ರೇಪ್ಗಳಿಗೆ ಪಾಲಕರೇ ಕಾರಣವೆಂದ ಜೆಎಮ್ಎಮ್ ಶಾಸಕ!
ಜಾರ್ಖಂಡ್ನಲ್ಲಿ ಆಡಳಿತರೂಢ ಜೆಎಮ್ಎಮ್ ಪಕ್ಷದ ಲೊಮಿನ್ ಹೆಂಬ್ರೊಮ್ ಎಂಬ ಹೆಸರಿನ ಶಾಸಕ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಅಪಹರಣದಂಥ ಪ್ರಕರಣಗಳು ಹೆಚ್ಚಾಗಲು ಹೆಣ್ಣುಮಕ್ಕಳ ತಂದೆತಾಯಿಗಳೇ ಕಾರಣ ಎಂಬ ಆಘಾತಕಾರಿ ಹೇಳಿಕೆ ನೀಡಿ ತಮ್ಮ ಸರ್ಕಾರವನ್ನು ಮುಜುಗರಕ್ಕೆ ನೂಕಿದ್ದಾರೆ. ಕಳೆದ ವಾರ ರಾಜ್ಯದ ದುಮ್ಕಾ ಎಂಬಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಹೆಂಬ್ರೊಮ್ ಹಾಗೆ ಹೇಳಿದ್ದಾರೆ. ಇದೇ ಕ್ಷೇತ್ರದಲ್ಲಿ ವಿಧಾನಸಭೆಗೆ ಉಪಚುನಾವಣೆ ನಡೆಯುತ್ತಿರುವುದರಿಂದ ಜೆಎಮ್ಎಮ್ ಪಕ್ಷ ಅವರ ಹೇಳಿಕೆಗೆ ಬಹಳ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದೆ. ಆದರೆ […]
ಜಾರ್ಖಂಡ್ನಲ್ಲಿ ಆಡಳಿತರೂಢ ಜೆಎಮ್ಎಮ್ ಪಕ್ಷದ ಲೊಮಿನ್ ಹೆಂಬ್ರೊಮ್ ಎಂಬ ಹೆಸರಿನ ಶಾಸಕ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಅಪಹರಣದಂಥ ಪ್ರಕರಣಗಳು ಹೆಚ್ಚಾಗಲು ಹೆಣ್ಣುಮಕ್ಕಳ ತಂದೆತಾಯಿಗಳೇ ಕಾರಣ ಎಂಬ ಆಘಾತಕಾರಿ ಹೇಳಿಕೆ ನೀಡಿ ತಮ್ಮ ಸರ್ಕಾರವನ್ನು ಮುಜುಗರಕ್ಕೆ ನೂಕಿದ್ದಾರೆ.
ಕಳೆದ ವಾರ ರಾಜ್ಯದ ದುಮ್ಕಾ ಎಂಬಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಹೆಂಬ್ರೊಮ್ ಹಾಗೆ ಹೇಳಿದ್ದಾರೆ. ಇದೇ ಕ್ಷೇತ್ರದಲ್ಲಿ ವಿಧಾನಸಭೆಗೆ ಉಪಚುನಾವಣೆ ನಡೆಯುತ್ತಿರುವುದರಿಂದ ಜೆಎಮ್ಎಮ್ ಪಕ್ಷ ಅವರ ಹೇಳಿಕೆಗೆ ಬಹಳ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದೆ. ಆದರೆ ವಿರೋಧಪಕ್ಷವಾಗಿರುವ ಬಿಜೆಪಿ ಶಾಸಕ ಹೆಂಬ್ರೊಮ್ ಸರ್ಕಾರ ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಒಬ್ಬ ಶಾಸಕ ಅಂಥ ಬೇಜವಾಬ್ದಾರಿ ಹೇಳಿಕೆ ನೀಡಿರುವುದು ದುರದೃಷ್ಟಕರ ಎಂದಿದೆ.
ದುಮ್ಕಾ ಕ್ಷೇತ್ರದಲ್ಲಿ ಮಾಧ್ಯಮದವರೊಂದಿಗೆ ಮಾತಾಡುವಾಗ ಹೆಂಬ್ರೊಮ್, ‘‘ಯೌವನಸ್ಥ ಮಕ್ಕಳು ಗಾಂಜಾ ಸೇವಿಸಿ ಮನೆಗೆ ಬಂದಾಗ ಪಾಲಕರು ಸುಮ್ಮನಿದ್ದುಬಿಡುತ್ತಾರೆ. ಈಗ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಇದೆ. ಹುಡುಗ–ಹುಡುಗಿಯರು ಮೇಲಿಂದ ಮೇಲೆ ಫೋನಲ್ಲಿ ಮಾತಾಡುತ್ತಲೇ ಇರುತ್ತಾರೆ, ಆದರೆ ತಂದೆ–ತಾಯಿಗಳು ತುಟಿಪಿಟಿಕ್ಕೆನ್ನುವುದಿಲ್ಲ. ವಯಸ್ಸಿಗೆ ಬಂದ ಹುಡುಗಿಯೊಬ್ಬಳು ಸಾಯಂಕಾಲದ ಹೊತ್ತು ಮನೆಯಿಂದ ಹೊರಗಡೆ ಹೋದರೆ ಅದಕ್ಕೆ ಪಾಲಕರು ಹೊಣೆಗಾರರಲ್ಲವೇ? ಇಂಥ ಘಟನೆಗಳು (ದಮ್ಕಾ ಗ್ಯಾಂಗ್-ರೇಪ್ ಮತ್ತು ಕೊಲೆ) ನಡೆದಾಗಲೇ ಅವರು ನಿದ್ರೆಯಿಂದ ಎಚ್ಚೆತ್ತುಕೊಳ್ಳುತ್ತಾರೆ,’’ ಅಂತ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ, ಜೆಎಮ್ಎಮ್ ನೇತೃತ್ವದ ಸಮ್ಮಿಶ್ರ ಸರ್ಕಾರ ತೆಗೆದುಕೊಂಡಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಹೆಂಬ್ರೊಮ್, ಅತ್ಯಾಚಾರದ ಬಗ್ಗೆ ದೂರು ದಾಖಲಾದ ಕೂಡಲೇ ಪೊಲೀಸ್ ಕಾರ್ಯಾಚರಣೆ ನಡೆಸಿದೆ ಎಂದು ಹೇಳಿದ್ದಾರೆ.
ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಜಾರ್ಖಂಡ್ ಬಿಜೆಪಿ ವಕ್ತಾರ ಪ್ರತುಲ್ ಶಾದೇವ್, ‘‘ಶಾಸಕರ ಹೇಳಿಕೆ ಹೇವರಿಕೆ ಹುಟ್ಟಿಸುತ್ತದೆ. ಇವರೆಲ್ಲ ಸೇರಿ ಜಾರ್ಖಂಡನ್ನು ತಾಲಿಬಾನ್ ಆಗಿ ಪರಿವರ್ತಿಸಲು ನಿರ್ಧರಿಸಿರುವಂತಿದೆ,’’ ಎಂದಿದ್ದಾರೆ.
ಜೆಎಮ್ಎಮ್ ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ಪಾಂಡೆ ತಮ್ಮ ಹೇಳಿಕೆಯಲ್ಲಿ,‘‘ಸಮಾಜದ ಕೆಡಕುಗಳ ಬಗ್ಗೆ ಹೆಂಬ್ರೊಮ್ ಮಾತಾಡಿದ್ದಾರೆ, ಪಕ್ಷದ ನಾಯಕರು ಅವರ ಜೊತೆ ಈಗಾಗಲೇ ಮಾತಾಡಿದ್ದು ಅವರು ನೀಡಿರುವ ಸ್ಪಷ್ಟೀಕರಣದಿಂದ ಸಂತೃಪ್ತರಾಗಿದ್ದಾರೆ,’’ ಎಂದು ಹೇಳಿದ್ದಾರೆ.