ. ನಾಯಕ ಅಯ್ಯರ್ ಇದುವರೆಗೆ ಆಡಿರುವ 16 ಪಂದ್ಯಗಳಲ್ಲಿ 2 ಅರ್ಧಶತಕಗಳೊಂದಿಗೆ 454 ರನ್ ಶೇಖರಿಸಿದ್ದಾರೆ. ಅವರು ಬಿಗ್ ಮ್ಯಾಚ್ ಪ್ಲೇಯರ್ ಆಗಿರುವುದರಿಂದ ನಾಳಿನ ಪಂದ್ಯದಲ್ಲಿ ಪರಾಕ್ರಮ ಮೆರೆಯಬಹುದು.
ಡೆಲ್ಲಿಯ ವೇಗದ ಬೌಲರ್ಗಳಾದ ಕಗಿಸೊ ರಬಾಡ ಮತ್ತು ಌನ್ರಿಖ್ ನೊರ್ಕಿಯ ಯಾರಿಗೂ ಕಮ್ಮಿಯಿಲ್ಲ. ಈ ಜೋಡಿ ಮುಂಬೈ ಬ್ಯಾಟ್ಸ್ಮನ್ಗಳಿಗೆ ತೊಂದರೆ ನೀಡುವುದು ನಿಶ್ಚಿತ. ನಾಳೆ, ರವಿಚಂದ್ರನ್ ಅಶ್ವಿನ್ ಮತ್ತು ರೋಹಿತ್ ನಡುವೆ ಬಾಯಲ್ಲಿ ನೀರೂರಿಸುವ ಸೆಣಸಾಟ ನಡೆಯುವ ಸಾಧ್ಯತೆ ಇದ್ದೇಯಿದೆ.




